ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಬಾಗಲಕೋಟೆಯಲ್ಲಿ ಇಂದು(ಭಾನುವಾರ) ನಳಿನ್ ಕುಮಾರ್ ಕಟೀಲ್ ಕಾರಿಗೆ ಮುತ್ತಿಗೆ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ಹೀಗೆ

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ


ಬಾಗಲಕೋಟೆ, (ಜುಲೈ. 31)
: ನಮ್ಮ ಪಕ್ಷದ ಕಾರ್ಯಕರ್ತರಾಗಲಿ, ದೇಶಭಕ್ತ ಸಂಘಟನೆ ಕಾರ್ಯಕರ್ತರಾಗಲಿ ದಾಂಧಲೆ ಮಾಡಿಲ್ಲ, ಅವರೊಂದಿಗೆ ಕೆಲ ಸಮಾಜಘಾತಕ ಶಕ್ತಿಗಳು ಸೇರಿ ಇಂತಹ ಗಲಾಟೆಗಳು ಆಗಿವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು. 

ಬಾಗಲಕೋಟೆಯಲ್ಲಿ ಇಂದು(ಭಾನುವಾರ) ನಳಿನ್ ಕುಮಾರ್ ಕಟೀಲ್ ಕಾರಿಗೆ ಮುತ್ತಿಗೆ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಾರಜೋಳ, ಒಂದೆರಡು ಸಾವಿರ ಜನ ಕೂಡಿರ್ತಾರೆ, ಅದರಲ್ಲಿ ಒಬ್ಬರೊ ಇಬ್ಬರೋ ಕ್ರಿಮಿನಲ್ ಸೇರಿರುತ್ತಾರೆ. ಕಲ್ಲು ಹೊಡೆಯೋದು ಮತ್ತು ಧಿಕ್ಕಾರ ಕೂಗೋದು ಅಂತವೆಲ್ಲ ಮಾಡ್ತಿರ್ತಾರೆ, ಯಾರಾದ್ರೂ ಕ್ರಿಮಿನಲ್ಸ್ ಸೇರಿಕೊಂಡಿರ್ತಾರೆ ಎಂದರು.

ಗೃಹ ಸಚಿವರ ಮನೆ ಮೇಲಿನ ದಾಳಿ ಕಾನೂನು ಕುಸಿತಕ್ಕೆ ಸಾಕ್ಷಿ: ಪ್ರಿಯಾಂಕ್‌ ಖರ್ಗೆ

ದೇಶ ಭಕ್ತರ ಜೊತೆಯಲ್ಲಿ ಕೆಲವು ಕ್ರಿಮಿನಲ್ಸ್ ಸೇರಿಕೊಂಡಿರ್ತಾರೆ, ಆದರೆ ನಮ್ಮ ಸಂಘಟನೆಯವರು ನಮ್ಮ ಪಕ್ಷದ ಕಾರ್ಯಕರ್ತರು ದೇಶ ಭಕ್ತರಿದ್ದಾರೆ. ಅವರು ಯಾರೂ ದೇಶದ್ರೋಹಿ ಕೆಲಸ ಮಾಡೋದಿಲ್ಲ. ಒಳ್ಳೆಯ ಕೆಲಸ ಮಾಡೋಕೆ ಪ್ರಯತ್ನ ಮಾಡ್ತಿರ್ತಾರೆ.‌ ಸಮಾಜದಲ್ಲಿ ಶಾಂತಿ ನೆಲಸಬೇಕು ಅನ್ನೋದೇ ನಮ್ಮ ಆಶಯ. ಹೀಗಾಗಿ ನಮ್ಮವರು ಯಾರೂ ಗಲಾಟೆಗೆ ಕಾರಣರಲ್ಲ. ಘಟನೆಗಳ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಘಟನೆ ಕುರಿತ ಸತ್ಯಾಸತ್ಯತೆ ಹೊರಬೀಳಲಿದೆ ಎಂದು ಹೇಳಿದರು.

ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಕೈ ತಪ್ಪಿಲ್ಲ...
 ಇನ್ನು ನಿರಂತರವಾಗಿ ಕೊಲೆ ಪ್ರಕರಣಗಳು ನಡೆಯುತ್ತಿರೋ ಹಿನ್ನೆಲೆಯಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಾರಜೋಳ, ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಕೈ ತಪ್ಪಿಲ್ಲ, ಯಾವುದು ಕೈ ತಪ್ಪಿ ಹೋಗಿಲ್ಲ ಎಂದು ಅವರು, ಸರ್ಕಾರ ಎಲ್ಲ ಘಟನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಸರ್ಕಾರ ದೇಶದ್ರೋಹಿ,ಸಮಾಜ ದ್ರೋಹಿ ಶಕ್ತಿಗಳನ್ನ ಮಟ್ಟ ಹಾಕುವ ಕೆಲಸ ಮಾಡ್ತಿದೆ, ಇನ್ನು ನಮ್ಮ ಅಧಿಕಾರಿಗಳು ಸಂಶಯಾಸ್ಪದ ವ್ಯಕ್ತಿಗಳನ್ನು ವಶಕ್ಕೆಪಡೆದು ವಿಚಾರಣೆ ನಡೆಸಿದ್ದಾರೆ. ತಪ್ಪಿತಸ್ಥರ ಮೇಲೆ ಸರ್ಕಾರ ಕಠಿಣ ಕ್ರಮ ವಹಿಸುತ್ತೆ ಎಂದು ತಿಳಿಸಿದರು.

