Asianet Suvarna News Asianet Suvarna News

ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಬರುತ್ತಾರೆಂದು ಸಂತೋಷ್ ಕನಸು ಕಾಣುತ್ತಿದ್ದಾರೆ: ಸಲೀಂ ಅಹಮದ್ ವ್ಯಂಗ್ಯ

ಬಿಜೆಪಿಯವರು ಏನಾದರೂ ತೆಗೆಯಲಿ. ಆದರೆ ಮೊದಲ ಪ್ರಧಾನಿಯಾಗಿದ್ದ ನೆಹರು ಅವರು ಏನು ಅಂತ ಜಗತ್ತಿಗೆ ಗೊತ್ತಿದೆ. ಪಂಡಿತ್ ಜವಾಹರಲಾಲ್ ನೆಹರು ದೇಶದ ಮೊದಲ ಪ್ರಧಾನಿ ಆಗಿದ್ದವರು. ನೀವು ಬರಿ ಅವರ ಹೆಸರು ತೆಗೆದರೆ ಏನೂ ಆಗಲ್ಲ. ಆದರೆ ಯಾಕೆ ಇಂತಹ ದ್ವೇಷದ ರಾಜಕಾರಣ ಮಾಡುತ್ತೀರಾ ಎಂದು ಪ್ರಶ್ನಿಸಿದ ಸಲೀಂ ಅಹಮ್ಮದ್ 

Congress Leader Saleem Ahmed Slams BL Santosh grg
Author
First Published Sep 5, 2023, 10:15 PM IST

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ಸೆ.05):  ಕಾಂಗ್ರೆಸ್ ನ 30 ರಿಂದ 40 ಶಾಸಕರು ಬಿಜೆಪಿಗೆ ಬರುತ್ತಾರೆಂಬ ಸಂತೋಷ್ ಜಿ ಎಲ್ಲೋ ನಿದ್ದೆಯಲ್ಲಿ ಕನಸು ಕಾಣುತ್ತಿರಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮ್ಮದ್ ವ್ಯಂಗ್ಯವಾಡಿದ್ದಾರೆ. 

ಇಂದು(ಮಂಗಳವಾರ) ಮಡಿಕೇರಿಯಲ್ಲಿ ನಡೆದ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಭಿನಂದನಾ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಲೀಂ ಅಹಮ್ಮದ್, ಸಂತೋಷ್ ಅವರು ನಿದ್ದೆ ಮಾಡುತ್ತಿರಬೇಕು, ಹೀಗಾಗಿ ಅವರಿಗೆ ಕಾಂಗ್ರೆಸ್ಸಿನ 30 ರಿಂದ 40 ಶಾಸಕರು ಬಿಜೆಪಿಗೆ ಬರುತ್ತಿದ್ದಾರೆ ಎಂಬ ಕನಸು ಕಂಡಿದ್ದಾರೆ. ಅವರದು ರಾಷ್ಟ್ರೀಯ ಪಕ್ಷವಾಗಿ ವಿಪಕ್ಷ ನಾಯಕನ ಆಯ್ಕೆ ಮಾಡುವ ಯೋಗ್ಯತೆ ಇಲ್ಲ. ಸರ್ಕಾರ ಬಂದು ನೂರು ದಿನ ಆಗಿದೆ, ಆದರೂ ಇಂದಿಗೂ ವಿಪಕ್ಷ ನಾಯಕನನ್ನ ಆಯ್ಕೆ ಮಾಡಲಾಗಿಲ್ಲ. ನನ್ನ 41 ವರ್ಷದ ಅನುಭವದಲ್ಲಿ ನಾನು ಎಂದಿಗೂ ಇಂತಹ ಸ್ಥಿತಿಯನ್ನು ನೋಡಿಲ್ಲ. ಆದರೆ 40 ಜನ ಬಿಜೆಪಿಗೆ ಬರುತ್ತಾರೆ ಎನ್ನುತ್ತಾರೆ. ಮುಂದೆ ಅವರ ಪಕ್ಷದಿಂದ ಎಷ್ಟು ಜನ ಕಾಂಗ್ರೆಸ್ ಗೆ ಬರುತ್ತಾರೆ ಎಂದು ಕಾದು ನೋಡಿ. ಅಷ್ಟೇ ಅಲ್ಲ ಜೊತೆಗೆ ಜೆಡಿಎಸ್ ನಿಂದಲೂ ಕಾಂಗ್ರೆಸ್ ಗೆ ಬರುತ್ತಾರೆ. ಅಷ್ಟಕ್ಕೂ ಸಂತೋಷ್ ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಅವರ ಮಾತನ್ನು ನೋಡಿ ನಗಬೇಕೋ ಅಳಬೇಕೋ ಒಂದು ಅರ್ಥವಾಗುತ್ತಿಲ್ಲ. ವಿಪಕ್ಷ ನಾಯಕನ ಆಯ್ಕೆ ಮಾಡದಿರುವುದು ಅವರ ಆಂತರಿಕ ವಿಷಯ. ಆದರೆ ರಾಜ್ಯದ ವಿಪಕ್ಷ ನಾಯಕನ ಆಯ್ಕೆ ಮಾಡುವುದು ಅವರಿಗೆ ಆಗಲ್ಲ ಅಂದರೆ ರಾಜ್ಯದ ಅಭಿವೃದ್ಧಿಗೆ ಅವರು ಏನು ಕೆಲಸ ಮಾಡುತ್ತಾರೆ. ಅದಕ್ಕಾಗಿಯೇ ಅವರನ್ನು ಜನ ಮನೆಯಲ್ಲಿ ಕೂರಿಸಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. 

