ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ಭಾಷಣದಲ್ಲಿ ತಪ್ಪುತಪ್ಪಾಗಿ ಕನ್ನಡ ಮಾತನಾಡಿ ಸುದ್ದಿಗೆ ಗ್ರಾಸವಾಗಿದ್ದ ಸಚಿವ ಬಿ ಶ್ರೀರಾಮುಲು ಅವರಿಗೆ ಕಾಂಗ್ರೆಸ್ ನಾಯಕಿಯೊಬ್ಬರು ಕನ್ನಡ ಪುಸ್ತಕ ಗಿಫ್ಟ್ ನೀಡಿದ್ದಾರೆ.

ಬೆಂಗಳೂರು, (ಜ.27): ರಾಯಚೂರು ನಡೆದ 71ನೇ ಗಣರಾಜ್ಯೋತ್ಸವ ಭಾಷಣದ ವೇಳೆ ಕನ್ನಡ ಪದಗಳನ್ನು ತಪ್ಪು ತಪ್ಪಾಗಿ ಉಚ್ಛಾರಣೆ ಮಾಡಿದ ಸಚಿವ ಶ್ರೀರಾಮುಲು ನಗೆ ಪಾಟಲಿಗೀಡಾಗಿದ್ದಾರೆ. 

ರಾಮುಲು ಮಾಡಿದ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಟ್ರಾಲ್‌ ಪೇಜ್‌ಗಳಿಗೆ ಆಹಾರವಾಗಿದ್ದಾರೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿ ಶ್ರೀರಾಮುಲುಗೆ ತೆಲುಗು ಭಾಷೆಯ ಮೂಲಕ ಕನ್ನಡ ಕಲಿಯುವ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಶ್ರೀರಾಮುಲುಗೆ ಕನ್ನಡ ವ್ಯಾಕರಣ ಪಾಠ ಮಾಡಿದ ಸಿದ್ದರಾಮಯ್ಯ

ತೆಲುಗಿನಿಂದ ಕನ್ನಡ ಕಲಿಯುವ ಪುಸ್ತಕವೊಂದನ್ನು ಅಮೇಜಾನ್​ನಲ್ಲಿ ಆರ್ಡರ್ ಮಾಡಿರುವ ಕವಿತಾ ರೆಡ್ಡಿ ಬಳ್ಳಾರಿಯ ಶ್ರೀರಾಮುಲು ಅವರ ಕಚೇರಿಯ ವಿಳಾಸಕ್ಕೆ ಕಳುಹಿಸಿದ್ದಾರೆ. ಈ ಕುರಿತು ಕವಿತಾ ರೆಡ್ಡಿ ಟ್ವಿಟ್ಟರ್‌​ನಲ್ಲಿ ಹಂಚಿಕೊಂಡಿದ್ದಾರೆ.

Scroll to load tweet…

ಭಾನುವಾರ ರಾಯಚೂರಿನಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ್ದ ಆರೋಗ್ಯ ಸಚಿವ ಶ್ರೀರಾಮುಲು ತಪ್ಪು ತಪ್ಪಾಗಿ ಮಾತನಾಡಿದ್ದರು. ಆರಂಭದಲ್ಲಿ ಜನವರಿ 26ರ ಗಣರಾಜ್ಯೋತ್ಸವ ಎಂದು ಹೇಳುವಲ್ಲೇ ಎಡವಿದ್ದ ಶ್ರೀರಾಮುಲು 'ಆಗಸ್ಟ್​ 15 ಗಣರಾಜ್ಯೋತ್ಸವ' ಎಂದು ಭಾಷಣವನ್ನು ಆರಂಭಿಸಿದ್ದರು. 

'ಭಾರತೀಯ ನಾಗರಿಕರಿಗೆ ಸಾಮಾಜಿಕವಾಗಿ ನಾಯಿ ಕೊಟ್ಟ ದಿನವಿದು', 'ನಮ್ಮ ದೇಶ ವಿಶ್ವಕ್ಕೆ ಮಾಧುರಿಯಾಗಿದೆ' ಎಂದು ಹೇಳಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇನ್ನು ಇತ್ತೀಚೆಗೆ ವ್ಯಾಕರಣ ಉಚ್ಛಾರಣೆಗೆ ಸಂಬಂಧಿಸಿದಂತೆ ಶ್ರೀರಾಮುಲು ಹಾಗೂ ಸಿದ್ದರಾಮಯ್ಯ ನಡುವೆ ಆರೋಪ-ಪ್ರತ್ಯಾರೋಪಗಳು ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಜನವರಿ 27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