Karnataka Politics: ಕೋಲಾರ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ!

ಜಿಲ್ಲೆಯಲ್ಲಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಮತ್ತೊಮ್ಮೆ ಸ್ಫೋಟಗೊಂಡಂತಾಗಿದೆ. ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹಾಗೂ ಮಾಜಿ ಶಾಸಕರಾದ ಮುಳಬಾಗಿಲಿನ ಕೊತ್ತೂರು ಮಂಜುನಾಥ್‌, ಚಿಂತಾಮಣಿಯ ಡಾ.ಎಂ.ಸಿ.ಸುಧಾಕರ್‌ ವಿರುದ್ಧ ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

congress leader kh muniyappa slams ramesh kumar in kolar gvd

ಕೋಲಾರ (ಮಾ.31): ಜಿಲ್ಲೆಯಲ್ಲಿ ಕಾಂಗ್ರೆಸ್‌ನಲ್ಲಿ (Congress) ಭಿನ್ನಮತ ಮತ್ತೊಮ್ಮೆ ಸ್ಫೋಟಗೊಂಡಂತಾಗಿದೆ. ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ (Ramesh Kumar) ಹಾಗೂ ಮಾಜಿ ಶಾಸಕರಾದ ಮುಳಬಾಗಿಲಿನ ಕೊತ್ತೂರು ಮಂಜುನಾಥ್‌, ಚಿಂತಾಮಣಿಯ ಡಾ.ಎಂ.ಸಿ.ಸುಧಾಕರ್‌ ವಿರುದ್ಧ ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ (KH Muniyappa) ಏಕವಚನದಲ್ಲಿ ವಾಗ್ದಾಳಿ ನಡೆಸುವ ಮೂಲಕ ಮುಂದಿನ ಚುನಾವಣೆಯಲ್ಲಿ ನಿನ್ನ ಕಥೆ ನೋಡಿಕೊಳ್ಳುತ್ತೇನೆ ಎಂದು ರಮೇಶ್‌ ಕುಮಾರ್‌ಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊತ್ತೂರು ಮಂಜುನಾಥ್‌ ಮತ್ತು ಡಾ.ಎಂ.ಸಿ.ಸುಧಾಕರ್‌ ಅವರಿಗೆ ಎಚ್ಚರಿಕೆ ನೀಡಿ ಕಾಂಗ್ರೆಸ್‌ ಪಕ್ಷಕ್ಕೆ ಬರಲು ನಿಮಗೆ ಮಾನ ಮರ್ಯಾದೆ ಇದಿಯಾ ಎಂದು ಪ್ರಶ್ನಿಸಿದ್ದಾರೆ.

ಕಾರಣಾಂತರಗಳಿಂದ ಪಂಚರಾಜ್ಯಗಳಲ್ಲಿ ಕಾಂಗ್ರೆಸ್‌ ಪಕ್ಷ ಸೋತಿದೆ. ಆ ಪರಿಣಾಮ ಕರ್ನಾಟಕದಲ್ಲಿ ಬೀರುವುದಿಲ್ಲ. ಬಿಜೆಪಿಯವರಿಗೆ ಅಭಿವೃದ್ಧಿ ಮುಖ್ಯವಲ್ಲ ಅಧಿಕಾರ ಮುಖ್ಯವಾಗಿದೆ. ಕೋಮುಗಲಭೆಗಳನ್ನು ಸೃಷ್ಟಿಸಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ನನಗೆ ಎಷ್ಟೇ ನೋವಾಗಿದ್ದರೂ ಅದನ್ನು ನುಂಗಿಕೊಂಡು ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತರಬೇಕೆಂದು ನಾನು ಪ್ರಯತ್ನಿದಲ್ಲಿರುವಾಗ ವಿನಃ ಕಾರಣ ನನ್ನ ಹೆಸರನ್ನು ಪದೇ ಪದೆ ಬಳಸಿಕೊಂಡು ನಿನ್ನನ್ನು ಸೋಲಿಸುವುದೇ ನಮ್ಮ ಗುರಿ ಎಂದು ಹೇಳುತ್ತಿದ್ದಾರೆ ಎಂದು ಮಾಜಿ ಶಾಸಕರಾದ ಕೊತ್ತೂರು ಮಂಜುನಾಥ್‌ ಮತ್ತು ಡಾ.ಎಂ.ಸಿ ಸುಧಾಕರ್‌ ವಿರುದ್ಧ ಗುಡುಗಿದರು. 

