ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಸಾವಿಗೆ ಸ್ಪಂದಿಸಿ ಪರಿಹಾರ ನೀಡಿದ ಮಾದರಿಯಲ್ಲಿಯೇ ಸರ್ಕಾರ ಫಾಝಿಲ್‌, ಮಸೂದ್‌ ಸಾವಿಗೂ ಸ್ಪಂದಿಸಬೇಕಿತ್ತು. ಸತ್ತವರು ಮುಸ್ಲಿಮರಾದರೆ ಅವರು ಪರಿಹಾರಕ್ಕೆ ಅರ್ಹರಲ್ಲವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಎಂದು ಕಾಂಗ್ರೆಸ್‌ ನಾಯಕ ದಿನೇಶ್‌ ಗುಂಡೂರಾವ್‌ ಪ್ರಶ್ನಿಸಿದ್ದಾರೆ.

ಬೆಂಗಳೂರು (ಆ.01): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಸಾವಿಗೆ ಸ್ಪಂದಿಸಿ ಪರಿಹಾರ ನೀಡಿದ ಮಾದರಿಯಲ್ಲಿಯೇ ಸರ್ಕಾರ ಫಾಝಿಲ್‌, ಮಸೂದ್‌ ಸಾವಿಗೂ ಸ್ಪಂದಿಸಬೇಕಿತ್ತು. ಸತ್ತವರು ಮುಸ್ಲಿಮರಾದರೆ ಅವರು ಪರಿಹಾರಕ್ಕೆ ಅರ್ಹರಲ್ಲವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಎಂದು ಕಾಂಗ್ರೆಸ್‌ ನಾಯಕ ದಿನೇಶ್‌ ಗುಂಡೂರಾವ್‌ ಪ್ರಶ್ನಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್‌ ಮಾಡುವ ಮೂಲಕ ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆದಿರುವ ಅವರು, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೊಂದು ಬಹಿರಂಗ ಪತ್ರ. 

ನೀವು ಈ ರಾಜ್ಯದ ಮುಖ್ಯಮಂತ್ರಿ. ಸದ್ಯ ನೀವು ಆರೂವರೆ ಕೋಟಿ ಕನ್ನಡಿಗರ ಪ್ರತಿನಿಧಿ. ಪ್ರವೀಣ್‌ ಸಾವಿಗೆ ನೀವು ಸ್ಪಂದಿಸಿದ್ದು ಅನುಕರಣೀಯ. ಆದರೆ ಹತನಾದ ಫಾಝಿಲ್‌ಗೆ ಹಾಗೂ ಮಸೂದ್‌ಗೆ ನಿಮ್ಮಿಂದ ಕೊಂಚವಾದರೂ ಸಾಂತ್ವನ ಬೇಡವೇ’ ಎಂದು ಪ್ರಶ್ನಿಸಿದ್ದಾರೆ. ನೀವು ರಾಜ್ಯದ ಯಜಮಾನನಿದ್ದಂತೆ. ಯಜಮಾನ ಎಲ್ಲರಿಗೂ ಸಲ್ಲುವನಂತಿರಬೇಕು. ಆದರೆ ನೀವು ಮಾಡಿದ್ದೇನು? ಪ್ರವೀಣ್‌ ಮನೆಗೆ ಹೋಗಿ ಸರ್ಕಾರದಿಂದ 25 ಲಕ್ಷ ರು. ನೀಡಿದ್ದೀರಿ. ಇದಕ್ಕೆ ನಮ್ಮ ತಕರಾರಿಲ್ಲ. ಆದರೆ ಹತ್ಯೆಯಾದ ಮಸೂದ್‌, ಫಾಜಿಲ್‌ ಮಾಡಿದ ತಪ್ಪೇನು? ಸತ್ತವರು ಮುಸ್ಲಿಮರಾದರೆ ಪರಿಹಾರಕ್ಕೆ ಅರ್ಹರಲ್ಲವೇ ಎಂದು ಕಿಡಿಕಾರಿದ್ದಾರೆ.

Davanagere: ಯಡಿಯೂರಪ್ಪ ಸೈಡ್‌ಲೈನ್‌ ಪ್ರಶ್ನೆ ಇಲ್ಲ: ಸಚಿವ ಮಾಧುಸ್ವಾಮಿ

ಸಂಘ ಪರಿವಾರ, ಪಿಎಫ್‌ಐ ಕಾರಣವಲ್ಲವೇ?: ಬೊಮ್ಮಾಯಿಯವರೇ ನಿಮ್ಮ ಭಾಗದಲ್ಲಿ ಪಿಂಜಾರ ಮುಸ್ಲಿಮರಿದ್ದಾರೆ. ನಿಮ್ಮಲ್ಲಿ ಗಣೇಶೋತ್ಸವವಾಗಲಿ, ಉರುಸ್‌ ಆಗಲಿ ಹಿಂದೂ-ಮುಸಲ್ಮಾನರ ಪರಸ್ಪರ ಭಾಗವಹಿಸುವಿಕೆ ಇದೆ. ಈ ಹಿಂದೆ ಕರಾವಳಿಯೂ ಭಾವೈಕ್ಯತೆಯ ನಾಡಾಗಿತ್ತು. ಕರಾವಳಿಯಲ್ಲಿ ಮಾಪಿಳ್ಳ ಮುಸಲ್ಮಾನರು, ಹಿಂದೂಗಳು ಒಟ್ಟಾಗಿಯೇ ಇದ್ದರು. ಈ ಸಂಬಂಧಕ್ಕೆ ಹುಳಿ ಹಿಂಡಿದ್ದು ಯಾರು? ಸಂಘ ಪರಿವಾರ ಹಾಗೂ ಪಿಎಫ್‌ಐ ಅಂತಹ ಕೋಮು ಸಂಘಟನೆಗಳು ಇದಕ್ಕೆ ಕಾರಣ ಅಲ್ಲವೇ? ಜನತಾ ಪರಿವಾರದ ಹಿನ್ನೆಲೆಯ ನಿಮಗೆ ಈ ಸೂಕ್ಷ್ಮ ಅರ್ಥವಾಗಿಲ್ಲವೇ ಎಂದು ದಿನೇಶ್‌ ಪ್ರಶ್ನೆ ಮಾಡಿದ್ದಾರೆ.

