Karnataka Politics: ರಾಜಕಾರಣದಿಂದ ನೇಪಥ್ಯಕ್ಕೆ ಸರಿದಿದ್ದ ಮುದ್ದಹನುಮೇಗೌಡ ಈಗ ಮತ್ತೆ ಸುದ್ದಿಯಲ್ಲಿ

* ರಾಜಕಾರಣದಿಂದ ನೇಪಥ್ಯ ಸರಿದಿದ್ದ ಎಸ್.ಪಿ.ಮುದ್ದಹನುಮೇಗೌಡ ಈಗ ಮತ್ತೆ ಸುದ್ದಿಯಲ್ಲಿ
* 2023ರ  ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಮುಂದಾದ ಮುದ್ದಹನುಮೇಗೌಡ
* ಹಾಲಿ ಕಾಂಗ್ರೆಸ್ ಶಾಸಕ ಕ್ಷೇತ್ರದ ಟಿಕೆಟ್ ಬೇಡಿಕೆ ಇಟ್ಟ ಮುದ್ದಹನುಮೇಗೌಡ್ರು

Congress Leader Muddahanumegowda demands kunigal Assembly Ticket rbj

ತುಮಕೂರು, (ನ.10): ಕಳೆದ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರ ಬಿಟ್ಟುಕೊಟ್ಟು ರಾಜಕಾರಣದಿಂದ ನೇಪಥ್ಯಕ್ಕೆ ಸರಿದಿದ್ದ ಕಾಂಗ್ರೆಸ್ ನಾಯಕ ಎಸ್.ಪಿ.ಮುದ್ದಹನುಮೇಗೌಡ (Muddahanumegowda) ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

ಈ ಹಿಂದಿನ ಲೋಕಸಭೆ ಚುನಾವಣೆಯಲ್ಲಿ (Loksabha Election)  ಹಾಲಿ ಸಂಸದರಾಗಿದ್ದ ಎಸ್.ಪಿ.ಮುದ್ದಹನುಮೇಗೌಡ ಆವರಿಗೆ ಟಿಕೆಟ್ ನಿರಾಕರಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು (HD Devegowda) ತುಮಕೂರು ಲೋಕಸಭಾ (Tumakuru Loksabha Election) ಕ್ಷೇತ್ರದಿಂದ ಕಣಕ್ಕಿಳಿಸಲಾಗಿತ್ತು. ಇದೀಗ ಮತ್ತೆ ಮುದ್ದಹನುಮೇಗೌಡ್ರು ರಾಜಕೀಯ ನೆಲೆ ಕಂಡುಕೊಳ್ಳಲು ಮುಂದಾಗಿದ್ದಾರೆ.

ಯಾರಿಂದಲೂ ಹಣ ಪಡೆದಿಲ್ಲ: ಮಂಜುನಾಥನ ಸನ್ನಿಧಿಯಲ್ಲಿ ಮುದ್ದಹನುಮೇಗೌಡರ ಆಣೆ!

ಹೌದು...2023ರ ವಿಧನಾಸಭಾ ಚುನಾವಣೆಗೆ ಟಿಕೆಟ್ ಲಾಬಿ ನಡೆಸಿದ್ದು, ತುಮಕೂರು ಜಿಲ್ಲೆಯ ಕುಣಿಗಲ್(Kunigal)  ವಿಧಾನಸಭೆ  ಕ್ಷೇತ್ರದ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ.

ಇನ್ನು ಈ ಬಗ್ಗೆ ತುಮಕೂರಿನಲ್ಲಿ ಇಂದು (ನ.10) ಸುದ್ದಿಗಾರರೊಂದಿಗೆ ಮಾತನಾಡಿದ ಮುದ್ದಹನುಮೇಗೌಡ್ರು,ನಾನು ಲೋಕಸಭೆಯಲ್ಲಿ ಮೈತ್ರಿ ಅಭ್ಯರ್ಥಿ ದೇವೇಗೌಡರಿಗಾಗಿ ನನ್ನ ಸ್ಥಾನ ತ್ಯಾಗ ಮಾಡಿದ್ದೆ. ಈಗ ನನಗಾಗಿ ಶಾಸಕ ಡಾ.ರಂಗನಾಥ್ ಸ್ಥಾನ ತ್ಯಾಗ ಮಾಡಲಿ ಎಂದು ಹೇಳುವ ಮೂಲಕ 2023ರ ವಿಧನಾಸಭಾ ಚುನಾವಣೆಗೆ ಕುಣಿಗಲ್‌ನಿಂದ ಸ್ಪರ್ಧಿಸುವ ಆಸೆ ವ್ಯಕ್ತಪಡಿಸಿದ್ದಾರೆ.