KH Muniyappa: ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಾದರೆ ಸ್ವಾಗತ

ಸುಳ್ಳು ಪ್ರಮಾಣ ಪತ್ರಗಳನ್ನು ಸೃಷ್ಟಿಮಾಡಿ ಚುನಾವಣೆಯಲ್ಲಿ ಗೆದ್ದು ನಂತರ ಹೈಕೋರ್ಟ್‌ನಲ್ಲಿ ಛೀಮಾರಿ ಹಾಕಿಸಿಕೊಂಡು ಸುಪ್ರೀಂ ಕೋರ್ಟ್‌ಗೆ ಹೋಗಿರುವ ಕೊತ್ತೂರು ಮಂಜುನಾಥ್‌ ಜನರಿಗೆ ಹಣ, ಬೈಕ್‌ಗಳನ್ನು ನೀಡಿ ಹಾಳು ಮಾಡಿದ್ದಲ್ಲದೆ ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿ ಗೆಲ್ಲಿಸಿ ತಲೆ ಮೇಲೆ ಹೊತ್ತು ತಿರುಗಿದ್ದಾರೆ. ಈಗ ಮತ್ತೆ ಕಾಂಗ್ರೆಸ್‌ಗೆ ಬರುತ್ತೇವೆ ಎಂದು ಹೇಳುತ್ತಿದ್ದೀಯ ನಿನಗೆ ಕಾಂಗ್ರೆಸ್‌ಗೆ ಬರಲು ಮಾನ ಮರ್ಯಾದೆ ಇದಿಯಾ ಎಂದು ಕೊತ್ತೂರು ಮಂಜುನಾಥ್‌ ವಿರುದ್ಧ ಕಿಡಿಕಾರಿದರು. ಚಿಂತಾಮಣಿ ಸುಧಾಕರ್‌ ಅವರ ತಂದೆಯವರ ಋುಣದಲ್ಲಿ ಇದ್ದೇನೆ. ಆದ ಕಾರಣ ಬಾಯಿ ಮುಚ್ಚಿಕೊಂಡು ಇದ್ದೇನೆ. 

ನೀನು ಯಾವ ಯಾವ ಚುನಾವಣೆಗಳಲ್ಲಿ ಏನೇನು ಮಾಡಿದ್ದೀಯ ಎಂದು ಗೊತ್ತಿದೆ. ಪಕ್ಷವನ್ನು ಹಾಳು ಮಾಡುವವರಿಂದ ನಾನು ಬುದ್ದಿ ಕಲಿಯಬೇಕಾಗಿಲ್ಲ. ಕಾಂಗ್ರೆಸ್‌ಗೆ ಬರುವ ನೈತಿಕತೆ ನಿಮ್ಮಲ್ಲಿ ಇದಿಯಾ ನಿಮ್ಮಂತಹವರು ಪಕ್ಷಕ್ಕೆ ಅವಶ್ಯಕತೆ ಇಲ್ಲ ಎಂದು ಚಿಂತಾಮಣಿ ಮಾಜಿ ಶಾಸಕರ ವಿರುದ್ಧ ಹರಿಹಾಯ್ದರು. ಈ ಸಂದರ್ಭದಲ್ಲಿ ಮಾವು ಮಂಡಳಿಯ ಮಾಜಿ ಅಧ್ಯಕ್ಷ ಎಲ್‌.ಗೋಪಾಲಕೃಷ್ಣ, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷರಾದ ಶೇಷಾಪುರ ಗೋಪಾಲ್‌, ಮುರಳೀಗೌಡ,ಜೆ.ಕೆ.ಜಯರಾಮ್‌, ಕಿಸಾನ್‌ ಖೇತ್‌ ಜಿಲ್ಲಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸಾದ್‌ ಬಾಬು, ಉದಯಶಂಕರ್‌, ಜಯದೇವ್‌, ಮಂಜುನಾಥ್‌, ಶಿವಕುಮಾರ್‌, ರಾಮಲಿಂಗಾರೆಡ್ಡಿ, ಮಹಿಳಾ ಅಧ್ಯಕ್ಷೆ ರತ್ನಮ್ಮ ಮುಂತಾದವರು ಉಪಸ್ಥಿತರಿದ್ದರು.

