ಮೈಸೂರು ಸೋಪಿನ ಸುಗಂಧವನ್ನೂ ಮಾರಿದ ಬಿಜೆಪಿ: ಸುರ್ಜೇವಾಲಾ ಕಿಡಿ
ರಾಜ್ಯದಲ್ಲಿ ಮೈಸೂರು ಸ್ಯಾಂಡಲ್ ಸೋಪಿನ ಘಮ ಘಮ ಇತ್ತು. ಇದೀಗ ಅದರ ಅಧ್ಯಕ್ಷ ಅದರ ಸುಗಂಧವನ್ನೂ ಮಾರಿಬಿಟ್ಟಿದ್ದಾರೆ. ಕೋಟಿ ಕೋಟಿ ಹಣ ಲಪಟಾಯಿಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಟೀಕಿಸಿದರು.
ಬಳ್ಳಾರಿ (ಮಾ.05): ರಾಜ್ಯದಲ್ಲಿ ಮೈಸೂರು ಸ್ಯಾಂಡಲ್ ಸೋಪಿನ ಘಮ ಘಮ ಇತ್ತು. ಇದೀಗ ಅದರ ಅಧ್ಯಕ್ಷ ಅದರ ಸುಗಂಧವನ್ನೂ ಮಾರಿಬಿಟ್ಟಿದ್ದಾರೆ. ಕೋಟಿ ಕೋಟಿ ಹಣ ಲಪಟಾಯಿಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಟೀಕಿಸಿದರು.
ನಗರದ ಹೊಸಪೇಟೆ ರಸ್ತೆಯಲ್ಲಿರುವ ಗುರುಫಂಕ್ಷನ್ ಸಭಾಂಗಣದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಶನಿವಾರ ಜರುಗಿದ ಕಾಂಗ್ರೆಸ್ ಗ್ಯಾರಂಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಮಗ ಕೋಟಿ ಕೋಟಿ ಹಣ ಲೂಟಿ ಮಾಡಿದ್ದಾನೆ. ಮಗನ ಬಂಧನವಾಗಿದ್ದು, ತಂದೆ ತಲೆಮರೆಸಿಕೊಂಡಿದ್ದಾರೆ. ರಾಜ್ಯದ ಜನತೆ ಈ ಬಾರಿ ಚುನಾವಣೆಯಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಇಡೀ ರಾಜ್ಯವನ್ನು ಈ ಬಿಜೆಪಿಯವರು ಮಾರಾಟ ಮಾಡಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಸಾಧನೆ, ಅಭಿವೃದ್ಧಿ ಕಾರ್ಯ ಜನರಿಗೆ ತಿಳಿಸಿ: ಕೆ.ಎಸ್.ಈಶ್ವರಪ್ಪ
40 ಪರ್ಸೆಂಟ್ ಸರ್ಕಾರ: ರಾಜ್ಯ ಸರ್ಕಾರ 40 ಪರ್ಸೆಂಟ್ ಸರ್ಕಾರ ಎಂದು ನಾವು ಮಾಡುತ್ತಿರುವ ಆರೋಪವಲ್ಲ. ಗುತ್ತಿಗೆದಾರರೇ ಆರೋಪಿಸುತ್ತಿದ್ದಾರೆ. ಆದರೆ, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಯಾಕೆ ಚಕಾರ ಎತ್ತುತ್ತಿಲ್ಲ. ಬಿಜೆಪಿಗೆ ನಾಡಿನ ಮತದಾರರು ಹಾಗೂ ಅಭಿವೃದ್ಧಿಯ ಬಗ್ಗೆ ಯಾವುದೇ ಯೋಚನೆಗಳಿಲ್ಲ. ಈ ರಾಜ್ಯದಲ್ಲಿರುವ ಭ್ರಷ್ಟಾಚಾರದ ಸಂಗತಿ ಎಲ್ಲೆಡೆ ಹಬ್ಬಿದೆ. ರಾಜ್ಯದ ಸಿಎಂ ಬೇರೆ ರಾಜ್ಯಕ್ಕೆ ತೆರಳಿದಾಗ ವೆಲ್‌ಕಮ್ 40 ಪರ್ಸೆಂಟ್ ಸಿಎಂ ಎಂದು ನಾಮಫಲಕ ಹಿಡಿದು ಸ್ವಾಗತ ಮಾಡಲಾಗುತ್ತಿದೆ.
