ಬೆಂಗ್ಳೂರಿಗೆ ಬಂದ ಕೈ ಉಸ್ತುವಾರಿ: ಬಿಎಸ್‌ವೈ, ಮೋದಿ ಸರ್ಕಾರ ವಿರುದ್ಧ ವಾಗ್ದಾಳಿ...!
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಇಂದು (ಬುಧವಾರ) ಬೆಂಗಳೂರಿಗೆ ಆಗಮಿಸಿದ್ದು, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರು, (ಫೆ.17): ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬೆಂಗಳೂರಿಗೆ ಆಗಮಿಸಿದ್ದು, ಇಂದು (ಬುಧವಾರ) ಸಂಜೆ ರಾಜ್ಯ ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳ ಜೊತೆ ವನ್ ಟು ವನ್ ಸಭೆ ನಡೆಸಲಿದ್ದಾರೆ.
ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಗಳ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಇದಕ್ಕೂ ಮೊದಲ ಸುದ್ದಿಗೋಷ್ಠಿ ನಡೆಸಿದ ಸುರ್ಜೇವಾಲ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
100ರ ಗಡಿ ದಾಟಿದ ಪೆಟ್ರೋಲ್ ಬೆಲೆ: ಭಾರತದಲ್ಲಿ ಇದೇ ಮೊದಲು
ಬಿಜೆಪಿ ಸರ್ಕಾರ ಜನರನ್ನು ಲೂಟಿ ಮಾಡುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಳೆದ 6 ವರ್ಷದಲ್ಲಿ 20 ಲಕ್ಷ ಕೋಟಿ ರೂ. ಲೂಟಿಯಾಗಿದೆ. ರಾಜಸ್ಥಾನದಲ್ಲಿ ವ್ಯಾಟ್ ರೇಟ್ ಕಡಿಮೆ ಆಗಿದೆ. ಆದರೆ ಕರ್ನಾಟಕದಲ್ಲಿ ಏಕೆ ವ್ಯಾಟ್ ರೇಟ್ ಕಡಿಮೆ ಮಾಡಿಲ್ಲ? ಎಂದು ಪ್ರಶ್ನಿಸಿದರು.
ಅಡುಗೆ ಸಿಲಿಂಡರ್ ದರ 777 ರೂಪಾಯಿ ಆಗಿದೆ. ಎಲ್ಲಾ ಅಗತ್ಯ ವಸ್ತುಗಳ ದರ ಗಗನಕ್ಕೇರಿದೆ. 2020-21ರಲ್ಲಿ 2 ಲಕ್ಷ ಕೋಟಿ ತೆರಿಗೆ ಸಂಗ್ರಹಕ್ಕೆ ಮೋದಿ ಸರ್ಕಾರ ನಿರ್ಧರಿಸಿದೆ. ಇದರಿಂದ ಜನಸಾಮಾನ್ಯರಿಗೆ ಕಷ್ಟವಾಗುತ್ತದೆ ಎಂದು ಹೇಳಿದರು.
2020-21ರ ಆರ್ಥಿಕ ವರ್ಷದಲ್ಲಿ 2 ಲಕ್ಷ ಕೋಟಿ ರೂಪಾಯಿ ತೈಲದ ಮೇಲಿನ ಸೆಸ್ ಸಂಗ್ರಹಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಲೂಟಿ ಕೊನೆಯಾಗಬೇಕು, ಮೋದಿ ಲೂಟಿ ಕೊನೆಯಾಗಬೇಕು, ಯಡಿಯೂರಪ್ಪ ಟ್ಯಾಕ್ಸ್ ಕೊನೆಯಾಗಬೇಕು ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಬಿಜೆಪಿ ಸರ್ಕಾರ ವಿರುದ್ಧ ಕಿಡಿಕಾರಿದರು.