ಬೆಂಗಳೂರು, (ಸೆ.14): ಜೆಡಿಎಸ್ ಶಾಸಕ ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಎದುರಾಗಿದೆ. ಆದ್ರೆ, ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆಗಲೇ ಚುನಾವಣೆ ಕಾವು ರಂಗೇರಿದೆ. 

ಕಾಂಗ್ರೆಸ್‌ನ ಟಿ.ಬಿ ಜಯಚಂದ್ರ ಅವರು ಕ್ಷೇತ್ರದಾದ್ಯಂತ ಪ್ರಚಾರಕ್ಕಿಳಿದಿದ್ದಾರೆ. ಆದ್ರೆ, .ಎನ್‌. ರಾಜಣ್ಣ ಬಂಡಾಯದ ಮುನ್ಸೂಚನೆ ಜಯಚಂದ್ರ ಅವರಿಗೆ ದೊಡ್ಡ ತಲೆನೋವಾಗಿದೆ.

ಶಿರಾ ಭಿನ್ನಮತ ಕಾಂಗ್ರೆಸ್‌ಗೆ ತಲೆನೋವು

ಡಿಕೆಶಿ-ರಾಜಣ್ಣ ಭೇಟಿ
ಇಂದು (ಸೋಮವಾರ) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕ ಕೆ.ಎನ್. ರಾಜಣ್ಣ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದರು. ಬಂಡಾಯ ಸ್ಫೋಟಗೊಳ್ಳುವ ಮುನನ್ವೇ ಕೆ.ಎನ್. ರಾಜಣ್ಣ ಅವರನ್ನು ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸಕ್ಕೆ ಕರೆಸಿಕೊಂಡ ಡಿಕೆಶಿ, ಶಿರಾ ಬೈ ಎಲೆಕ್ಷನ್‌ ಕುರಿತು ಚರ್ಚಿಸಿದರು.

ಶಿರಾವನ್ನು ಈವರೆಗೂ ಪ್ರತಿನಿಧಿಸುತ್ತಿದ್ದ ಮಾಜಿ ಸಚಿವ ಟಿಬಿ ಜಯಚಂದ್ರ ಅವರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಬಹುತೇಕ ಟಿಕೆಟ್ ಅಂತಿಮಗೊಂಡಿದೆ. ಆದರೆ ಮಧುಗಿರಿ ಕ್ಷೇತ್ರದ ಮಾಜಿ ಶಾಸಕ ರಾಜಣ್ಣ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇದರಿಂದ ಚುನಾವಣೆ ವರೆಗೆ ಗೊಂದ ಮುಂದುವರಿದರೆ ಕ್ಷೇತ್ರ ಕಳೆದುಕೊಳ್ಳಬೇಕಾಗಬಹುದು ಎಂದರಿತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭಾನುವಾರ ದೂರವಾಣಿ ಮೂಲಕ ಚರ್ಚಿಸಿ, ಗೊಂದಲಕ್ಕೆ ತೆರೆ ಎಳೆಯಲು ನಿರ್ಧರಿಸಿದ್ದರು.

ರಂಗೇರಿದ ತುಮಕೂರು ರಾಜಕಾರಣ: ಸಂಚಲನ ಮೂಡಿಸಿದ ರಾಜಣ್ಣ ನಡೆ

ಹೀಗಾಗಿ ಸೋಮವಾರ ರಾಜಣ್ಣ ಅವರನ್ನು ಬೆಂಗಳೂರಿಗೆ ಕರೆಸಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಉಪಚುನಾವಣೆ ಸಂಬಂಧ ಚರ್ಚೆ ನಡೆಸಿದರು. ಜತೆಗೆ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುವಂತೆ ರಾಜಣ್ಣ ಅವರನ್ನು ಕೋರಿದರು ಎಂದು ತಿಳಿದುಬಂದಿದೆ.

ಈಗಾಗಲೇ ಟಿ.ಬಿ. ಜಯಚಂದ್ರ ಅವರು ಸಹ ಈ ಬಗ್ಗೆ ಸಿದ್ದರಾಮಯ್ಯ ಅವರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಈ ಬಗ್ಗೆ ಕೊರಟಗೆರೆ ಶಾಸಕ ಡಾ.ಜಿ. ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಸಹ ಶಿರಾ ಉಪಚುನಾವಣೆ ಕುರಿತು ಮಾತುಕತೆ ಮಾಡಿದ್ದಾರೆ.

ಅಂತಿಮಾಗಿ ಕಾಂಗ್ರೆಸ್‌ನಿಂದ ಟಿ.ಬಿ. ಜಯಚಂದ್ರ ಅವರೇ ಅಭ್ಯರ್ಥಿಯಾಗಲಿದ್ದು, ರಾಜಣ್ಣ ಕನಸು ಭಗ್ನಗೊಳ್ಳುವ ಎಲ್ಲಾ ಸಾಧ್ಯತೆಗಳು ಹೆಚ್ಚಿವೆ. ಒಂದು ಜಯಚಂದ್ರ ಅವರ ಮೇಲಿನ ವೈಯಕ್ತಿಕ ದ್ವೇಷದಿಂದ ಕೆ.ಎನ್. ರಾಜಣ್ಣ ಚುನಾವಣೆ ಅಖಾಡಕ್ಕಿಳಿದರೂ ಅಚ್ಚರಿಪಡಬೇಕಿಲ್ಲ.