ಹಲವು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಶೇ.10ರಷ್ಟು ಭರವಸೆಗಳನ್ನೂ ಈಡೇರಿಸಿಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಕೆಂಗೇರಿ (ಫೆ.26): ಹಲವು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಶೇ.10ರಷ್ಟು ಭರವಸೆಗಳನ್ನೂ ಈಡೇರಿಸಿಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಡೆದ ಯಶವಂತಪುರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಮುಂದಿನ ಚುನಾವಣೆಗೆ ಕ್ಷೇತ್ರದ ಅಭ್ಯರ್ಥಿಯಾಗಿ ಯಾರೇ ಆಯ್ಕೆಯಾದರೂ ಅವರಿಗೆ ಸಂಪೂರ್ಣ ಬೆಂಬಲ ನೀಡಬೇಕು. ಕಾಂಗ್ರೆಸ್ ತನ್ನದೇ ಆದ ಇತಿಹಾಸ ಹೊಂದಿದ್ದು, ಶೋಷಿತರು, ದಲಿತರು ಹಾಗೂ ಹಿಂದುಳಿದವರ ಏಳ್ಗೆಗೆ ಪಕ್ಷವು ಅಪಾರ ಕೊಡುಗೆ ನೀಡಿದೆ ಎಂದರು.
ಮಾಜಿ ಸಚಿವ ಎಚ್.ಎಂ.ರೇವಣ್ಣ, ಬಿಜೆಪಿ ಜನಪರ ಕಾರ್ಯಕ್ರಮ ನೀಡಿಲ್ಲ. ಬದಲಿಗೆ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತಂದು ಜನರನ್ನು ದಾರಿ ತಪ್ಪಿಸುತ್ತಿದೆ ಎಂದರು. ಪಕ್ಷ ನಡೆಸಿದ ಸರ್ವೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವುದು ದೃಢಪಟ್ಟಿದೆ ಎಂದರು. ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ್, ಕಾಂಗ್ರೆಸ್ ಪಕ್ಷಕ್ಕೆ ಎಸ್.ಟಿ.ಸೋಮಶೇಖರ್ ಅವರನ್ನು ಮರಳಿ ಕರೆ ತರುವ ಮಾತೇ ಇಲ್ಲ. ಅವರ ಮಾತಿಗೆ ಮರುಳಾಗಬೇಡಿ ಎಂದು ಕಾರ್ಯಕರ್ತರಿಗೆ ಹೇಳಿದರು.
ದಿಲ್ಲಿಯಲ್ಲಿ ಪ್ರಧಾನಿ ಮೋದಿ ಕನ್ನಡ ಡಿಂಡಿಮ: ಕರ್ನಾಟಕದ ಪರಂಪರೆಗೆ ಭಾರಿ ಮೆಚ್ಚುಗೆ
ಟಿಕೆಟ್ ಆಕಾಂಕ್ಷಿ ಚಿಕ್ಕರಾಯಪ್ಪ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನೀಡಿದ್ದ ಜನಪರ ಆಡಳಿತವನ್ನು ಜನತೆ ಮರೆತಿಲ್ಲ. ಇದು ಪಕ್ಷದ ಸಾಮಾಜಿಕ ಧೋರಣೆಗೆ ಹಿಡಿದ ಕನ್ನಡಿ ಎಂದರು. ಟಿಕೆಟ್ ಆಕಾಂಕ್ಷಿಗಳಾದ ನಟಿ ಭಾವನಾ, ಬಾಲರಾಜೇಗೌಡ, ಯುವ ಮುಖಂಡ ಕೃಷ್ಣಂರಾಜು ಮಾತನಾಡಿದರು. ಕಾಂಗ್ರೆಸ್ ಮುಖಂಡ ಎಚ್.ರಾಮಮೂರ್ತಿ, ರೇವಣಸಿದ್ದಯ್ಯ ಅಮೃತ ಗೌಡ ಇದ್ದರು.
ಉದ್ಯೋಗ ಸೃಷ್ಟಿಮಾಡುವಲ್ಲಿ ಮೋದಿ ಸರ್ಕಾರ ವಿಫಲ: ‘ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾವಂತರಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿದ್ದು, ವಿದ್ಯಾವಂತ ಯುವಕ, ಯುವತಿಯರಿಗೆ ಉದ್ಯೋಗ ನೀಡದೆ ವಂಚಿಸಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅರೋಪಿಸಿದರು. ಮಲ್ಲಸಂದ್ರದ ಖಾಸಗಿ ಪಾರ್ಟಿ ಹಾಲ್‌ನಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗೀತಾ ಶಿವರಾಮ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಷ್ಟಪಟ್ಟು ಓದಿ ಮುಂದೆ ಬಂದಿರುವ ಪ್ರತಿಭಾವಂತ ವಿದ್ಯಾರ್ಥಿಗಳ ಆಸೆಗಳನ್ನು ನಿರಾಸೆಗೊಳಿಸಿದ್ದಾರೆ. ಇಡೀ ದೇಶದಲ್ಲಿರುವ ಸರ್ಕಾರದ ಸಾಮ್ಯತೆಯುಳ್ಳ ಎಲ್ಲಾ ಕಂಪನಿಗಳನ್ನು ಖಾಸಗೀಕರಣ ಮಾಡಿ ಉದ್ಯೋಗ ಸೃಷ್ಟಿಸುವಲ್ಲಿ ವಿಫಲರಾಗಿದ್ದಾರೆ. ಉದ್ಯೋಗದ ಭರವಸೆ ಕಳೆದುಕೊಳ್ಳುವಂತೆ ಮಾಡಿದ ಮೋದಿ ನೇತೃತ್ವದ ಸರ್ಕಾರ ವಿದ್ಯಾವಂತರನ್ನು ಬೀದಿಗೆ ತಂದಿದ್ದಾರೆ’ ಎಂದು ಗುಡುಗಿದರು.
ಹಾಸನ ಟಿಕೆಟ್ ವಿಚಾರದಲ್ಲಿ ನನ್ನ ನಿರ್ಧಾರವೇ ಅಂತಿಮ: ಎಚ್.ಡಿ.ಕುಮಾರಸ್ವಾಮಿ
ನಮ್ಮ ಪಕ್ಷ ಮುಂಬರುವ ಚುನಾವಣೆಯಲ್ಲಿ ಅಧಿಕಾರ ಹಿಡಿಯಲಿದ್ದು, ನಿರುದ್ಯೋಗ ಸಮಸ್ಯೆಗಳನ್ನು ಪ್ರಾಮಣಿಕವಾಗಿ ಬಗೆಹರಿಸಲಾಗುವುದು. ಗೀತಾ ಶಿವರಾಮ್ ಅವರು ಇದನ್ನು ಮನಗಂಡು ಉದ್ಯೋಗ ಮೇಳ ಆಯೋಜನೆ ಮಾಡಿರುವುದು ಒಳ್ಳೆಯ ಕೆಲಸ’ ಎಂದರು. ಉದ್ಯೋಗ ಮೇಳದಲ್ಲಿ ಸುಮಾರು 70ಕ್ಕೂ ಹೆಚ್ಚು ವಿವಿಧ ಕಂಪನಿಗಳು ಸಂದರ್ಶನದ ಮೂಲಕ ಸಾವಿರಾರು ವಿದ್ಯಾವಂತರಿಗೆ ಉದ್ಯೋಗ ನೀಡಿದರು ಎಂದು ಆಯೋಜಕರಾದ ಗೀತಾ ಶಿವರಾಮ ತಿಳಿಸಿದರು.