ಬಿಜೆಪಿಗರೇ ನಂಬಲಾರದ ಅನೇಕರು ಕಾಂಗ್ರೆಸ್‌ಗೆ ಬಂದರೆ ಅಚ್ಚರಿಯಿಲ್ಲ: ಬೋಸರಾಜು

ಪ್ರಧಾನಿ ಮೋದಿಯವರು ಪಂಡಿತ್ ಜವಹರಲಾಲ್ ನೆಹರು ಅವರ ಮ್ಯೂಸಿಯಂ ಹೆಸರನ್ನು ಪ್ರಧಾನಿ ಮೂಸಿಯಂ ಎಂದು ಬದಲಾಯಿಸಿದರು. ಇಷ್ಟೊಂದು ದ್ವೇಷ ರಾಜಕಾರಣ ಏಕೆ ಎಂದು ಸಲೀಂ ಅಹಮ್ಮದ್ ಪ್ರಶ್ನಿಸಿದರು. ಬಿಜೆಪಿಯವರು ಏನಾದರೂ ತೆಗೆಯಲಿ. ಆದರೆ ಮೊದಲ ಪ್ರಧಾನಿಯಾಗಿದ್ದ ನೆಹರು ಅವರು ಏನು ಅಂತ ಜಗತ್ತಿಗೆ ಗೊತ್ತಿದೆ. ಪಂಡಿತ್ ಜವಾಹರಲಾಲ್ ನೆಹರು ದೇಶದ ಮೊದಲ ಪ್ರಧಾನಿ ಆಗಿದ್ದವರು. ನೀವು ಬರಿ ಅವರ ಹೆಸರು ತೆಗೆದರೆ ಏನೂ ಆಗಲ್ಲ. ಆದರೆ ಯಾಕೆ ಇಂತಹ ದ್ವೇಷದ ರಾಜಕಾರಣ ಮಾಡುತ್ತೀರಾ ಎಂದು ಪ್ರಶ್ನಿಸಿದರು.

ರಿಪಬ್ಲಿಕ್ ಆಫ್ ಭಾರತ ಎಂಬುದಾಗಿ ಹೆಸರು ಬದಲಾವಣೆ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ನಾವು INDIA ಎಂದು ಹೆಸರು ಅಲೆಯನ್ಸ್ ಮಾಡುತ್ತಿದ್ದಂತೆ ಬಿಜೆಪಿಯ ಅರ್ಧ ಕಥೆ ಮುಗಿಯಿತು. ಇಂಡಿಯಾ ನಮ್ಮ ಶಕ್ತಿ, ಸಂಕಲ್ಪ ಮತ್ತು ನಮ್ಮ ಧೈರ್ಯ. INDIA ಇಂದು ಇಡೀ ದೇಶದಲ್ಲಿ ಸಂಚಲನ ಮೂಡಿಸಿದೆ. 36 ರಿಂದ 37 ಪಕ್ಷಗಳು ಇದಕ್ಕೆ ಸೇರಿವೆ. ದೇಶದ ಜನರಿಗೆ ಬಿಜೆಪಿ ಬೇಡವಾಗಿದೆ. ಯುವಕರು, ಕಾರ್ಮಿಕರು ಮತ್ತು ಮಹಿಳೆಯರಿಗೆ ಬಿಜೆಪಿ ಮೇಲೆ ವಿಶ್ವಾಶವಿಲ್ಲ. ಜನ 10 ವರ್ಷ ನಿಮಗೆ ಕೊಟ್ಟಿದ್ದರು, ಆದರೆ ಯಾವುದೇ ಬದಲಾವಣೆ ಆಗಲಿಲ್ಲ. ನೀವು ಯುವಕರಿಗೆ ಉದ್ಯೋಗ ಕೊಡಿ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕಿ, ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಮಾಡಿ. ಅದು ಬದಲಾಯಿಸಿ ಎಂದರೆ ನೀವು ಹೆಸರು ಬದಲಾಯಿಸುತ್ತಿದ್ದೀರಿ. ಆದರೆ ದೇಶದ ಜನ ನಿಮ್ಮನ್ನು ಬದಲಾವಣೆ ಮಾಡುತ್ತಾರೆ. ಪ್ರಧಾನಿ ಮೋದಿಯವರು ಸೀದಾ ಮನೆಗೆ ಹೋಗುತ್ತಾರೆ  ಎಂದು ಕೇಂದ್ರ ಸರ್ಕಾರದ ವಿರುದ್ಧ ಸಲೀಂ ಅಹಮದ್ ಅಸಮಾಧಾನ ವ್ಯಕ್ತಪಡಿಸಿದರು.