ಮಠಗಳಿಂದಲೂ ಈ ಸರ್ಕಾರ ಪರ್ಸೆಂಟೇಜ್ ಹಣ ಕೇಳುತ್ತದೆ ಎಂದು ಸ್ವಾಮೀಜಿಗಳೇ ಆರೋಪಿಸಿದ್ದಾರೆ. ಇದಕ್ಕಿಂತಲೂ ದೌರ್ಭಾಗ್ಯ ಬೇಕಾ? ಇವರಿಗೆ ನರಕದಲ್ಲೂ ಜಾಗ ಸಿಗುವುದಿಲ್ಲ ಎಂದು ಟೀಕಿಸಿದ ಸುರ್ಜೇವಾಲಾ, ಕರ್ನಾಟಕ ಸರ್ಕಾರದ ಭ್ರಷ್ಟಾಚಾರ ಕುರಿತು ಗುತ್ತಿಗೆದಾರರು ಪ್ರಧಾನಮಂತ್ರಿಗಳಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರನ ಮನೆಗೆ ಸೌಜನ್ಯಕ್ಕಾದರೂ ಮೋದಿ, ಯಡಿಯೂರಪ್ಪ, ಕಟೀಲ್, ಬೊಮ್ಮಾಯಿ ಭೇಟಿ ನೀಡಲಿಲ್ಲ. ನಮ್ಮ ಕಾಂಗ್ರೆಸ್ ನಾಯಕರು ಭೇಟಿ ನೀಡಿ ಸಂತೈಸಿದ್ದಾರೆ ಎಂದು ಹೇಳಿದರು.
ಎಷ್ಟು ಜನರನ್ನು ಕೊಲ್ಲುತ್ತೀರಿ: ಬಿಜೆಪಿ ಸಂಸ್ಕೃತಿ- ಸಂಸ್ಕಾರ ಬಗ್ಗೆ ಮಾತನಾಡುತ್ತದೆ. ಆದರೆ, ಸಿದ್ದರಾಮಯ್ಯರನ್ನು ಕೊಂದುಬಿಡಿ ಎಂದು ಸಚಿವ ಅಶ್ವತ್‌್ಥನಾರಾಯಣ ಹೇಳುತ್ತಾರೆ. ಹಾಗಾದರೆ ಇದೇನಾ ಬಿಜೆಪಿ ಸಂಸ್ಕೃತಿ- ಸಂಸ್ಕಾರ ಎಂದು ಪ್ರಶ್ನಿಸಿದರು. ಎಷ್ಟುಜನ ಕಾಂಗ್ರೆಸ್ಸಿಗರನ್ನು ಕೊಲ್ಲುತ್ತೀರಿ. ಸಮಯ ದಿನಾಂಕ ನಿಗದಿ ಮಾಡಿ; ನಾವೇ ಬರುತ್ತೇವೆ. ನೀವು ಕೊಲ್ಲುವ ಬುಲೆಟ್‌ಗಳೇ ಕಡಿಮೆ ಬೀಳುವಷ್ಟುನಮ್ಮ ಕಾರ್ಯಕರ್ತರ ಪಡೆ ಇದೆ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಜೂನ್ ಒಂದರೊಳಗೆ ರಾಜ್ಯದಲ್ಲಿ ಕೈ ಸರ್ಕಾರವಿರುತ್ತದೆ.
ಸುಳ್ಳು, ಮೋಸವೇ ಕಾಂಗ್ರೆಸ್‌ನ ದೇವರು: ಸಿಎಂ ಬೊಮ್ಮಾಯಿ
ಬಳಿಕ ನಾಡಿನ ಜನರ ಹೊರೆ ಕಡಿಮೆಯಾಗಲಿದೆ. ಬಿಜೆಪಿಯಂತೆ ಸುಳ್ಳು ಹೇಳುವುದಿಲ್ಲ. ಹೇಳಿದಂತೆ ಕೆಲಸ ಮಾಡುತ್ತೇವೆ. ಬಡ ಹಾಗೂ ಮಧ್ಯಮ ವರ್ಗದ ಹಿತ ಕಾಯುತ್ತೇವೆ ಎಂದು ತಿಳಿಸಿದರು. ನುಡಿದಂತೆ ನಡೆಯುವ ಪಕ್ಷವನ್ನು ಅಧಿಕಾರಕ್ಕೆ ತನ್ನಿ. ಸುಳ್ಳು ಹೇಳಿ ಅಧಿಕಾರಕ್ಕೆ ಬಂದು ಜನರಿಗೆ ದ್ರೋಹ ಎಸಗಿದ ಬಿಜೆಪಿಯನ್ನು ಸೋಲಿಸಿ ಎಂದರು. ಎಐಸಿಸಿ ಕಾರ್ಯದರ್ಶಿ ಶ್ರೀಧರಬಾಬು, ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್, ಪಕ್ಷದ ಜಿಲ್ಲಾಧ್ಯಕ್ಷ ಮಹ್ಮದ್ ರಫೀಕ್, ರಾಜ್ಯಸಭಾ ಸದಸ್ಯ ಶಾಸಕರಾದ ಬಿ.ನಾಗೇಂದ್ರ, ಗಣೇಶ್, ಈ. ತುಕಾರಾಂ, ಮಾಜಿ ಸಚಿವ ಎಂ. ದಿವಾಕರಬಾಬು, ಮಾಜಿ ಶಾಸಕರಾದ ಅನಿಲ್‌ಲಾಡ್, ಕೆಎಸ್‌ಎಲ್ ಸ್ವಾಮಿ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಮೇಯರ್ ರಾಜೇಶ್ವರಿ, ಅಲ್ಲಂ ಪ್ರಶಾಂತ್, ಮುಂಡ್ರಿಗಿ ನಾಗರಾಜ್, ಎಲ್. ಮಾರೆಣ್ಣ ಇತರರಿದ್ದರು.