ನಾನು ಕುಣಿಗಲ್ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಲು ಇಚ್ಚಿಸಿದ್ದೇನೆ. 2019ರ ಚುನಾವಣೆ ವೇಳೆ ವರಿಷ್ಠರು ಆಶ್ವಾಸನೆ ಕೊಟ್ಟಿದ್ರು. ಆದರೆ ದುರಾದೃಷ್ಟ ಈಡೇರಿಸಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್ ಕಾಲ್ ಮಾಡಿ ರಾಜ್ಯಸಭಾ ಸದಸ್ಯರನ್ನಾಗಿ ಮಾಡೋದಾಗಿ ಹೇಳಿದ್ರು. ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಆದರೂ ನಾನೂ ಅಸಮಾಧಾನ ವ್ಯಕ್ತಪಡಿಸಿಲ್ಲ. ನಾನು ರಾಜಕೀಯ ಸನ್ಯಾಸಿಯಾಗಿಲ್ಲ. ನಾನು ನನ್ನ ಸಮಯಕ್ಕಾಗಿ ಕಾಯುತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಇಲ್ಲಿಂದ ಸ್ಪರ್ಧೆ ಮಾಡಬೇಕೆಂದು ಗಂಭೀರವಾಗಿ ಪರಿಗಣಿಸಿದ್ದೇನೆ. ರಾಜ್ಯ ಉಸ್ತುವಾರಿ ಸುರ್ಜೆವಾಲಾರಿಗೂ ಈ ಬಗ್ಗೆ ಬೇಡಿಕೆ ಇಟ್ಟಿದ್ದೇನೆ. ರಾಜ್ಯ ಪಕ್ಷದ ಮುಖಂಡರಿಗೂ ಹೇಳಿದ್ದೇನೆ. ನಾನು ಕುಣಿಗಲ್ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದೆ. ಅಲ್ಲಿ ಹಾಲಿ ಶಾಸಕರಿರುವುದರಿಂದ ಟಿಕೆಟ್ ಕೊಡಲು ಆಗಲ್ಲ ಅಂತಿದ್ದಾರೆ. ನಾನೂ ಹಾಲಿ ಸಂಸದರಿರುವಾಗ ನನಗೆ ಟಿಕೆಟ್ ತಪ್ಪಿಸಿ ದೇವೇಗೌಡರಿಗೆ ಕೊಟ್ಟಿದ್ದು ನೆನಪಿಸಿದೆ. ನಾನು ಅಂದು ತ್ಯಾಗ ಮಾಡಿದಕ್ಕೆ ಇಂದು ಕುಣಿಗಲ್ ಶಾಸಕರು ತ್ಯಾಗ ಮಾಡಲಿ ಎಂದರು.

ಕುಣಿಗಲ್ ಕಾಂಗ್ರೆಸ್ ಹಾಲಿ ಶಾಸಕ ಡಾ.ರಂಗನಾಥ್  ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸಂಬಂಧಿಯಾಗಿದ್ದು, ಮುದ್ದಹನುಮೇಗೌಡರ ಹೇಳಿಕೆಯಿಂದ ಶಾಸಕ ರಂಗನಾಥ್ ಪೇಚಿಗೆ ಸಿಲುಕಿದ್ದಾರೆ.

ಮುದ್ದಹನುಮೇಗೌಡ್ರಿಗೆ ಕೊಟ್ಟ ಭರವಸೆ ಈಡೇರಿಲ್ಲ 
ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಅಸ್ಥಿತ್ವದಲ್ಲಿದ್ದ ಮೈತ್ರಿ ಸರ್ಕಾರದ ಉಳುವಿಗಾಗಿ ಮುದ್ದಹನುಮೇಗೌಡರು ತ್ಯಾಗ ಮಾಡಿದ್ದರು. ಅವರ ಮನವೊಲಿಕೆ ನಡೆಸಿದ ಆಗಿನ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಹಾಗೂ ಇತರೆ ನಾಯಕರು ಮುಂದೆ ರಾಜ್ಯಸಭೆ ಚುನಾವಣೆಯಲ್ಲಿ ಅವಕಾಶ ಕಲ್ಪಿಸುವುದಾಗಿ ಖಚಿತ ಭರವಸೆ ಕೊಟ್ಟಿದ್ದರು. ಆದರೆ, ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸೋಲು ಕಂಡರು. ರಾಷ್ಟ್ರ ರಾಜಕಾರಣದ ದೃಷ್ಟಿಯಿಂದ ಕಾಂಗ್ರೆಸ್ ಹೈಕಮಾಂಡ್ ಖರ್ಗೆ ಅವರಿಗೆ ರಾಜ್ಯಸಭೆಗೆ ಟಿಕೆಟ್ ನೀಡಿತ್ತು. 

ಇದರಿಂದ ನಿರಾಶರಾಗಿರುವ ಮುದ್ದಹನುಮೇಗೌಡರು ತಮ್ಮ ಅಸಮಾಧಾನ ಹೊರ ಹಾಕಿದ್ದು, ಹಾಲಿ ಸಂಸದರ ಪೈಕಿ ಕ್ಷೇತ್ರ ಬಿಟ್ಟುಕೊಟ್ಟಿದ್ದು ನಾನೊಬ್ಬನೇ. ಪಕ್ಷದ ಹಿತಕ್ಕಾಗಿ ತ್ಯಾಗ ಮಾಡಿದೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ನಿಮ್ಮ ತ್ಯಾಗ ಮರೆಯುವುದಿಲ್ಲ. ರಾಜ್ಯಸಭೆಗೆ ಅವಕಾಶ ಮಾಡಿಕೊಟ್ಟೇ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು.

ಈಗ ಮಲ್ಲಿಕಾರ್ಜುನಖರ್ಗೆ ಅವರಿಗೆ ಅವಕಾಶ ಸಿಕ್ಕಿದೆ. ಅವರು ಹಿರಿಯ ನಾಯಕರು. ಅವರಿಗೆ ಅವಕಾಶ ಸಿಕ್ಕಿರುವುದಕ್ಕೆ ನನಗೆ ಯಾವುದೇ ಅಸಮಾಧಾನ ಇಲ್ಲ. ಕಾಂಗ್ರೆಸ್ ನಾಯಕರು ಆಗ ಭರವಸೆ ಕೊಟ್ಟಂತೆ ನನಗೆ ನ್ಯಾಯ ಒದಗಿಸಬೇಕು ಅಂದು ಹೇಳಿದ್ದರು. ಇದೀಗ ಕುಣಿಗಲ್ ವಿಧಾನಸಭೆ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ.

ಒಟ್ಟಿನಲ್ಲಿ 2023ರ ವಿಧನಾಸಭಾ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಈಗಿನಿಂದಲೇ ಟಿಕೆಟ್ ಲಾಬಿ ಶುರುವಾಗಿದ್ದು, ಮುದ್ದಹನುಮೇಗೌಡ್ರಿಗಾಗಿ ಹಾಲಿ ಶಾಸಕ ಡಾ.ರಂಗನಾಥ್ ಸ್ಥಾನ ತ್ಯಾಗ ಮಾಡ್ತಾರಾ? ಅಥವಾ ಕಾಂಗ್ರೆಸ್ ಹೈಕಮಾಂಡ್ ಮುದ್ದಹನುಮೇಗೌಡ ಅವರಿಗೆ ಬೇರೆ ಕ್ಷೇತ್ರದತ್ತ ಕಳುಹಿಸುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

Latest Videos
Follow Us:
Download App:
  • android
  • ios