ಸುಳ್ಳು, ಮೋಸವೇ ಕಾಂಗ್ರೆಸ್‌ನ ದೇವರು: ಸಿಎಂ ಬೊಮ್ಮಾಯಿ
ಸುಳ್ಳು ಹಾಗೂ ಮೋಸವೇ ಕಾಂಗ್ರೆಸ್‌ನ ದೇವರು. ಜಾತಿ ಧರ್ಮಗಳ ಮಧ್ಯ ಒಡಕನ್ನು ತರುವಂಥದ್ದೇ ಅವರ ಕೆಲಸ. ಒಂದು ವರ್ಗಕ್ಕೆ ಬೆಣ್ಣೆ ಉಳಿದೆಲ್ಲವಕ್ಕೆ ಸುಣ್ಣ ಬಳಿಯುವದು ಕಾಂಗ್ರೆಸ್ ಕಾರ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಬಸವಕಲ್ಯಾಣ (ಮಾ.05): ಸುಳ್ಳು ಹಾಗೂ ಮೋಸವೇ ಕಾಂಗ್ರೆಸ್‌ನ ದೇವರು. ಜಾತಿ ಧರ್ಮಗಳ ಮಧ್ಯ ಒಡಕನ್ನು ತರುವಂಥದ್ದೇ ಅವರ ಕೆಲಸ. ಒಂದು ವರ್ಗಕ್ಕೆ ಬೆಣ್ಣೆ ಉಳಿದೆಲ್ಲವಕ್ಕೆ ಸುಣ್ಣ ಬಳಿಯುವದು ಕಾಂಗ್ರೆಸ್ ಕಾರ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಅವರು ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಬೃಹತ್ ಬಹಿರಂಗ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೊಡ್ಡ ಸಾಲದ ಹೊರೆಯನ್ನು ಸರ್ಕಾರದ ಮೇಲಿಟ್ಟು ಹೋಗಿದ್ದಾರೆ. ಭಾಗ್ಯ ಕೊಡುವ ಮಾತುಗಳನ್ನು ಹೇಳಿ ದೌರ್ಭಾಗ್ಯ ಕೊಟ್ಟು ಹೋಗಿದ್ದಾರೆ ಎಂದು ದೂರಿದರು.
ಸಾಮಾಜಿಕ ನ್ಯಾಯದ ಹೆಸರಲ್ಲಿ ಸಿದ್ದರಾಮಯ್ಯ ವೈಯಕ್ತಿಕ ಅಭಿವೃದ್ಧಿ: ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯ ಎಂದು ತಾವು ಮುಂದೆ ಹೋಗಿ ಹಿಂದುಳಿದವರನ್ನು ಹಿಂದೆಯೇ ಬಿಟ್ಟು ಹೋದರು. ಬಡವರಿಗೆ 10 ಕೆ.ಜಿ ಅಕ್ಕಿಯನ್ನು ನೀಡುವ ಯೋಜನೆಯನ್ನು ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ 5 ಕೆ.ಜಿ.ಗೆ ಇಳಿಸಿ ಹೋಗಿದ್ದನ್ನು ಜನತೆ ಮರೆತಿಲ್ಲ ಎಂದರು. ಎಸ್‌ಸಿ ಮತ್ತು ಎಸ್‌ಟಿ ಜನಾಂಗಕ್ಕೆ ನಾವು ಮೀಸಲಾತಿ ನಾವು ಹೆಚ್ಚು ಮಾಡಿದ್ದು, ಐತಿಹಾಸಿಕ ನಿರ್ಣಯ ಅಂತ ಎಲ್ಲರೂ ಕೊಂಡಾಡುತ್ತಿದ್ದಾರೆ. ಮೊದಲ ಹಂತದ ಆದೇಶಗಳು ಆಗಿದ್ದು, ಕಾಂಗ್ರೆಸ್‌ನವರಿಗೆ ಮಾತ್ರ ಹೊಟ್ಟೆಯಲ್ಲಿ ತಳಮಳವಾಗುತ್ತಿದೆ ಎಂದು ವ್ಯಂಗ್ಯವಾಡಿದರು.
