'ಕಾಂಗ್ರೆಸ್‌ನಿಂದ RR ನಗರಕ್ಕೆ ಅಚ್ಚರಿ ಅಭ್ಯರ್ಥಿ' ಸೂಚನೆ ಕೊಟ್ಟ ಕಾಂಗ್ರೆಸ್ ಲೀಡರ್
ಶೀಘ್ರದಲ್ಲೇ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಆರ್ ಆರ್ ನಗರಕ್ಕೆ ಕಾಂಗ್ರೆಸ್‌ನಿಂದ ಅಚ್ಚರಿ ಅಭ್ಯರ್ಥಿ ಬರಲಿದ್ದಾರೆ ಎಂದು ಮುಖಂಡರು ಹೇಳಿದ್ದಾರೆ.
ಬೆಂಗಳೂರು (ಅ.02): ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಇದು ಪಕ್ಷದ ನಿಲುವು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಉಪ ಚುನಾವಣೆಯಲ್ಲಿ ಯಾರ ಜತೆಯೂ ಮೈತ್ರಿ ಇಲ್ಲ ಎಂದು ಪ್ರತಿಪಕ್ಷ ನಾಯಕರು ಹೇಳಿದ್ದಾರೆ. ಇದೇ ಪಕ್ಷದ ನಿಲುವು ಕೂಡ ಆಗಿದೆ. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಕೊರತೆಯಿಲ್ಲ. ಅಚ್ಚರಿಯ ಅಭ್ಯರ್ಥಿ ಬರಬಹುದು ಎಂದಿದ್ದಾರೆ.
ಮಾಜಿ ಶಾಸಕ ಮುನಿರತ್ನ ಕಾಂಗ್ರೆಸ್‌ಗೆ ವಾಪಸ್ ಬರುವ ವಿಚಾರದ ಬಗ್ಗೆ ನಮ್ಮ ರಾಜ್ಯಾಧ್ಯಕ್ಷರನ್ನೇ ಕೇಳಿ ಎಂದು ಮಾಧ್ಯಮಗಳಿಗೆ ಖರ್ಗೆ ಹೇಳಿದರು.
ಬಿಜೆಪಿ ಕೋರ್ ಕಮೀಟಿ ಸಭೆ; ಆರ್‌ಆರ್‌ನಗರಕ್ಕೆ ಮುನಿ ಜತೆ ಮತ್ತೊಂದು ಅಚ್ಚರಿ ಹೆಸರು! .
ಬಾಬರಿ ಮಸೀದಿ ಒಡೆದದ್ದು ಯಾರು: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಗಳನ್ನು ನ್ಯಾಯಾಲಯ ಖುಲಾಸೆ ಮಾಡಿರುವುದು ಬೇಸರ ತರಿಸಿದೆ. ಈ ಘಟನೆಯನ್ನು ಅನೇಕ ಸಾಕ್ಷಿಗಳು ನೋಡಿದ್ದು ವಿಶ್ವದ ಎಲ್ಲ ಪತ್ರಿಕೆಗಳಲ್ಲಿ ದೃಶ್ಯರೂಪದ ವರದಿಗಳಿವೆ. ಆದರೆ ವಿಶೇಷ ಸಾಕ್ಷಿ ಇಲ್ಲವೆಂದು ಸಿಬಿಐ ನ್ಯಾಯಾಲಯ ಖುಲಾಸೆ ಮಾಡಿರುವುದು ನೋವಿನ ಸಂಗತಿ. ನ್ಯಾಯಾಂಗ ಕೂಡ ಸಾಕ್ಷಿ ಪರಿಗಣಿಸದೇ ತೀರ್ಪು ನೀಡಿರುವುದು ಸರಿಯಲ್ಲ. ನ್ಯಾಯಾಂಗದ ಮೇಲೆ ಜನರಿಗೆ ವಿಶ್ವಾಸ ಹೋಗುತ್ತಿದೆ ಎಂದು ಖರ್ಗೆ ಹೇಳಿದರು.
ಎಲ್.ಕೆ. ಅಡ್ವಾಣಿಯವರು ರಾಮರಥ ಯಾತ್ರೆ ಪ್ರಾರಂಭಿಸಿದ್ದರು. ಬಿಜೆಪಿಯವರು ಇದಕ್ಕೆ ಕುಮ್ಮಕ್ಕು ನೀಡಿದ್ದರು. ಕರಸೇವಕರು ಎಲ್ಲಿಂದ ಬಂದರು, ಇಟ್ಟಿಗೆ, ಕಟ್ಟಡ ನಿರ್ಮಾಣ ವಸ್ತು ಎಲ್ಲಿಂದ ಬಂದವು, ಬಾಬರಿ ಮಸೀದಿ ಬಳಿಗೆ ಕರಸೇವಕರನ್ನು ಕರೆದೊಯ್ದಿದ್ದು ಹೇಗೆ, ಅದಕ್ಕೆ ಯಾರಾದರೂ ಸಾಥ್ ನೀಡಿರಬೇಕಲ್ಲವೇ, ಹಾಗಾದರೆ ಬಾಬರಿ ಮಸೀದಿ ಒಡೆದದ್ದು ಯಾರು ಎಂದು ಖರ್ಗೆ ಪ್ರಶ್ನಿಸಿದರು.