ರಾಷ್ಟ್ರಕವಿ ಕುವೆಂಪು ಅವರು ತಮ್ಮ ನಾಡಗೀತೆಯಲ್ಲಿ ‘ಜಯ ಭಾರತ ಜನನಿಯ ತನುಜಾತೆ’ ಎನ್ನುವ ಮೂಲಕ ಕರ್ನಾಟಕವನ್ನು ಭಾರತ ಮಾತೆಯ ಮಗಳೇ ಎಂದಿದ್ದಾರೆ.
ದೆಹಲಿ (ಫೆ.26): ರಾಷ್ಟ್ರಕವಿ ಕುವೆಂಪು ಅವರು ತಮ್ಮ ನಾಡಗೀತೆಯಲ್ಲಿ ‘ಜಯ ಭಾರತ ಜನನಿಯ ತನುಜಾತೆ’ ಎನ್ನುವ ಮೂಲಕ ಕರ್ನಾಟಕವನ್ನು ಭಾರತ ಮಾತೆಯ ಮಗಳೇ ಎಂದಿದ್ದಾರೆ. ‘ಏಕ ಭಾರತ, ಶ್ರೇಷ್ಠ ಭಾರತ’ದ ಪರಿಕಲ್ಪನೆ’ಯೂ ಇದೇ ಆಗಿದೆ. ಕರ್ನಾಟಕ ಹೊರತುಪಡಿಸಿದ ಭಾರತವನ್ನು ಊಹಿಸಲೂ ಸಾಧ್ಯವಿಲ್ಲ. ಕರ್ನಾಟಕದ ವಿಚಾರ ಪರಂಪರೆ ಮತ್ತು ಪ್ರಭಾವ ಎಂದೆಂದಿಗೂ ಅಮರ ಎಂದು ಪ್ರಧಾನಿ ನರೇಂದ್ರ ಮೋದಿಯವರು ಕನ್ನಡನಾಡು, ಕನ್ನಡ ಭಾಷೆಯ ಗುಣಗಾನ ಮಾಡಿದ್ದಾರೆ.
ದೆಹಲಿಯಲ್ಲಿ ಶನಿವಾರ ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಎಂದು ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ಮೋದಿ, ಕನ್ನಡ ಭಾಷೆ ಓದುವವರಲ್ಲಿ ರಿಡೀಂಗ್ ಹ್ಯಾಬಿಟ್ ಚೆನ್ನಾಗಿರುತ್ತದೆ. ಈ ಕೌಶಲ್ಯ ಬೇರೆ ಭಾಷೆಗಳಲ್ಲಿ ಇಲ್ಲ ಎಂದರು.
ಫೆ.27ರಂದು ಕುಂದಾನಗರಿಗೆ ಪ್ರಧಾನಿ ಮೋದಿ ಭೇಟಿ: ರೋಡ್ ಶೋಗೆ ಭರ್ಜರಿ ಸಿದ್ಧತೆ
ಹುನುಮನಿರದೆ ರಾಮನೂ ಇಲ್ಲ, ರಾಮಾಯಣನೂ ಇಲ್ಲ. ಪುರಾಣದ ಕಾಲದಿಂದಲೂ ಕರ್ನಾಟಕಕ್ಕೆ ವಿಶೇಷ ಮಹತ್ವವಿದೆ. ಕರ್ನಾಟಕದಲ್ಲಿ ಅನುಭವ ಮಂಟಪ, ತಮ್ಮ ವಚನಗಳ ಮೂಲಕ ಬಸವಣ್ಣ ಪ್ರಕಾಶಿಸುತ್ತಿದ್ದಾರೆ. ನನಗೆ ಲಂಡನ್‌ನಲ್ಲಿ ಬಸವಣ್ಣನವರ ಪ್ರತಿಮೆ ಉದ್ಘಾಟಿಸುವ ಅವಕಾಶ ಸಿಕ್ಕಿತು. ಬೇರೆ, ಬೇರೆ ಭಾಷೆಯಲ್ಲಿ ಅವರ ವಚನಗಳ ಪುಸ್ತಕ ಬಿಡುಗಡೆ ಮಾಡುವ ಅವಕಾಶ ದೊರೆಯಿತು ಎಂದರು.
