‘ಮತ್ತೆ ಆಪರೇಷನ್ ನಡೆಸಿದ್ರೆ ಜನ ಅಟ್ಟಾಡಿಸಿ ಹೊಡೀತಾರೆ’
ರಾಜ್ಯದಲ್ಲಿ ಮತ್ತೇನಾದರೂ ‘ಆಪರೇಷನ್ ಕಮಲ’ ಮಾಡಲು ಮುಂದಾದರೆ ಬಿಜೆಪಿಗರನ್ನು ಜನ ಅಟ್ಟಾಡಿಸಿಕೊಂಡು ಹೊಡೆಯಲಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ
ಬಾಗಲಕೋಟೆ/ಹುಬ್ಬಳ್ಳಿ [ಡಿ.06] : ಉಪ ಚುನಾವಣೆ ಬಳಿಕ ರಾಜ್ಯದಲ್ಲಿ ಮತ್ತೊಂದು ಸುತ್ತಿನ ‘ಆಪರೇಷನ್ ಕಮಲ’ ನಡೆಯಲಿದೆ ಎಂಬ ಸುದ್ದಿಗಳಿಗೆ ಸಂಬಂಧಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಮತ್ತೇನಾದರೂ ‘ಆಪರೇಷನ್ ಕಮಲ’ ಮಾಡಲು ಮುಂದಾದರೆ ಬಿಜೆಪಿಗರನ್ನು ಜನ ಅಟ್ಟಾಡಿಸಿಕೊಂಡು ಹೊಡೆಯಲಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಾಗಲಕೋಟೆ ಹಾಗೂ ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದು ಕೂತಿದ್ದಾರೆ. ಅವರಿಗೆ ಯಾವತ್ತೂ ಜನ ಆಶೀರ್ವದಿಸಿಯೇ ಇಲ್ಲ. ಹಿಂದೆ 2008ರಲ್ಲೂ ಇದೇ ರೀತಿ ಶಾಸಕರನ್ನು ಕೊಂಡುಕೊಂಡು ಅಧಿಕಾರ ನಡೆಸಿದರು. ಈಗಲೂ ಅದನ್ನೇ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಿರಲು, ಜಗದೀಶ್ ಶೆಟ್ಟರ್, ಈಶ್ವರಪ್ಪ ಅವರಿಗೆ ಮಂತ್ರಿಯಾಗಿರಲು ನೈತಿಕತೆಯೇ ಇಲ್ಲ. ಇವರ ಅಧಿಕಾರದ ಹಪಾಹಪಿಯಿಂದಲೇ ಈಗ ಉಪ ಚುನಾವಣೆ ನಡೆಯಬೇಕಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೆಡಿಎಸ್ ಜತೆಗೆ ಮೈತ್ರಿ ಇಲ್ಲ: ಜೆಡಿಎಸ್‌ನೊಂದಿಗೆ ಮೈತ್ರಿ ಕುರಿತು ಯಾವುದೇ ಮಾತುಕತೆ ನಡೆದಿಲ್ಲ ಎಂದು ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದರು. ಜತೆಗೆ, ದಲಿತ ಮುಖ್ಯಮಂತ್ರಿಯಾಗಿಅ ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೆಸರು ತೇಲಿಬರುತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಫಲಿತಾಂಶ ಬಂದ ನಂತರ ಅಲ್ಲವೇ ಇವೆಲ್ಲ ತೀರ್ಮಾನಗಳು. ನಮಗೊಂದು ಹೈಕಮಾಂಡ್ ಇದೆ. ಫಲಿತಾಂಶದ ನಂತರ ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೋ ನೋಡæೂೕಣ ಎಂದರು.
ಒಂದು ವೇಳೆ ಬಿಜೆಪಿ ಐದು ಸೀಟು ಗೆದ್ದರೆ 112 ಸ್ಥಾನ ಹೊಂದಿದಂತಾಗುತ್ತದೆ. ಉಪ ಚುನಾವಣೆಯಲ್ಲಿ ನಾವು ಹತ್ತು ಸ್ಥಾನಗಳನ್ನು ಗೆಲ್ಲಬೇಕು. ಜೆಡಿಎಸ್ 1, 2 ಸ್ಥಾನ ಗೆಲ್ಲಬೇಕು. ಆಗ ಇಂಥ ಚರ್ಚೆಗಳು ಬರುತ್ತವೆ. ಇನ್ನೂ ಫಲಿತಾಂಶವೇ ಬಂದಿಲ್ಲ, ಆಗಲೇ ಚರ್ಚೆ ಮಾಡಿದರೆ ಹೇಗೆ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇವರೇ ಕಣ್ರೋ 'ಹೌದೋ ಹುಲಿಯಾ' ದ ಅಸಲಿ ಮಾಲೀಕ!...
ಈಶ್ವರಪ್ಪ ವಿರುದ್ಧ ಕಿಡಿ: ‘ಸಿದ್ದರಾಮಯ್ಯ ಅವರಿಗೆ ಸಿಎಂ ಆಗಬೇಕೆನ್ನುವ ಹುಚ್ಚು ಹಿಡಿದಿದೆ’ ಎಂಬ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೂ ಪ್ರತಿ ಪಕ್ಷ ನಾಯಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ‘ನಾನೆಲ್ಲಿ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿದ್ದೇನೆ. ನಾನು ಮುಖ್ಯಮಂತ್ರಿ ಆಗ್ತೇನೆ ಅಂತ ಹೇಳಿಯೇ ಇಲ್ಲ. ಆದರೆ, ಬಿಜೆಪಿ ಏಳೆಂಟು ಸ್ಥಾನ ಗೆಲ್ಲದಿದ್ದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಹೇಳಿದ್ದೇನೆ. ಬಿಜೆಪಿಯವರಿಗೆ ಬುದ್ಧಿಯಿಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಾಗಲಿ, ಸಂವಿಧಾನದ ಮೇಲೆ ಗೌರವವವಾಗಲಿ ಇಲ್ಲವೇ ಇಲ್ಲ ಎಂದರು.
ಏತನ್ಮಧ್ಯೆ, ತಮ್ಮನ್ನು ಹೊರಗಿಟ್ಟು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಭೇಟಿಯಾಗ್ತೀದ್ದಾರಲ್ವಾ ಎಂಬ ಮಾಧ್ಯಮದವರ ಪ್ರಶ್ನೆಗೆ ಗರಂ ಆಗಿಯೇ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪಕ್ಷದ ಹೈಕಮಾಂಡ್ ಇಂಥ ಭೇಟಿಗೆ ಸೂಚಿಸಿದ್ದಾರೆಯೇ ಎಂದು ಮರು ಮರು ಪ್ರಶ್ನೆ ಎಸೆದರು.