'ಸಂತೋಷ್ ಆತ್ಮಹತ್ಯೆ ಕೇಸ್: ಇಲ್ಲಿ ಹಳಿ ಮೇಲೆ ಕುಳಿತವರು ಸಾಯಬೇಕಷ್ಟೇ'
* ಕಾಂಟ್ರಾಕ್ಟರ್ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ
* ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ
* ಈಶ್ವರಪ್ಪ ವಿರುದ್ದ ಸಿಓಡಿ ತನಿಖೆ ಆದ್ರೂ, ಸಿಬಿಐ ತನಿಖೆ ಆದ್ರೂ ಪ್ರಯೋಜನವಾಗದು
ವರದಿ :- ಶರಣಯ್ಯ ಹಿರೇಮಠ, ಏಷ್ಯಾನೇಟ್ ಸುವರ್ಣ ನ್ಯೂಸ್ ಕಲಬುರಗಿ
ಕಲಬುರಗಿ, (ಏ.12): ಸಚಿವ ಈಶ್ವರಪ್ಪ (KS Eshwarappa) ಹೆಸರು ಬರೆದು ಕಾಂಟ್ರಾಕ್ಟರ್ ಒಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಆಗ್ರಹಿಸಿದ್ದಾರೆ.
ಕಲಬುರಗಿಯಲ್ಲಿ ಇಂದು(ಮಂಗಳವಾರ) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ನಡೆಯಿಂದ ಗುತ್ತಿಗೆದಾರರರು ಬೇಸತ್ತು ಹೋಗಿದ್ದಾರೆ. ಪರ್ಸೆಂಟೆಜ್ ಪಡೆಯುತ್ತಾರೆ ಎಂದು ಕೆಲ ಗುತ್ತಿಗೆದಾರರು ಸ್ವತಃ ಪ್ರಧಾನಿ ಮೋದಿಗೆ ಪತ್ರ ಸಹ ಬರೆದಿದ್ದಾರೆ. ಆದ್ರೆ ಏನೂ ಪ್ರಯೋಜನವಾಗಿಲ್ಲ ಎಂದರು.
ಈಶ್ವರಪ್ಪ ರಾಜೀನಾಮೆ ಕೊಡುವವರೆಗೂ ತಮ್ಮನ ಮೃತದೇಹ ಎತ್ತಲ್ಲ ಸಂತೋಷ್ ಸಹೋದರ ಆಕ್ರೋಶ!
ರಾಜ್ಯ ಹಾಗೂ ಕೇಂದ್ರ ಸರ್ಕಾರ ಭ್ರಷ್ಟಾಚಾರಕ್ಕೆ ಹೇಗೆ ಕಡಿವಾಣ ಹಾಕಬೇಕು ಎಂದು ವಿಚಾರ ಮಾಡುತ್ತಿಲ್ಲ. ಈ ಬಗ್ಗೆ ದೆಹಲಿಯಲ್ಲಿ ಸಿಎಂ ಬೊಮ್ಮಾಯಿ ಜೊತೆಗೂ ಚರ್ಚಿಸಿದ್ದೆ. ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ, ಈ ಬಗ್ಗೆ ಎಚ್ಚರಿಕೆ ವಹಿಸಿ ಅಂತಾ ಹೇಳಿದ್ದೆ. ಆದ್ರೂ ಯಾವುದೇ ಕಡಿವಾಣ ಬಿದ್ದಿಲ್ಲ. ಅಭಿವೃದ್ಧಿ ಹೆಸರಲ್ಲಿ ರಾಜ್ಯದಲ್ಲಿ ಪರ್ಸೆಂಟೆಜ್ ರಾಜಕಾರಣ ನಡೆಯುತ್ತಿರುವುದು ದುರಂತ ಎಂದು ಮಲ್ಲಿಕಾರ್ಜುನ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗುತ್ತಿಗೆದಾರನ ಆತ್ಮಹತ್ಯೆ ಕುರಿತಂತೆ ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಈ ಸಂಬಂಧ ಸೂಕ್ತ ತನಿಖೆ ನಡೆಸಬೇಕು. ರಾಜ್ಯ ಮತ್ತು ಕೇಂದ್ರದಲ್ಲಿ ಡಬಲ್ ಇಂಜಿನ್ ಸರಕಾರ ಇದೆ. ಸಿಒಡಿ ತನಿಖೆ ಆದ್ರೂ ಅಷ್ಟೇ, ಸಿಬಿಐ ತನಿಖೆ ಆದ್ರೂ ಅಷ್ಟೇ. ಈ ಡಬಲ್ ಇಂಜಿನ್ ಸರಕಾರದಿಂದ ತನಿಖೆಯ ಪ್ರಯೋಜನ ಸಿಗೋದಿಲ್ಲ. ಇಲ್ಲಿ ಹಳಿ ಮೇಲೆ ಕುಳಿತವರು ಸಾಯಬೇಕಷ್ಟೇ ಎಂದು ತನಿಖೆಯ ಬಗ್ಗೆ ವ್ಯಂಗ್ಯವಾಡಿದರು.
ಧರ್ಮ ದಂಗಲ್ ಬಿಜೆಪಿ ಕೈವಾಡ
ರಾಜ್ಯದಲ್ಲಿ ಇತ್ತಿಚಿಗೆ ಧರ್ಮದಂಗಲ್ ಹೆಚ್ಚುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ಸಣ್ಣ ಸಣ್ಣ ವಿಷಯಕ್ಕೂ ಇತ್ತಿಚಿಗೆ ಗಲಾಟೆ ಹೆಚ್ಚುತ್ತಿವೆ. ಈ ಸಂಘರ್ಷದ ಹಿಂದೆ ಬಿಜೆಪಿಯ ಕೈವಾಡ ಇದೆ ಎಂದರು. ಮತಗಳಿಗಾಗಿ ಬಿಜೆಪಿ ರಾಜ್ಯದ ಶಾಂತಿ ಹಾಳು ಮಾಡಲು ಯತ್ನಿಸುತ್ತಿದೆ ಎಂದರು.
ಬಿಜೆಪಿಯ ಈ ಕೃತ್ಯಗಳಿಂದಾಗಿ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ಅಂತರರಾಷ್ಟ್ರೀಯ ಹೂಡಿಕೆದಾರರು ಬೇರೆ ರಾಜ್ಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇರುವ ಕೈಗಾರಿಕೆಗಳೂ ಮುಚ್ಚಿಕೊಂಡು ಹೋಗುವ ಸ್ಥಿತಿಗೆ ಬಂದಿವೆ. ನಿರುದ್ಯೋಗ ಹೆಚ್ಚಾಗುತ್ತಿದೆ. ಇದಕ್ಕೆ ರಾಜ್ಯದ ಬಿಜೆಪಿ ಸರಕಾರವೇ ಕಾರಣ ಎಂದು ಕಿಡಿಕಾರಿದರು.
ಇಡಿ ವಿಚಾರಣೆ ಪ್ರತಿಕ್ರಿಯೆಗೆ ನಕಾರ
ನ್ಯಾಷನಲ್ ಹೆರಾಲ್ಡ್‌ಗೆ ಸಂಬಂಧಿಸಿದಂತೆ ಇಡಿ ವಿಚಾರಣೆಗೆ ತಮ್ಮನ್ನು ಒಳಪಡಿಸಿರುವ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಲು ಮಲ್ಲಿಕಾರ್ಜುನ ಖರ್ಗೆ ನಿರಾಕರಿಸಿದರು. ಈ ಬಗ್ಗೆ ನಾನು ಮಾತನಾಡಲಾರೆ ಎಂದಷ್ಟೇ ಹೇಳಿ ಜಾರಿಕೊಂಡರು.