ಧರ್ಮೇಗೌಡ ಆತ್ಮಹತ್ಯೆ: ಕುಮಾರಸ್ವಾಮಿ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು
ಉಪಸಭಾಪತಿ ಧರ್ಮೇಗೌಡರ ಆತ್ಮಹತ್ಯೆ ಪ್ರಕರಣ ರಾಜಕೀಯ ಕೆಸರೆರಚಾಟ ಶುರುವಾಗಿದ್ದು, ಕುಮಾರಸ್ವಾಮಿ ಆರೋಪಕ್ಕೆ ಸಿದ್ದು ಗುದ್ದ ಕೊಟ್ಟಿದ್ದಾರೆ.
ಬೆಂಗಳೂರು, (ಡಿ.29): ಉಪಸಭಾಪತಿ ಧರ್ಮೇಗೌಡರ ಆತ್ಮಹತ್ಯೆ ರಾಜಕೀಯ ಘಟನೆಯಿಂದಾದ ಕೊಲೆ ಎಂಬ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಇಂದಿನ ರಾಜಕೀಯದ ಘಟನೆಯೇ ಉಪಸಭಾಪತಿ ಧರ್ಮೇಗೌಡರ ಆತ್ಮಹತ್ಯೆಗೆ ಕಾರಣ. ಇವರ ಸಾವು ರಾಜಕೀಯದ ಘಟನೆಗಳಿಂದಾದ ಕೊಲೆ ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರ ಹೇಳಿಕೆ ದುರುದ್ದೇಶಪೂರಿತವಾಗಿದ್ದು, ಅದಕ್ಕೆಲ್ಲ ಪ್ರತಿಕ್ರಿಯಿಸುವುದಿಲ್ಲ. ಸಭಾಪತಿ ಪೀಠದ ಮೇಲೆ ಉಪಸಭಾಪತಿ ಧರ್ಮೇಗೌಡರನ್ನು ಬಿಜೆಪಿ-ಜೆಡಿಎಸ್ ಸೇರಿ ಬಲವಂತವಾಗಿ ಕೂರಿಸಿದ್ದು ಧರ್ಮೇಗೌಡರಿಗೆ ಇಷ್ಟವಿರಲಿಲ್ಲ ಎಂದರು.
ವಿಧಾನ ಪರಿಷತ್ ಉಪಸಭಾಪತಿ ಎಸ್. ಎಲ್ ಧರ್ಮೇಗೌಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ..!
ತಳಮಟ್ಟದಿಂದ ರಾಜಕರಣ ಮಾಡಿಕೊಂಡ ಬಂದಿದ್ದ ಧರ್ಮೇಗೌಡ ಸಹಕಾರ ಕ್ಷೇತ್ರಗಳಲ್ಲಿ ವಿವಿಧ ಹಂತಗಳಲ್ಲಿ ಕೆಲಸ ಮಾಡಿದವರು. ಅವರ ತಂದೆ ಎಸ್.ಆರ್.ಲಕ್ಷ್ಮಯ್ಯ ಸಹ ಆಪ್ತಸ್ನೇಹಿತರಾಗಿದ್ದವರು. ರೈತಪರ, ಜನಪರ ಕಾಳಜಿಯುಳ್ಳ ವ್ತಕ್ತಿ ಅಗಲಿರುವುದು ಸಾರ್ವಜನಿಕ ಕ್ಷೇತ್ರಕ್ಕೆ ಆದ ಅಪಾರ ನಷ್ಟ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸುವುದಾಗಿ ಸಿದ್ದರಾಮಯ್ಯ ಹೇಳಿದರು.
ರಾಜಕೀಯ ಇಂದಿರುತ್ತದೆ ನಾಳೆ ಹೋಗುತ್ತದೆ. ಯಾರಿಗೂ ಅಧಿಕಾರ ಶಾಶ್ವತವಲ್ಲ. ಮಾನ ಮರ್ಯಾದೆಯಿಲ್ಲದೇ ಹಲವಾರು ರೀತಿಯ ಕಾನೂನು ಉಲ್ಲಂಘಿಸಿ ರಾಜ್ಯವನ್ನು ಲೂಟಿ ಮಾಡಿದವರೂ ಆರಾಮಾಗಿ ಜೀವಿಸುತ್ತಿದ್ದಾರೆ. ಆದರೆ ಸೂಕ್ಷ್ಮಜೀವಿಗಳಂತಹ ಧರ್ಮೇಗೌಡರು ಬಲಿಯಾಗಿದ್ದಾರೆ. ಮೇಲ್ಮನೆಯಲ್ಲಿ ನಡೆದ ಘಟನೆಯೇ ಉಪಸಭಾಪತಿಗಳ ಸಾವಿಗೆ ಕಾರಣರಾಗಿದ್ದಾರೆ. ಘಟನೆಗೆ ಯಾರ್ಯಾರು ಕಾರಣರೆಂಬ ಸತ್ಯಾಂಶ ಹೊರಬರಬೇಕು ಎಂದು ಕುಮಾರಸ್ವಾಮಿ ಹೇಳಿದ್ದರು.