ಸಿರಿಧಾನ್ಯದ ಪ್ರಮುಖ ಕೇಂದ್ರ ಕರ್ನಾಟಕ: ಕರ್ನಾಟಕ ಸಿರಿಧಾನ್ಯಗಳ ಪ್ರಮುಖ ಕೇಂದ್ರ. ಅಕ್ಕಿ, ರಾಗಿ ಕರ್ನಾಟಕ ಸಂಸ್ಕೃತಿಯ ಭಾಗ. ಯಡಿಯೂರಪ್ಪ ಸಿಎಂ ಆಗಿದ್ದಾಗ ಸಿರಿಧಾನ್ಯಕ್ಕೆ ಉತ್ತೇಜನ ನೀಡುವ ಕೆಲಸ ಶುರು ಮಾಡಿದರು. ಈಗ ಇಡಿ ವಿಶ್ವದಲ್ಲಿ ಇದರ ಬೇಡಿಕೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಸಣ್ಣ, ಸಣ್ಣ ರೈತರಿಗೂ ಇದರ ಲಾಭ ಸಿಗಲಿದೆ ಎಂದರು.
ಇದೇ ವೇಳೆ, ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಮೋದಿ, ಮೊದಲು ಕರ್ನಾಟಕದಲ್ಲಿ ಸರ್ಕಾರ ಮಾಡಿದವರು ಅಲ್ಲಿಂದ ಹಣವನ್ನು ಹೊರಗೆ ತೆಗೆದುಕೊಂಡು ಹೋಗುತ್ತಿದ್ದರು. ಆದರೀಗ ಇಲ್ಲಿಯ ಜನರ ಅಭಿವೃದ್ಧಿಗೆ ಇಲ್ಲಿಯ ಹಣ ಬಳಕೆಯಾಗುತ್ತಿದೆ. ರಾಜ್ಯದ ಅಭಿವೃದ್ಧಿಗೆ ಕಳೆದ ಮೂರು ವರ್ಷದ ಅವಧಿಯಲ್ಲಿ 30 ಸಾವಿರ ಕೋಟಿ ರು.ಗಳನ್ನು ಕೇಂದ್ರದ ಬಿಜೆಪಿ ಸರ್ಕಾರ ನೀಡಿದೆ. ಕಾಂಗ್ರೆಸ್ 10 ವರ್ಷದ ಅವಧಿಯಲ್ಲಿ ಕೇವಲ 11 ಸಾವಿರ ಕೋಟಿ ರು. ನೀಡಿತ್ತು. ನಮ್ಮ ಸರ್ಕಾರ ಪ್ರತಿ ವರ್ಷ ರಸ್ತೆ ಅಭಿವೃದ್ಧಿಗೆ 5 ಸಾವಿರ ಕೋಟಿ ನೀಡುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆ ಜಾರಿ ಮೂಲಕ ಮಧ್ಯ ಕರ್ನಾಟಕದ ಅಭಿವೃದ್ಧಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.
ಹಾಸನ ಟಿಕೆಟ್ ವಿಚಾರದಲ್ಲಿ ನನ್ನ ನಿರ್ಧಾರವೇ ಅಂತಿಮ: ಎಚ್.ಡಿ.ಕುಮಾರಸ್ವಾಮಿ
ಶತಮಾನೋತ್ಸವ ಆಚರಿಸಲಿ: ದೇಶ ಸ್ವಾತಂತ್ರ್ಯ ಪಡೆದ ಅಮೃತ ಮಹೋತ್ಸವ ಆಚರಿಸುತ್ತಿರುವ ಕಾಲದಲ್ಲೇ ದೆಹಲಿ ಕರ್ನಾಟಕ ಸಂಘ ಕೂಡ ಅಮೃತ ಮಹೋತ್ಸವ ಆಚರಿಸುತ್ತಿದೆ. ಸಂಘವೊಂದು 75 ವರ್ಷದ ಕಾರ್ಯಕ್ರಮ ನಡೆಸುವುದು ಸುಲಭದ ಮಾತಲ್ಲ. 2047ಕ್ಕೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ. ಆಗ ದೆಹಲಿ ಕರ್ನಾಟಕ ಸಂಘ ಕೂಡ ತನ್ನ ಶತಮಾನೋತ್ಸವ ಆಚರಣೆ ಮಾಡಲಿದೆ. ಹೀಗಾಗಿ ನಿಮ್ಮ ಜವಾಬ್ದಾರಿ ಹೆಚ್ಚಿದೆ ಎಂದು ಹೇಳಿದರು.