ಉಪ್ಪು ತಿಂದವರು ನೀರು ಕುಡಿಯಲೇಬೇಕು

ಭ್ರಷ್ಟಾಚಾರದ ಬಗ್ಗೆ ತನಿಖೆ ಆರಂಭಿಸಿರುವ ನಿವೃತ ನ್ಯಾಯಮೂರ್ತಿಗಳ ಬಗ್ಗೆ ಮಾಜಿ ಸಚಿವ ಸಿ.ಟಿ. ರವಿ ಮತ್ತು ಡಿ. ಸುಧಾಕರ್ ಅವರು ಬೈಯರ್ಸ್ ಜಡ್ಜ್ ಅಂತ ಹೇಳುತ್ತಾರೆ. ಅವರು ಹೀಗೆ ಮಾತನಾಡುವುದಕ್ಕೆ ಜನರು ರವಿ ಮತ್ತು ಸುಧಾಕರ್ ಅವರನ್ನು ಮನೆಗೆ ಕಳುಹಿಸಿದ್ದಾರೆ ಎಂದು ಅಲೀಂ ಅಹಮ್ಮದ್ ಅವರು ಮಾಜಿ ಸಚಿವರಾದ ಸಿ. ಟಿ ರವಿ ಮತ್ತು ಸುಧಾಕರ್ ಗೆ ತಿರುಗೇಟು ನೀಡಿದ್ದಾರೆ. 

ಸಮಿತಿಗಳ ಮೇಲೆ ಸ್ವಲ್ಪ ವಿಶ್ವಾಸ ಇಟ್ಟುಕೊಳ್ರಿ ಎಂದ ಸಲೀಂ ಅಹಮದ್, ಯಾವ ತನಿಖೆಯೂ ಇಲ್ಲಿ ಕದ್ದು ಮುಚ್ಚಿ ನಡೆಯಲ್ಲ. ಎಲ್ಲವೂ ಬಹಿರಂಗವಾಗಿ ನಡೆಯುತ್ತದೆ ಎಂದಿದ್ದಾರೆ. ಮೈಕಲ್ ಕುನ್ನಾ ಅವರ ಬಗ್ಗೆ ರವಿಯವರಿಗೆ ತಿಳಿದುಕೊಳ್ಳಲು ಹೇಳಿ, ಅವರಿಗೆ ಧೈರ್ಯವಿದ್ದರೆ ಒಂದು ಪಕ್ಷದ ಜನರಲ್ ಸೆಕ್ರೇಟ್ರಿ ಆಗಿದ್ದ ಅವರಿಗೆ, ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಧೈರ್ಯ ಇರಬೇಕಾಗಿತ್ತು. ಅದು ಬಿಟ್ಟು ನೆಹರು, ಇಂದಿರಾಗಾಂಧಿ ಅವರ ಬಗ್ಗೆ ಮಾತನಾಡುತ್ತಾರೆ. ಯಾರು ಯಾರ ಯೋಗ್ಯತೆ ಎಷ್ಟಿದೆಯೋ ಅಷ್ಟು ಮಾತನಾಡಲಿ. ನೆಹರು, ಇಂದಿರಾಗಾಂಧಿ ಆ ನಾಯಕರ ಬಗ್ಗೆ ಮಾತನಾಡುವ ಯೋಗ್ಯತೆ ರವಿಗಿಲ್ಲ ಎಂದು ಸಲೀಂ ಅಹಮದ್ ಅಹಮ್ಮದ್ ಏಕವಚನದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. 

