ಉಪಸಭಾಪತಿ ಧರ್ಮೇಗೌಡರ ಸಾವು ಎಲ್ಲರನ್ನೂ ದಿಗ್ಬ್ರಮೆಗೊಳಿಸಿದೆ. ಅವರ್ಯಾಕೆ ಆತ್ಮಹತ್ಯೆ ಮಾಡಿಕೊಂಡ್ರು..? ಹೀಗೆ ಹಲವು ಪ್ರಶ್ನೆಗಳು ಉದ್ಭವಿಸುತ್ತಿವೆ.
ಬೆಂಗಳೂರು, (ಡಿ.29): ಉಪಸಭಾಪತಿ ಧರ್ಮೇಗೌಡರ ಸಾವಿಗೆ ಪ್ರಪಂಚಕ್ಕೆ ತಿಳಿಯದ ಯಾವುದಾದರೂ ಕಾರಣವೂ ಇರಬಹುದು ಎಂದು ಕಾಂಗ್ರೆಸ್ ಮುಖಂಡ ಬಿ.ಎಲ್. ಶಂಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು (ಮಂಗಳವಾರ) ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಧರ್ಮೇಗೌಡರದ್ದು ಅಕಾಲಿಕ ದುರಂತ. ಡೆತ್ ನೋಟ್ನಲ್ಲಿ ಬರೆದಿದ್ದಾರೆ ಎಂಬುದು ಮಾಧ್ಯಮಗಳಲ್ಲಿ ವರದಿ ಆಗುತ್ತಿದೆ. ಅವರು ದುರ್ಬಲ ಮನಸ್ಥಿತಿಯವರಲ್ಲ, ಆ ಘಟನೆ ನಡೆದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳೋದಾದರೆ ಇಷ್ಟು ದಿನ ಸಮಯ ತೆಗೆದುಕೊಳ್ತಿರಲಿಲ್ಲ ಎಂದು ಹೇಳಿದರು.
ವಿಧಾನ ಪರಿಷತ್ ಘಟನೆಯೂ ಸೇರಿದಂತೆ ಎಲ್ಲ ಆಯಾಮಗಳಲ್ಲೂ ತನಿಖೆ ಆಗಬೇಕು. ಪ್ರಪಂಚಕ್ಕೆ ತಿಳಿಯದ ಯಾವುದಾದರೂ ಘಟನೆಯೂ ಇದರ ಹಿಂದೆ ಇರಬಹುದು. ಇದು ಅನಿರೀಕ್ಷಿತ, ಅಕಾಲಿಕ ಅಂತ್ಯ. ನಮ್ಮ ಜಿಲ್ಲೆಯಲ್ಲಿ ಇದು ಎರಡನೇ ದುರಂತ, ಕಳೆದ ವರ್ಷ ಸಿದ್ದಾರ್ಥ್, ಈ ವರ್ಷ ಧರ್ಮೇಗೌಡರು ಎರಡೂ ದುರಂತ ಅಂತ್ಯ. ಇವರ ಸಾವಿಗೆ ಕಾರಣವಾದಂತಹ, ಸಂಜೆ ನಂತರ ರಾತ್ರಿ ದಾರುಣ ಅಂತ್ಯ ಕಾಣುವವರೆಗಿನ ಘಟನಾವಳಿಗಳ ತನಿಖೆ ಆಗಬೇಕು ಎಂದು ಗೃಹ ಸಚಿವರಿಗೆ ಮನವಿ ಮಾಡಿದರು.
ಧರ್ಮೇಗೌಡ ಆತ್ಮಹತ್ಯೆ: ಕುಮಾರಸ್ವಾಮಿ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು
ಅವರು ಕೆಳಹಂತದಿಂದ ಬೆಳೆದು ಬಂದವರು. ಗ್ರಾಮ ಪಂಚಾಯತ್ ಹಂತದಿಂದ ಬೆಳೆದವರು. ಉಪಸಭಾಪತಿ ಹುದ್ದೆ ಕೂಡ ಅವರಿಗೆ ಸಿಕ್ಕಿದ್ದು ಅನಿರೀಕ್ಷಿತ. ಕಷ್ಟಪಟ್ಟು ದುಡಿಯುವ ಮನುಷ್ಯ, ರಾಜಕೀಯವಾಗಿ ಸಾಕಷ್ಟು ಅವಕಾಶ ಸಿಕ್ಕಿತ್ತು. ಇತ್ತೀಚೆಗೆ ಪರಿಷತ್ನಲ್ಲಿ ನಡೆದ ಘಟನೆಯಿಂದ ಮುಜುಗರಕ್ಕೆ ಒಳಗಾಗಿದ್ದರು. ಈ ಘಟನೆ ನಡೆದ ನಂತರ ಹಲವು ಬಾರಿ ನಾನು ಮಾತಾಡಿದ್ದೆ, ಬಹಳ ಲವಲವಿಕೆಯಿಂದ ಇದ್ದರು, ಡಿಸಿಸಿ ಬ್ಯಾಂಕ್ನಲ್ಲಿ ಉಂಟಾದ ಹಿನ್ನಡೆ ಕೂಡ ಎದುರಿಸುವ ಸಾಮರ್ಥ್ಯ ಇತ್ತು. ಅವರ ಸಾವು ಆಶ್ಚರ್ಯಕರ, ನಿಗೂಢ ಘಟನೆ, ತನಿಖೆಯಿಂದಲೇ ಇದು ಬಯಲಾಗಬೇಕು ಎಂದು ತಿಳಿಸಿದರು.
ಆ ಘಟನೆ ನಡೆದ ನಂತರ ಹಲವಾರು ವಿಚಾರ ನಾನು ಹಾಗೂ ಅವರು ಮಾತಾಡಿದ್ದೇವೆ. ಆ ಘಟನೆಯಿಂದ ನೋವಾಗಿದ್ದರೆ 'ನನ್ನ ಬಳಿ ಹೀಗಾಯ್ತು ನೋಡಿ, ತಪ್ಪಾಯ್ತು..' ಅಂತ ಹೇಳಿಕೊಳುತ್ತಿದ್ದರು. ಆದರೆ ಹಾಗೇನೂ ಹೇಳಿಕೊಳ್ಳಲಿಲ್ಲ. ನನ್ನ ಪ್ರಕಾರ ಸಭಾಪತಿ ಪೀಠದಲ್ಲಿ ಧರ್ಮೇಗೌಡರು ಅಂದು ಕುಳಿತಿದ್ದು ಸರಿಯಲ್ಲ. ಆದರೆ ಅವರಿಗೆ ಮುಜುಗರ ಉಂಟುಮಾಡಬಾರದು ಅಂತ ನಾನು ಅವರಿಗೆ ಹೇಳಲಿಲ್ಲ ಎಂದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 29, 2020, 8:06 PM IST