ಸಾವು ಸಾವೇ, ಸಾವು ಯಾರ ಮನೆಯಲ್ಲಿ ಆದರೂ ಪರಿಹಾರ ಕೊಟ್ಟೆ ಕೊಡುತ್ತೇವೆ ಎಂದ ಸಚಿವ ಗೋವಿಂದ ಕಾರಜೋಳ, ಸಾವು ನ್ಯಾಯಯುತವಾಗಿರಬೇಕು. ಕಾನೂನು ಚೌಕಟ್ಟಿನ ಸಮಸ್ಯೆಯಿಂದ ಸಾವಾಗಿದ್ರೆ, ಕಾನೂನಾತ್ಮಕವಾಗಿ ಪರಿಹಾರ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಗೊಂದಲದ ಗೂಡು..
ರಾಜ್ಯ ಕಾಂಗ್ರೆಸ್ ಪಕ್ಷ ಈಗ ಗೊಂದಲದ ಗೂಡಾಗಿದ್ದು, ಯಾರೊಬ್ಬರ ಮಾತನ್ನು ಯಾರೂ ಕೇಳದಂತಹ ಪರಿಸ್ಥಿತಿ ಬಂದೊದಗಿದೆ. ಇಡೀ ಕಾಂಗ್ರೆಸ್ ಪಕ್ಷ ಈಗ ಮೂರು ಗುಂಪುಗಳಾಗಿ ಕಾರ್ಯಕರ್ತರು ತಮಗೆ ಬೇಕಾಗಿರೋ ಒಬ್ಬೊಬ್ಬರಿಗೆ ಜೈ ಜೈ ಅಂತಿದ್ದಾರೆ. ಯಾವೆಲ್ಲ ಕಾರ್ಯಕರ್ತರು ಯಾರ-ಯಾರ ಭಕ್ತರು ಅನ್ನೋದನ್ನು ಜಾಹೀರಾತುಗಳಿಂದ ಗೊತ್ತಾಗುತ್ತಿದೆ ಲೇವಡಿ ಮಾಡಿದರು.

ಸಿದ್ದರಾಮಯ್ಯನವರಿಂದ ಗಿಮಿಕ್.‌.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬೆಬಿಲೋನಿಯನ್ ಕ್ರೂರ ದೊರೆ ಹಮ್ಮುರಾಬಿಗೆ ಹೋಲಿಸಿರುವ ಸಿದ್ದರಾಮಯ್ಯ ಅವರ ಮಾತಿಗೆ ತಿರುಗೇಟು ನೀಡಿದ ಕಾರಜೋಳ, ಸಿದ್ದರಾಮಯ್ಯನವ್ರಿಗೆ ಹೇಳಿಕೊಳ್ಳೋಕೆ ಮಾಡಿದಂತಹ ಕೆಲಸ ಏನು ಇಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ. ಅಲ್ಲದೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಇಂತಹ ಗಿಮಿಕ್‌ಗಳನ್ನು ಸಿದ್ದರಾಮಯ್ಯ ಅವರು ಮಾಡ್ತಾ ಇರ್ತಾರೆ ಎಂದು ವಾಗ್ದಾಳಿ ‌ನಡೆಸಿದರು. 

ಸರ್ಕಾರದ ವಿರುದ್ಧ ಪ್ರತಿಭಟನೆ ನಡೆದಿಲ್ಲ, ತಪ್ಪು ಗ್ರಹಿಕೆ ಬೇಡ‌...
ಪ್ರವೀಣ್ ನಟ್ಟಾರು ಹತ್ಯೆ ಖಂಡಿಸಿ ಎಬಿವಿಪಿ ಪ್ರತಿಭಟನೆ ಹಿನ್ನೆಲೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಕಾರಜೋಳ ಅವರು, ನಮ್ಮ ಸರ್ಕಾರ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ ಅಂತ ತಪ್ಪಾಗಿ ಅರ್ಥ ಮಾಡಿಕೊಂಡಿದ್ದೀರಿ. ಪ್ರತಿಭಟನೆ ಇರೋದು ಪಿ ಎಫ್ ಐ ಸಂಘಟನೆಯಂತ ಸಂಘಟನೆಗಳನ್ನ ಬ್ಯಾನ್ ಮಾಡಿ ಅಂತ. ದೇಶದಲ್ಲಿ ಇಂತಹ ಸಂಘಟನೆಗಳು ಬೆಳೆಯಬಾರದು, ತಲೆ ಎತ್ತಬಾರದು ಹೀಗಾಗಿ ದೇಶ ದ್ರೋಹಿ ಕೆಲಸ ಮಾಡುವ ಸಂಘಟನೆಗಳ ವಿರುದ್ಧ ಅವರ ಸಿಟ್ಟು ಹೊರ ಹಾಕಿದರು.