ರಾಜ್ಯ ಸರ್ಕಾರ ಮೀಸಲಾತಿ ಹೆಸರಲ್ಲಿ ಲಾಲಿಪಾಪ್ ನೀಡಿದೆ: ಬಿಜೆಪಿ ವಿರುದ್ಧ ಹರಿಹಾಯ್ದ ಸುರ್ಜೇವಾಲಾ
ಲಿಂಗಾಯತ, ಒಕ್ಕಲಿಗ, ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಸರಲ್ಲಿ ರಾಜ್ಯ ಬಿಜೆಪಿ ಸರ್ಕಾರ ಮೋಸ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಾಮಾಜಿಕ ಸರ್ವೇ ಮಾಡಿಸಲಾಗುವುದು. ಈಗಾಗಲೇ ಜಾತಿಗಣನೆ ಮಾಡಿಸಲಾಗಿದೆ. ಅದರ ಆಧಾರದ ಮೇಲೆ ಮೀಸಲಾತಿ ಬಗ್ಗೆ ನಿರ್ಧರಿಸಲಾಗುವುದು: ರಣದೀಪ್ ಸಿಂಗ್ ಸುರ್ಜೇವಾಲಾ
ಮೈಸೂರು(ಏ.26): ರಾಜ್ಯ ಸರ್ಕಾರ ಮೀಸಲಾತಿ ಹೆಸರಲ್ಲಿ ಲಾಲಿಪಾಪ್ ನೀಡಿದೆ. ಸುಪ್ರೀಂ ಕೋರ್ಟ್‌ಗೆ ಅಫಿಡೆವಿಟ್ ಸಲ್ಲಿಸಲು ಬಿಜೆಪಿ ಸರ್ಕಾರ ವಿಫಲವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮುಸ್ಲಿಂ ಮೀಸಲಾತಿ ರದ್ದು ಮಾಡಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಮೀಸಲಾತಿ ಹೆಸರಲ್ಲಿ ಸುಳ್ಳು ಹೇಳುತ್ತಿರುವ ಬಿಜೆಪಿಗೆ ಹಿನ್ನೆಡೆಯಾಗಿದೆ. ಇದು ಡಬಲ್ ಇಂಜಿನ್ ದೋಖಾ ಅಂತ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.
ಇಂದು(ಬುಧವಾರ) ನಗರದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲಾ, ಲಿಂಗಾಯತ, ಒಕ್ಕಲಿಗ, ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಸರಲ್ಲಿ ರಾಜ್ಯ ಬಿಜೆಪಿ ಸರ್ಕಾರ ಮೋಸ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಾಮಾಜಿಕ ಸರ್ವೇ ಮಾಡಿಸಲಾಗುವುದು. ಈಗಾಗಲೇ ಜಾತಿಗಣನೆ ಮಾಡಿಸಲಾಗಿದೆ. ಅದರ ಆಧಾರದ ಮೇಲೆ ಮೀಸಲಾತಿ ಬಗ್ಗೆ ನಿರ್ಧರಿಸಲಾಗುವುದು. 50 ಪರ್ಸೆಂಟ್ ಸೀಲಿಂಗ್ ತೆಗೆದರೆ ಎಲ್ಲಾ ಸಮಸ್ಯೆಗೂ ಪರಿಹಾರ ಸಿಗಲಿದೆ. ಕೇಂದ್ರದಲ್ಲಿ ಎಲ್ಲಾ ಪಕ್ಷದ ವಿಶ್ವಾಸ ಪಡೆದು ಅದನ್ನು ಜಾರಿಗೆ ತರುತ್ತೇವೆ. ಎಲ್ಲರೂ ಒಂದಾಗಿ ಇದನ್ನು ಮಾಡುತ್ತೇವೆ ಅಂತ ಭರಸವೆ ನೀಡಿದ್ದಾರೆ.
ಸಿದ್ದರಾಮಯ್ಯ ಲಿಂಗಾಯತರಿಗೆ ಅವಮಾನ ಮಾಡಿಲ್ಲ: ರಣದೀಪ್‌ಸಿಂಗ್ ಸುರ್ಜೇವಾಲಾ
ಬಿಜೆಪಿಗೆ 9 ಪ್ರಶ್ನೆ ಕೇಳಿದ ರಣದೀಪ್ ಸಿಂಗ್ ಸುರ್ಜೇವಾಲಾ
1. ಲಿಂಗಾಯತ, ಒಕ್ಕಲಿಗ, ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ವಂಚನೆ ಮಾಡಿದ್ದು ಯಾಕೆ ?
2. ಯಾಕೆ ಸುಪ್ರೀಂಕೋರ್ಟ್‌ನಲ್ಲಿ ಮೀಸಲಾತಿಯನ್ನು ಸಮರ್ಥಿಸಿಕೊಳ್ಳಲಿಲ್ಲ.
3. ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮೀಸಲಾತಿ ಕೇಸ್‌ಗೆ ಸಂಬಂಧಪಟ್ಟಂತೆ ಯಾಕೆ ಅಫಿಡೆವಿಟ್ ಸಲ್ಲಿಸಲಿಲ್ಲ ?
4. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಶಿಫಾರಸ್ಸನ್ನು ಮೋದಿ ಸರ್ಕಾರ ಮಾರ್ಚ್ 14ರಂದು ತಿರಸ್ಕರಿಸಿದ್ದು ಯಾಕೆ ?
5. ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಯಾಕೆ ಸೇರಿಸಲಿಲ್ಲ ?
6. ಎಸ್ಸಿ, ಎಸ್ಟಿ, ಒಬಿಸಿ, ಲಿಂಗಾಯತ, ಒಕ್ಕಲಿಗ ಮತ್ತು ಇತರೆ ಸಮುದಾಯದ ಮೀಸಲಾತಿ ಬೇಡಿಕೆ ಈಡೇರಿಸಲು ಶೇ.50ರಷ್ಟು ಮೀಸಲಾತಿ ಮಿತಿಯನ್ನು ಯಾಕೆ ತೆಗೆದು ಹಾಕಲಿಲ್ಲ ?
7. ಅಲ್ಪಸಂಖ್ಯಾತರ ಮೀಸಲಾತಿಯನ್ನು ಅನ್ಯಾಯವಾಗಿ ಟಾರ್ಗೆಟ್ ಮಾಡಿದ್ದು ಯಾಕೆ ?
8. ಬಸವರಾಜ ಬೊಮ್ಮಾಯಿ ಸರ್ಕಾರ ತಮ್ಮದೇ ಸರ್ಕಾರದ ಹೇಳಿಕೆಯನ್ನು ಸುಪ್ರೀಂಕೋರ್ಟ್‌ನಲ್ಲಿ ಸಮರ್ಥಿಸಿಕೊಳ್ಳಲಿಲ್ಲ ಯಾಕೆ ?
9. ಮೀಸಲಾತಿ ವಿಚಾರದಲ್ಲಿ ಬಿಜೆಪಿ ಉಂಟು ಮಾಡಿದ ಗೊಂದಲಕ್ಕಾಗಿ ಮೋದಿ ಸಾರ್ವಜನಿಕವಾಗಿ ಕ್ಷಮೆ ಕೇಳುತ್ತಾರಾ ?
ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಬಿಜೆಪಿ ವಿಶ್ವಾಸ ದ್ರೋಹಿ ಪಾರ್ಟಿ ಅನ್ನೋದು ಸಾಬೀತಾಗಿದೆ. ಜನರಿಗೆ ಮೀಸಲಾತಿ ಚಾಕಲೇಟ್ ಕೊಟ್ಟಿತ್ತು. ಚುನಾವಣೆ ವೇಳೆ ಜೇನಿಗೂಡಿಗೆ ಕೈ ಹಾಕಿದ್ದರು. ತಲೆ ಮೇಲೆ ತುಪ್ಪ ಇಡುವ ಕೆಲಸ ಮಾಡಿದೆ. ನಾನು ತುಪ್ಪ ತಲೆ ಮೇಲೆ ಇಟ್ಟ ಪ್ರಯತ್ನ ಪಟ್ಟೆ. ಎಲ್ಲಾ ಸಮಾಜಕ್ಕೂ ಬಿಜೆಪಿ ಸರ್ಕಾರ ದ್ರೋಹ ಮಾಡಿದೆ. ಬಿಜೆಪಿಗೆ ರಾಜಕೀಯ ಬದ್ದತೆ ಇದೆಯಾ?, ಮೋಸ ಸುಳ್ಳು ಹೇಳಿಕೊಂಡು ಕಾಲ ಕಳೆಯುತ್ತಿದ್ದೀರಾ?, ರಾಜ್ಯದ ಜನರೇನು ದಡ್ಡರಾ?, ಒಕ್ಕಲಿಗರು ಲಿಂಗಾಯತರು ಭಿಕ್ಷುಕರಾ?. ನಾವು ಸ್ವಾಮೀಜಿ ಎಲ್ಲಾ ಕೇಳಿದ್ದು 16% ಮೀಸಲಾತಿ. ಅಲ್ಪಸಂಖ್ಯಾತರನ್ನು ದೇಶದಿಂದ ಓಡಿಸಿ ಬಿಡುತ್ತೀರಾ? ಅಂತ ಪ್ರಶ್ನಿಸಿದ್ದಾರೆ.