ನಿನ್ನ ಕಥೆ ಬಿಚ್ಚಿಡಲು 365 ದಿನ ಬಾಕಿ ಇದೆ-ರಮೇಶ್‌ಗೆ ಎಚ್ಚರಿಕೆ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ವಿರುದ್ಧ ಗುಡುಗಿದ ಕೆ.ಎಚ್‌.ಮುನಿಯಪ್ಪ, ಮಿಸ್ಟರ್‌ ರಮೆಶ್‌ ಕುಮಾರ್‌ ಅವರೆ ನೀನು ಎಲ್ಲಿದ್ದವನು ಎಲ್ಲೆಲ್ಲಿ ಏನೇನು ಮಾಡಿದ್ದೀಯ ನಿನ್ನ ಕಥೆಯನ್ನು ಬಿಚ್ಚಿಡಲು ಇನ್ನು ಕೇವಲ 365 ದಿನಗಳು ಮಾತ್ರ ಬಾಕಿ ಇದೆ. ನಿನ್ನ ಬುದ್ದಿವಂತಿಕೆ ನನ್ನ ಬಳಿ ನಡೆರಯುವುದಿಲ್ಲ ನಾನು ಬಾಯಿ ಬಿಟ್ಟರೆ 5 ಲಕ್ಷ ಮತದಾರರು ಉಲ್ಟಾಹೊಡೆಯುತ್ತಾರೆ. ಆದರೆ ನನ್ನ ಏಕೈಕ ಉದ್ದೇಶ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರಬೇಕಾಗಿದೆ. ಆದ್ದರಿಂದ ನನಗೆ ನೀಡಿದ ಎಲ್ಲಾ ನೋವುಗಳನ್ನು ಸಹಿಸಿಕೊಂಡು ಬಂದಿದ್ದೇನೆ. ಹೈಕಮಾಂಡ್‌ ಸೂಚನೆಯಂತೆ ಸುಮ್ಮನಿದ್ದೇನೆ. ಆದರೆ ಪದೇ ಪದೆ ನನ್ನ ವಿರುದ್ಧ ಮಾತನಾಡುತ್ತಿದ್ದೀರಿ. ಆದರೆ ನಾನು ಸುಮ್ಮನಿರುವುದಿಲ್ಲ, ನಾನು ಏನು ಎಂಬುದನ್ನು ತೋರಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

Kolar: ದೊಡ್ಡ ಮಾರುಕಟ್ಟೆಗೆ ಜಾಗವಿಲ್ಲ: ರೈತರ ಗೋಳು ಕೇಳೋರಿಲ್ಲ!

ನಾನು ಮೂವತ್ತು ವರ್ಷಗಳು ಅಧಿಕಾರದಲ್ಲಿ ಇದ್ದೆ. ಆಗ ಯಾವ ಕೋಮು-ಗಲಭೆಯಾಗಲಿ ಒಂದೆ ಒಂದು ಅಟ್ರಾಸಿಟಿ ಕೇಸು ದಾಖಲಾಗಲಿಲ್ಲ. ಆದರೆ ಇತ್ತೀಚಿನ ದಿನಗಲಲ್ಲಿ ಕೋಲಾರ ನಗರದಲ್ಲಿ ಏನೇನು ನಡೆಯುತ್ತಿದೆ ಎಂಬುದು ಗೊತ್ತು. ಇದಕ್ಕೆಲ್ಲಾ ಕಾರಣ ಯಾರು ನಿಮ್ಮಂತಹವರಿಂದಲೆ ಇಷ್ಟೆಲ್ಲಾ ರಾದ್ಧಾಂತಗಳಿಗೆ ಕಾರಣವಾಗಿದೆ ಎಂದು ಮಾಜಿ ಶಾಸಕರ ವಿರುದ್ಧ ಗುಡುಗಿದ್ದಲ್ಲದೆ ಸಂಸದ ಮುನಿಸ್ವಾಮಿಯನ್ನೂ ತರಾಟೆಗೆ ತೆಗೆದುಕೊಂಡ ಮುನಿಯಪ್ಪ ನಗರದಲ್ಲಿ ಕೋಮುಗಲಭೆ ಸೃಷ್ಟಿಮಾಡುವುದನ್ನು ಬಿಟ್ಟು ಅಭಿವೃದ್ಧಿ ಕಡೆ ಚಿಂತೆ ಮಾಡಲಿ ಎಂದು ಸಲಹೆ ನೀಡಿದರು.

Latest Videos
Follow Us:
Download App:
  • android
  • ios