ಬೆಂಗಳೂರು, (ಅ. 27): ಕಾರ್ಮಿಕ ನಾಯಕ ಮಾರುತಿ ಮಾನ್ಪಡೆ ಅವರ ಸಾವಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾರಣ ಎಂದು ಕೇಂದ್ರ ರಸಗೊಬ್ಬರ ಹಾಗೂ ರಾಸಾಯನಿ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದರು. 

ಇದಕ್ಕೆ ಮಾಜಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರು ಬೇರೆಯವರ ಮೇಲೆ ಆರೋಪ ಮಾಡುತ್ತಾರೆ. ಆದರೆ ಬೆಳಗಾವಿಯ ಮನೆಯಲ್ಲಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದರಿಂದ ಅವರಿಗೆ ಕೊರೊನಾ ವೈರಸ್ ತಗುಲಿತು. ಅದಕ್ಕಾಗಿ ಸುರೇಶ್ ಅಂಗಡಿ ಅವರ ಸಾವಿಗೆ ಪ್ರಧಾನಿ ಮೋದಿ ಕಾರಣ ಎನ್ನಬಹುದೆ? ಎಂದು ಟ್ವೀಟ್‌ ಮೂಲಕ ಸದಾನಂದ ಗೌಡ್ರಿಗೆ ತಿರುಗೇಟು ನೀಡಿದ್ದಾರೆ. 

ಮಾರುತಿ ಮಾನ್ಪಡೆ ಸಾವಿಗೆ ಸಿದ್ದರಾಮಯ್ಯ-ಡಿಕೆಶಿ ಕಾರಣ: ಹೀಗೊಂದು ಗಂಭೀರ ಆರೋಪ

ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆಗಳನ್ನು ವಿರೋಧಿಸಲು ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಆಗ ಕಾಂಗ್ರೆಸ್ ನಾಯಕರು ಬಾಡಿಗೆ ಬಂಟರನ್ನು ಕರೆತಂದಿದ್ದರು. ಕಾರ್ಮಿಕ ನಾಯಕ ಮಾರು ಮಾನ್ಪಡೆ ಅವರು ಆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರಣ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದರು. ಅವರ ಸಾವಿಗೆ ನೇರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ಕಾರಣ ಎಂದು ಡಿವಿಎಸ್ ಆರೋಪಿಸಿದ್ದರು.

ಇನ್ನು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಕಾರ್ಮಿಕ ನಾಯಕ ಮಾರುತಿ ಮಾನ್ಪಡೆ ಅವರ ಸಾವಿಗೆ ನಾವು ಕಾರಣವಾಗಿದ್ದರೆ, ನಮ್ಮ ವಿರುದ್ಧ ಪ್ರಕರಣ ದಾಖಲಿಸಲು ಹೇಳಿ ಎಂದು ಸೋಮವಾರ (ಅ.26) ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದರು.

ಒಟ್ಟಿನಲ್ಲಿ ಕಾರ್ಮಿಕ ನಾಯಕ ಮಾರುತಿ ಮಾನ್ಪಡೆ ಹಾಗೂ ಕೇಂದ್ರ ಸಚಿವ ಸುರೇಶ್ ಅಂಗಡಿ ಕೊರೋನಾ ಸೊಂಕಿನಿಂದ ಸಾವನ್ನಪ್ಪಿದ್ದು, ರಾಜಕೀಯ ರಾಜಕೀಯ ಕೆಸರೆರಚಾಟ ನಡೆಸಿರುವುದು ದುರಂತ.