ಲೋಕಾಯುಕ್ತ ಇಲ್ಲದ ಕಾರಣ ಕಾಂಗ್ರೆಸ್ ಆಳ್ವಿಕೆಯಲ್ಲಿ ಇಂತಹ ಹಲವು ಕೇಸ್ ಮುಚ್ಚಿಹೋಗಿವೆ: ಸಿಎಂ ಬೊಮ್ಮಾಯಿ
ಪರಿಶಿಷ್ಟ ಜಾತಿ, ಪಂಗಡದವರನ್ನು 60 ವರ್ಷಗಳ ಕಾಲ ಜೀತದಾಳುಗಳನ್ನಾಗಿ ಇಟ್ಟುಕೊಂಡಿದ್ದ ಕಾಂಗ್ರೆಸ್, ಕೇವಲ ಓಟ್ ಬ್ಯಾಂಕ್ ಆಗಿ ಮಾಡಿಕೊಂಡಿತ್ತು. ಈಗ ಅವರು ಜಾಗೃತರಾಗುತ್ತಿದ್ದು, ತಮ್ಮಿಂದ ಕೈ ಬಿಟ್ಟು ಹೋಗುತ್ತಿದ್ದಾರೆ ಎಂದು ಹೇಳಿ ಈ ಮೀಸಲಾತಿ ಹೆಚ್ಚಳ ಮಾಡಲು ಸಾಧ್ಯವಿಲ್ಲವೆಂಬ ಸುಳ್ಳು ಆಪಾದನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬೀದರ್ ಜಿಲ್ಲೆಯ ಸಮಗ್ರ ಅಭಿವೃದ್ಧಿ: ಬೀದರ್ ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನ ನಾವು ಕೈಕೊಂಡಿದ್ದೇವೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಈ ವರ್ಷ 5 ಸಾವಿರ ಕೋಟಿ ರು. ಕೊಟ್ಟಿದ್ದೇವೆ. ಬೀದರ್ ಜಿಲ್ಲೆಯ ಪ್ರತಿಯೊಂದು ಕ್ಷೇತ್ರಕ್ಕೆ ಕನಿಷ್ಠ 100 ಕೋಟಿ ರು. ಗಳ ಯೋಜನೆ ಬರುವ ವರ್ಷದಲ್ಲಿ ಮಂಜೂರು ಆಗುತ್ತದೆ. 650 ಕೋಟಿ ರು. ಗಳಲ್ಲಿ ಔರಾದ್ ಕೆರೆ ತುಂಬಿಸುವ ಯೋಜನೆಗೆ ಈಗಾಗಲೇ ಮಂಜೂರಾತಿ ಕೊಟ್ಟು ಟೆಂಡರ್ ಮಾಡಿದ್ದೇವೆ. ಮೆಹಕರ್ ಏತ ನಿರಾವರಿ ಯೋಜನೆಗೆ 750 ಕೋಟಿ ರು. ಅನುಮೋದನೆ ಕೊಟ್ಟಿದ್ದೇವೆ. ಜಿಲ್ಲೆಗೆ ವಿಶ್ವವಿದ್ಯಾಲಯ ಕೊಟ್ಟಿರುವ ಹೆಗ್ಗಳಿಗೆ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿವಿಧ ಕಾರ್ಯಕ್ರಮಗಳ ಪಟ್ಟಿಮಾಡಿದರು.
ರಾಜ್ಯದಲ್ಲಿ ಬೃಹತ್ ಐಫೋನ್ ಘಟಕ: ತೈವಾನ್ ಮೂಲದ ಫಾಕ್ಸ್‌ಕಾನ್ ಜತೆ ಸಿಎಂ ಬೊಮ್ಮಾಯಿ ಸಮ್ಮುಖ ಒಪ್ಪಂದ
ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಜಗದೀಶ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್, ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಸಚಿವ ಪ್ರಭು ಚವ್ಹಾಣ್, ಶ್ರೀರಾಮುಲು, ಸಂಸದ ಉಮೇಶ ಜಾಧವ್, ಶಾಸಕ ಶರಣು ಸಲಗರ, ರಘುನಾಥ ಮಲ್ಕಾಪೂರೆ, ಸುನೀಲ ವಲ್ಯಾಪೂರೆ, ರವಿಕುಮಾರ, ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ, ಅರುಣಾದೇವಿ, ಎಂಜಿ ಮೂಳೆ, ಮಾಲಿಕಯ್ಯ ಗುತ್ತೆದಾರ ಹಾಗೂ ಬಾಬುರಾವ್ ಚಿಂಚನಸೂರ ಸೇರಿದಂತೆ ಮತ್ತಿತರರು ಇದ್ದರು.