ಸಂವಿಧಾನದ 356ನೇ ವಿಧಿ ಬಳಸಿ ರಾಜ್ಯ ಸರ್ಕಾರ ಕಿತ್ತೊಗೆಯಿರಿ: ರಾಜ್ಯದಲ್ಲಿ ಸರಣಿ ಹತ್ಯೆ ನಡೆಯುತ್ತಿದ್ದು, ಅರಾಜಕತೆ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ. ಆದ್ದರಿಂದ ಸಂವಿಧಾನದ 356ನೇ ವಿಧಿಯನ್ನು ಬಳಸಿ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ರಾಜ್ಯಪಾಲರನ್ನು ಆಗ್ರಹಿಸಿದ್ದಾರೆ.

ದ.ಕ.ಜಿಲ್ಲೆಯಲ್ಲಿ ಕಳೆದ 10 ದಿನಗಳಲ್ಲಿ ಹತ್ಯೆಯಾದ ಬೆಳ್ಳಾರೆಯ ಮಸೂದ್‌, ಪ್ರವೀಣ್‌ ನೆಟ್ಟಾರು ಹಾಗೂ ಸುರತ್ಕಲ್‌ನ ಫಾಝಿಲ್‌ ಮನೆಗಳಿಗೆ ಭಾನುವಾರ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ಮಂಗಳೂರಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರವೀಣ್‌ ಹತ್ಯೆ ನಡೆದು 5 ದಿನಗಳ ಕಳೆದರೂ ಆರೋಪಿಗಳ ಪತ್ತೆ ಸಾಧ್ಯವಾಗಿಲ್ಲ. ಈಗ ರಾಜ್ಯ ಸರ್ಕಾರಕ್ಕೆ ತನ್ನ ಪೊಲೀಸರಿಂದ ತನಿಖೆ ನಡೆಸಲು ಸಾಧ್ಯವಾಗದೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಲಾಗಿದೆ. ಇದು ರಾಜ್ಯ ಸರ್ಕಾರದ ವೈಫಲ್ಯವಾಗಿದ್ದು, ಕಾನೂನು, ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿರುವುದಕ್ಕೆ ಸಾಕ್ಷಿಯಾಗಿದೆ. 

'ನಮ್ಮ ಪಕ್ಷದವರು ದಾಂಧಲೆ ಮಾಡಿಲ್ಲ, ಕಟೀಲ್ ಕಾರಿಗೆ ಮುತ್ತಿಗೆ ಹಾಕಿದವರಲ್ಲಿ ಕ್ರಿಮಿನಲ್ಸ್ ಸೇರಿರ್ತಾರೆ'

ಪೊಲೀಸರಿಗೆ ತನಿಖೆ ನಡೆಸುವಲ್ಲಿ ಮುಕ್ತ ಅವಕಾಶ ನೀಡದೆ ಹಸ್ತಕ್ಷೇಪ ನಡೆಸಲಾಗುತ್ತಿದೆ ಎಂದು ಬಿ.ಕೆ.ಹರಿಪ್ರಸಾದ್‌ ಆರೋಪಿಸಿದರು. ಹಿಂದೆ ಸಿದ್ದರಾಮಯ್ಯ ಸಿಎಂ ಅವಧಿಯಲ್ಲಿ 24 ಕೊಲೆ ನಡೆದಾಗ ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸಿದ ಬಿಜೆಪಿಗರು ಈಗ ಅವರದೇ ಆಡಳಿತದಲ್ಲಿ ಸರಣಿ ಹತ್ಯೆ ನಡೆಯುತ್ತಿದೆ. ಬಿಜೆಪಿಗರು ಹೆಣಗಳ ಮೇಲೆ ರಾಜಕಾರಣ ನಡೆಸುತ್ತಿದ್ದಾರೆ. ಕೆಲವು ನಾಯಕರ ಪ್ರಚೋದನಕಾರಿ ಭಾಷಣಗಳಿಂದ ಶಾಂತಿ ಕದಡುತ್ತಿದೆ. ಉತ್ತರ ಪ್ರದೇಶ ಮಾದರಿ ಜಾರಿಗೆ ತರುವುದಾಗಿ ಹೇಳುತ್ತಾ ಕರ್ನಾಟಕವನ್ನು ಅಭಿವೃದ್ಧಿಯ ಕೊನೆ ಸ್ಥಾನಕ್ಕೆ ತಳ್ಳುವ ಹುನ್ನಾರ ಸರ್ಕಾರದಿಂದ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.