'ಏಕಪತ್ನಿವ್ರತಸ್ಥ: ಬಿಎಸ್ವೈ ಮೇಲೂ ಸಂಶಯ ಮೂಡುವಂತೆ ಸುಧಾಕರ್ ಹೇಳಿಕೆ ನೀಡಿದ್ದಾರೆ'
ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ ಸಿಂಗಲ್ ಹೆಂಡ್ತಿ ಚಾಲೆಂಜ್‌ಗೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಅದರಲ್ಲೂ ಪ್ರತಿಪಕ್ಷ ಕಾಂಗ್ರೆಸ್, ಸುಧಾಕರ್ ಮೇಲೆ ಮುಗಿಬಿದ್ದಿದೆ.
ಬೆಂಗಳೂರು, (ಮಾ.24): ಆರೋಗ್ಯ ಸಚಿವ ಸುಧಾಕರ್ ಅವರ ಏಕಪತ್ನಿ ವ್ರತಸ್ಥ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಶಾಸಕ ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ್ದು ಎನ್ನಲಾದ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಆರೋಗ್ಯ ಸಚಿವ ಸುಧಾಕರ್, ಎಲ್ಲರೂ ಏಕಪತ್ನಿ ವ್ರತಸ್ಥರಾ? 224 ಶಾಸಕರ ವೈಯಕ್ತಿಕ ಜೀವನದ ಬಗ್ಗೆಯೂ ತನಿಖೆಯಾಗಲಿ ಎಂದು ಹೇಳಿ ವಿವಾದಕ್ಕೀಡಾಗಿದ್ದಾರೆ.
ಅನೈತಿಕ ಸಂಬಂಧ ಹೇಳಿಕೆ: ಸಿಎಂ ತರಾಟೆ ಬೆನ್ನಲ್ಲೇ ಎಚ್ಚೆತ್ತ ಸುಧಾಕರ್!
ಇನ್ನು ಈ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಮಂತ್ರಿ ಸುಧಾಕರ್ ಬಹಳ ಉದ್ಧಟತನದ ಮಾತನ್ನ ಹೇಳಿದ್ದಾರೆ. 225 ಜನರ ಮೇಲೆ ಸಂಶಯ ಬರುವ ರೀತಿ ಮಾತನ್ನಾಡಿದ್ದಾರೆ. ಮನೆಯಲ್ಲೂ ಸಂಶಯ ಮೂಡುವಂತೆ ಹೇಳಿದ್ದಾರೆ. ಸಿಎಂ ಯಡಿಯೂರಪ್ಪ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮೇಲೂ ಸಂಶಯ ಮೂಡುವಂತೆ ಹೇಳಿಕೆ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದು ಬೇಜವಾಬ್ದಾರಿ ಹೇಳಿಕೆ.. 225 ರಲ್ಲಿ ಹೆಣ್ಣು ಮಕ್ಕಳು ಇದ್ದಾರೆ. ಇವರು ಹೊರಗೆ ಏನು ಹೇಳಬೇಕು..? ಇವರು ರಾಜೀನಾಮೆ ಕೊಡಬೇಕು. ಸುಧಾಕರ್ ಸೇರಿದಂತೆ ಆರು ಜನ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದೇವೆ. ಇವರ ಸಿಡಿಗಳು ಇವೆ ಅದಕ್ಕೆ ವಿಲಿವಿಲಿ ಅಂತಾ ಒದ್ದಾಡ್ತಿದ್ದಾರೆ. ಸದನಕ್ಕೆ ಒಂದು ಗೌರವ ಇರುತ್ತೆ, ಸದನದ ಹಕ್ಕುಚ್ಯುತಿ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.