ಬೆಂಗಳೂರು (ಸೆ.20): ಕೊರೋನಾ ಆರಂಭದ ಅವಧಿಯಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು 1,600 ಕೋಟಿ ರು. ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ 20 ಲಕ್ಷ ಕೋಟಿ ರು. ಪ್ಯಾಕೇಜ್‌ ಘೋಷಿಸಿದ್ದರು. ಈ ಪೈಕಿ ಯಾವ ಕ್ಷೇತ್ರಗಳ ಜನರಿಗೆ ಎಷ್ಟೆಷ್ಟುತಲುಪಿದೆ ಎಂಬುದರ ಬಗ್ಗೆ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಒತ್ತಾಯ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಧಾನಮಂತ್ರಿ ಹಾಗೂ ಕೇಂದ್ರ ಹಣಕಾಸು ಸಚಿವರು ಘೋಷಣೆ ಮಾಡಿದ್ದ 20 ಲಕ್ಷ ಕೋಟಿ ರು. ಪ್ಯಾಕೇಜ್‌ನಲ್ಲಿ ರಾಜ್ಯಕ್ಕೆ ಎಷ್ಟುಹಣ ಬಂದಿದೆ. ಈ ಪ್ಯಾಕೇಜ್‌ನಿಂದ ರಾಜ್ಯದಲ್ಲಿ ಯಾವಾಗ? ಯಾರಿಗೆ? ಎಷ್ಟುಪ್ರಮಾಣದ ಹಣಕಾಸು ನೆರವು ನೀಡಲಾಗಿದೆ ಎಂಬುದನ್ನು ತಿಳಿಸಬೇಕು. ಅಲ್ಲದೆ, ಮುಖ್ಯಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳು ಬ್ಯಾಂಕ್‌ಗಳ ಜತೆ ಎಷ್ಟುಸಭೆ ನಡೆಸಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿ ಹಾಗೂ ಪಿಎಂ ಕೇರ್‌ ನಿಧಿಯ ದೇಣಿಗೆಯನ್ನು ರಾಜ್ಯದ ಜನರಿಗೆ ಯಾವ ರೀತಿ ಒದಗಿಸಿದ್ದಾರೆ ಎಂಬುದನ್ನು ತಿಳಿಸಬೇಕು. 1,610 ಕೋಟಿ ರು. ಪ್ಯಾಕೇಜ್‌ ಘೋಷಿಸಿದ್ದ ಮುಖ್ಯಮಂತ್ರಿಗಳು ಚಾಲಕರಿಗೆ, ಸವಿತಾ ಸಮಾಜದವರಿಗೆ, ಮಡಿವಾಳರಿಗೆ ಎಷ್ಟುಪರಿಹಾರ ನೀಡಿದ್ದಾರೆಂಬ ಬಗ್ಗೆ ಅಂಕಿ-ಅಂಶ ನೀಡಲಿ’ ಎಂದು ಒತ್ತಾಯಿಸಿದರು.

ಅನುದಾನ ತರುವ ಪ್ರಯತ್ನವನ್ನೇ ಮಾಡಿಲ್ಲ:

‘ಕೊರೋನಾ ನಿರ್ವಹಣೆ ಹಾಗೂ ಕೊರೋನಾದಿಂದ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಜನರ ಕಷ್ಟಗಳಿಗೆ ಸ್ಪಂದಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೇಂದ್ರದಿಂದ ಬರಬೇಕಿರುವ ನ್ಯಾಯಯುತ ಅನುದಾನಗಳನ್ನು ಪಡೆಯಲೂ ಸಹ ಮುಖ್ಯಮಂತ್ರಿಗಳಿಗೆ ಶಕ್ತಿ ಇಲ್ಲ. ಸರ್ವಪಕ್ಷ ನಿಯೋಗ ಕರೆದೊಯ್ಯುವಂತೆ ಮನವಿ ಮಾಡಿದರೂ ಸ್ಪಂದಿಸದೆ ಒಬ್ಬರೇ ಪ್ರಧಾನಮಂತ್ರಿಗಳ ಬಳಿಗೆ ಹೋಗಿ ಬಂದಿದ್ದಾರೆ. ಅವರು ಜನರ ಬೇಡಿಕೆ, ಅನುದಾನದ ತರುವ ಪ್ರಯತ್ನವನ್ನೇ ಮಾಡಿಲ್ಲ’ ಎಂದು ಟೀಕಿಸಿದರು.

60 ನಾಯಕರು ಕಾಂಗ್ರೆಸ್ ಸೇರಲು ಅರ್ಜಿ: ಪಕ್ಷಾಂತರ ಪರ್ವಕ್ಕೆ ಮುನ್ನುಡಿ ಬರೆದ ಜೆಡಿಎಸ್ ನಾಯಕ ..

‘ಈ ಹಿಂದೆ ಸಂಸತ್‌, ವಿಧಾನಮಂಡಲ ಅಧಿವೇಶನ ನಡೆಯುವ ಸಮಯದಲ್ಲಿ ಎಲ್ಲ ಪಕ್ಷದ ಸದಸ್ಯರನ್ನು ಕರೆದು ರಾಜ್ಯದ ಹಿತದ ಬಗ್ಗೆ ಚರ್ಚೆ ಮಾಡುವ ಸಂಪ್ರದಾಯವಿತ್ತು.ಈ ಬಾರಿ ಅಧಿವೇಶನ ನಡೆಯುವಾಗ ಮುಖ್ಯಮಂತ್ರಿಗಳು ದೆಹಲಿಗೆ ಹೋಗಿದ್ದರೂ ಯಾವ ಸಂಸದರನ್ನೂ ಕರೆದು ಸಭೆ ಮಾಡಿಲ್ಲ. ಕನಿಷ್ಠ ಬಿಜೆಪಿ ಸಂಸದರನ್ನೇ ಕರೆದುಕೊಂಡು ಹೋಗಿ ಕೇಂದ್ರದ ಮೇಲೆ ಒತ್ತಡ ಹೇರಲು ಸಹ ಯಡಿಯೂರಪ್ಪ ವಿಫಲರಾಗಿದ್ದಾರೆ’ ಎಂದರು.

ಅಧಿವೇಶನದಲ್ಲಿ ಪ್ರಶ್ನಿಸುತ್ತೇವೆ:

ಈ ಬಾರಿಯ ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳನ್ನು ಚರ್ಚಿಸಲಿದ್ದೇವೆ. ಕೊರೋನಾ ಸಮಯದಲ್ಲಿ ಸರ್ಕಾರ ಎಷ್ಟುಆದೇಶ, ಘೋಷಣೆಗಳನ್ನು ಮಾಡಿತ್ತು. ಅದರಲ್ಲಿ ಎಷ್ಟುಕಾರ್ಯರೂಪಕ್ಕೆ ಬಂದಿವೆ ಎಂಬ ಮಾಹಿತಿಯನ್ನು ಕೇಳಿ ಪ್ರಶ್ನೆ ಮಾಡುತ್ತೇವೆ ಎಂದು ಹೇಳಿದರು.