ರಾಜ್ಯದಲ್ಲಿ ಮೋದಿ ತಂತ್ರಗಾರಿಕೆ ನಡೆಯಲ್ಲ: ಸಚಿವ ಎನ್‌ಎಸ್ ಬೋಸರಾಜು

ಹೀಗೆ ಮಾತಾನಾಡಿದ್ದಕ್ಕೆ ಜನ ರವಿಯವರನ್ನು ಮನೆಯಲ್ಲಿ ಕೂರಿಸಿದ್ದಾರೆ. ನಮ್ಮ ಸರ್ಕಾರ ಬಂದ ಮೇಲೆ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡುತ್ತೇವೆ ಎಂದಿದ್ದೆವು. ಅದರಂತೆ ನಾಗಮೋಹನ್ ದಾಸ್ ಅವರ ಕಮಿಟಿ, ಮೈಕಲ್ ಕುನ್ನಾ ಕಮಿಟಿ ಮಾಡಿದ್ದೇವೆ. 40 % ಭ್ರಷ್ಟಾಚಾರ ಮತ್ತು ಕೋವಿಡ್ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಯುತ್ತಿದೆ. ಉಪ್ಪು ತಿಂದವನು ನೀರು ಕುಡಿಯಲೇ ಬೇಕು, ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇಬೇಕು. ಸುಧಾಕರ್ ಅವರೆ ನಿಮಗೆ ಯಾಕೆ ಹೆದರಿಕೆ, ಅಗ್ನಿ ಪರೀಕ್ಷೆಯಲ್ಲಿ ಪಾಸಾಗಬೇಕೆಂದರೆ ನೀವು ಹೋಗಲೇಬೇಕು. ಯಾರು ತಪ್ಪು ಮಾಡಿಲ್ಲವೋ ಅವರಿಗೆ ಯಾವುದೇ ತೊಂದರೆ ಆಗಲ್ಲ. ನಾವು ಯಾರನ್ನು ರಾಜಕೀಯ ಬಲಿಪಶು ಮಾಡುತ್ತಿಲ್ಲ ಎಂದು ಸಲೀಂ ಅಹಮ್ಮದ್ ಹೇಳಿದರು. 
ಇನ್ನು ಅಲ್ಪಸಂಖ್ಯಾತರ ಘಟಕದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ ಮಾತನಾಡಿದ ಶಾಂತಿ ನಗರದ ಶಾಸಕ ಹಾರೀಸ್ ಅವರು ವೈಯಕ್ತಿಕ ವಿಚಾರಕ್ಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿರುವುದು ನನಗೆ ಗೊತ್ತಿಲ್ಲ. ಆದರೆ ಸಾಲ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಹೊಸದೇನು ಅಲ್ಲ. ಬದಲಾಗಿ ಬೆಲೆ ಏರಿಕೆಯಿಂದ ಜನರು ಕಷ್ಟಪಡುತ್ತಿದ್ದಾರೆ. ಇಡೀ ದೇಶದಲ್ಲಿ ಎಲ್ಲಾ ವಸ್ತುಗಳ ಬೆಲೆ ಜಾಸ್ತಿ ಆಗಿದ್ದು, ಇತ್ತೀಚಿನ ದಿನಗಳಲ್ಲಿ ಯಾವ ವಸ್ತುಗೆ ಕಡಿಮೆ ಇದೆ ಹೇಳಿ ನೋಡೋಣ. ಬೆಲೆ ಏರಿಕೆಯಿಂದ ಜನಸಾಮಾನ್ಯರು ಬದುಕಲು ಆಗುತ್ತಿಲ್ಲ. ಸಾಲ ತೆಗೆದುಕೊಂಡರು ಬದಲುಕಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ರೈತರ ಸಾವುಗಳಿಗೆ ಬಿಜೆಪಿ ಪಕ್ಷವೇ ಕಾರಣ ಎಂದು ಶಾಂತಿ ನಗರ ಶಾಸಕ ಎನ್.ಎ. ಹಾರೀಸ್ ಹೇಳಿದ್ದಾರೆ. 

ಬೆಲೆ ಏರಿಸಿ ಜನರು ಬದುಕಲು ಆಗದ ವಾತಾವರಣ ಮಾಡಿರುವುದೇ ಬಿಜೆಪಿಯವರು. ಅದಕ್ಕೋಸ್ಕರ ನಾವು ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳನ್ನು ಕೊಟ್ಟಿದ್ದೇವೆ. ಅಕ್ಕಿ ಕೊಡುವ ಯೋಜನೆ ಕೊಟ್ಟಿದ್ದೇವೆ. ಜನರ ಕಷ್ಟಕ್ಕೆ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗುತ್ತಿವೆ. ಸಮಾಜದಲ್ಲಿ ಆತ್ಮಹತ್ಯೆ ಇರಬಾರದು ಎನ್ನುವ ಕಾರಣಕ್ಕೆ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಬಡವರು ಕಷ್ಟದಲ್ಲಿ ಇರೋರಿಗೆ ಸಹಾಯ ಮಾಡೋದೆ ನಮ್ಮ ಉದ್ದೇಶ‌ ಎಂದಿದ್ದಾರೆ. 

Follow Us:
Download App:
  • android
  • ios