ಈಗ ಎಲ್ಲಾ ಮೀಸಲಾತಿ ರದ್ದಾಗಿದೆ. ಕೇಂದ್ರ ಮಂತ್ರಿಗಳು ಮೀಸಲಾತಿ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಮೀಸಲಾತಿ ಬಗ್ಗೆ ಏನು ಸಂಭ್ರಮಾಚರಣೆಗಳನ್ನು ಮಾಡಿದ್ರಿ?. ಮೇ. 13 ಬಿಜೆಪಿ ಸರ್ಕಾರದ ಶವಾಚರಣೆ ಆಗುತ್ತದೆ. ಮೋಸ ವಿಶ್ವಾಸ ದ್ರೋಹ ಮಾಡಿರುವ ಬಗ್ಗೆ ಯಾರು ಹೊಣೆ?. ಸಮಾಜದ ಬೆನ್ನಿಗೆ ಅಲ್ಲ ಮುಂದೆ ಹೃದಯಕ್ಕೆ ಚೂರಿ ಹಾಕಿದ್ದೀರಿ. ಡಬಲ್ ಇಂಜಿನ್ ಸರ್ಕಾರ ಸಂಸತ್‌ನಲ್ಲಿ ಮಾಡಬೇಕಿತ್ತು. 9ನೇ ಶೆಡ್ಯೂಲ್‌ಗೆ ಸೇರಿಸಬೇಕಿತ್ತು. ಬಿಜೆಪಿ ತಾನೇ ಮಾಡಿದ ಆದೇಶ ಈಗ ಬಿಜೆಪಿ ತಾನೇ ಹಿಟ್ ವಿಕೆಟ್ ಮಾಡಿಕೊಂಡಿದೆ. ಒಂದಲ್ಲ ಮೂರು ವಿಕೆಟ್ ಬೀಳಿಸಿಕೊಂಡಿದೆ. ಒಂದು ಲಿಂಗಾಯತ ಒಂದು ಒಕ್ಕಲಿಗ ಮೂರನೇಯದು ಎಸ್ ಸಿ ಎಸ್ ಟಿ.. ಪರಮ ವಿಶ್ವಾಸ ದ್ರೋಹಿ ಅಂತಾ ಮರು ನಾಮಕರಣ ಮಾಡಬೇಕು ಅಂತ ಬಿಜೆಪಿ ವಿರುದ್ಧ ಡಿಕೆಶಿ ಕೆಂಡ ಕಾರಿದ್ದಾರೆ.
ಕಾಂಗ್ರೆಸ್ ಗೆದ್ದರೆ 25 ಸಾವಿರ ಪೌರಕಾರ್ಮಿಕರ ಕೆಲಸ ಕಾಯಂ: ಸುರ್ಜೇವಾಲಾ ಭರವಸೆ
ಲಕ್ಷ್ಮಣ ಸವದಿ ಹಾಗೂ ಜಗದೀಶ್ ಶೆಟ್ಟರ್ ಸೋಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ಸೋಲಿಸುವುದು ಆಮೇಲೆ ಮೊದಲು ನಿಮ್ಮ ಕೆಲಸದ ಸಾಧನೆ ಏನು ಹೇಳಿ?. ಮಿಸ್ಟರ್ ಯಡಿಯೂರಪ್ಪ ನಿಮ್ಮ ಕೆಲಸ ಏನು ಹೇಳಿ?, 40%ನಿಂದಾಗಿ ಬಿಜೆಪಿ 40 ಸ್ಥಾನ ಗೆಲ್ಲಲಿದೆ. ನಾನು ರಕ್ತದಲ್ಲಿ ಬರೆದುಕೊಡುತ್ತೇನೆ. ಯುವಕರಿಗೆ ವರ್ತಕರಿಗೆ ಎಲ್ಲರಿಗೂ ಮೋಸ ಮಾಡಿದ್ದೀರಿ. ನೀವು 40 ಸೀಟು ನಾವು 150 ಸೀಟ್ ಗಳಿಸುತ್ತೇವೆ. ಇದನ್ನು ರಕ್ತದಲ್ಲಿ ನಾನು ಬರೆದುಕೊಡುತ್ತೇನೆ ಅಂತ ಹೇಳಿದ್ದಾರೆ.
ಇಡಿಯಿಂದ ನೋಟಿಸ್ ಕಿರುಕುಳ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿ.ಕೆ. ಶಿವಕುಮಾರ್, ಕುತಂತ್ರ ಷಡ್ಯಂತ್ರ ಮಾಡುತ್ತಿದ್ದಾರೆ. ಅವರು ಏನೇ ಮಾಡಿದರೂ ಜನರ ಆಶೀರ್ವಾದದಿಂದ ನಾನು ಹೊರ ಬರುತ್ತೇನೆ ಅಂತ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಎಂಎಲ್‌ಸಿ ದಿನೇಶ್ ಗೂಳಿಗೌಡ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ವಕ್ತಾರ ಎಂ.ಲಕ್ಷ್ಮಣ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.