ನನ್ನ, ಸಿ.ಟಿ.ರವಿ ಆಸ್ತಿ ತನಿಖೆ ಮಾಡಿ: ಬಿ.ಕೆ.ಹರಿಪ್ರಸಾದ್ ಸವಾಲು
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾಯದರ್ಶಿ ಸಿ.ಟಿ.ರವಿ ಅವರ ಆಸ್ತಿ ಗಳಿಕೆಯೂ ತನಿಖೆಯಾಗಲಿ. ನನ್ನ ಆಸ್ತಿ ಸಂಪಾದನೆಯೂ ತನಿಖೆಯಾಗಲಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸವಾಲು ಹಾಕಿದ್ದಾರೆ.
ಸುವರ್ಣಸೌಧ (ಡಿ.27): ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾಯದರ್ಶಿ ಸಿ.ಟಿ.ರವಿ ಅವರ ಆಸ್ತಿ ಗಳಿಕೆಯೂ ತನಿಖೆಯಾಗಲಿ. ನನ್ನ ಆಸ್ತಿ ಸಂಪಾದನೆಯೂ ತನಿಖೆಯಾಗಲಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸವಾಲು ಹಾಕಿದ್ದಾರೆ. ಸೋಮವಾರ ಬೆಳಗಾವಿ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹಾಗೂ ಸಿ.ಟಿ.ರವಿ ಅವರ ಆಸ್ತಿ ಗಳಿಕೆ ವಿಷಯ ಬಹಿರಂಗ ಚರ್ಚೆಗೆ, ಯಾವುದೇ ತನಿಖೆಗೂ ನಾನು ಸಿದ್ಧ. ಬೇಕಿದ್ದರೆ ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದೆ. ಇಬ್ಬರ ಮೇಲೂ ಐಟಿ, ಇಡಿ ದಾಳಿ ನಡೆಸಲಿ. ಎಲ್ಲದಕ್ಕೂ ನಾನು ಸಿದ್ಧ ಎಂದರು.
‘ಸಿ.ಟಿ.ರವಿ ಶಾಸಕರಾದ ಮೇಲೆ ಎಷ್ಟು ಸಂಪಾದಿಸಿದ್ದಾರೆ. ದನದ ಮಾಂಸ ಮಾರಾಟಗಾರರಿಂದ ಎಷ್ಟು ಹಫ್ತಾ ವಸೂಲಿ ಮಾಡಿದ್ದಾರೆ. ಕಳ್ಳಬಟ್ಟಿಗೆ ಎಷ್ಟು ಪ್ರೋತ್ಸಾಹ ನೀಡಿದ್ದಾರೆ ಎಲ್ಲದರ ಚರ್ಚೆಗೆ ಬರಲಿ. ನಮ್ಮ ಪಕ್ಷದ ವಕ್ತಾರರು ಸಿ.ಟಿ.ರವಿ ಮೂರು ಸಾವಿರ ಕೋಟಿ ರು. ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಒಬ್ಬ ಶಾಸಕನಾದ ಮೇಲೆ ಇಷ್ಟೊಂದು ಹಣ ಸಂಪಾದನೆ ಹೇಗೆ ಸಾಧ್ಯ. ಇದು ತನಿಖೆಯಾಗಲಿ’ ಎಂದು ಆಗ್ರಹಿಸಿದರು.
Uttara Kannada: ಬಿಜೆಪಿಯಿಂದ ದೇಶಪ್ರೇಮದ ಸರ್ಟಿಫಿಕೇಟ್ ಬೇಡ: ಬಿ.ಕೆ.ಹರಿಪ್ರಸಾದ್
‘ಹಿಂದೆ ಇದೇ ರವಿ ಬೆಂಗಳೂರಿಗೆ ಬರುವಾಗ ಯಾರನ್ನಾದರೂ ಲಿಫ್ಟ್ ಕೇಳುತ್ತಿದ್ದರು. ಈಗ ಐಷಾರಾಮಿ ಕಾರು, ಬಂಗಲೆ ಹೊಂದಿದ್ದಾರೆ. ಇದು ಎಲ್ಲಿಂದ ಬಂತು? ನನ್ನ ಹಿನ್ನೆಲೆ ದೇಶಕ್ಕೆ ಗೊತ್ತಿದೆ. ಸಿ.ಟಿ.ರವಿ ಸಣ್ಣ ಹುಡುಗನಾಗಿದ್ದಾಗ ನಾನು ಚಿಕ್ಕಮಗಳೂರಿನಲ್ಲಿ ಇಂದಿರಾ ಗಾಂಧಿ ಅವರ ಚುನಾವಣೆ ನೋಡಿದ್ದೇನೆ. ನನ್ನ ವಿರುದ್ಧ ಒಂದಾದರೂ ಎಫ್‌ಐಆರ್ ಇದ್ದರೆ ತೋರಿಸಲಿ. ಅವರ ಮೇಲಿರುವ ಎಫ್‌ಐಆರ್‌ಗಳನ್ನೂ ಬಹಿರಂಗಪಡಿಸಲಿ’ ಎಂದರು.
ರಾಜ್ಯದಲ್ಲಿ ಮೊಲಾಸಿಸ್ ಹಗರಣ: ರಾಜ್ಯದಲ್ಲಿ ಮೊಲಾಸಿಸ್ ಹಗರಣ ನಡೆದಿದೆ. ಮೂರು ಲಕ್ಷಟನ್‌ನಷ್ಟು ಮೊಲಾಸಿಸ್ ಅನ್ನು ಗೋವಾ ಮೂಲಕ ಮಹಾರಾಷ್ಟ್ರಕ್ಕೆ ಕಳುಹಿಸಲಾಗಿದೆ. ಇದರಲ್ಲಿ ಭಾರೀ ಹಗರಣ ನಡೆದಿದೆ. ಇದರಲ್ಲಿ ಕಳಪೆ ಕಳ್ಳ ಬಟ್ಟಿ ಸಾರಾಯಿ ತಯಾರಿ ಮಾಡ್ತಾರೆ. ನಾವು ಇದನ್ನು ಸದನದಲ್ಲಿ ಬಹಿರಂಗಪಡಿಸುತ್ತೇವೆ ಎಂದು ಇದೇ ವೇಳೆ ಹರಿಪ್ರಸಾದ್ ಹೇಳಿದರು.
ಪಿಎಸ್‌ಐ ಕೇಸಲ್ಲಿ ಆರಗ ಕೂಡ ಜೈಲಿಗೆ ಹೋಗ್ತಾರೆ: ಹರಿಪ್ರಸಾದ್
‘ಹೆಂಡ ಮಾರುವವರನ್ನು ಕೊಲೆಗಡುಕರು ಎಂದು ಸಿ.ಟಿ.ರವಿ ಹೇಳಿದ್ದಾರೆ. ಅವರು ಕಳ್ಳ ಬಟ್ಟಿ ಕುಡಿದು ಮಾತನಾಡಿರಬೇಕು. ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಸಾರಾಯಿ ಬಂದ್ ಮಾಡಿದರು. ಇದರಿಂದ ಸಾವಿರಾರು ಜನ ರಸ್ತೆಗೆ ಬಿದ್ದರು. ಈಗ ಹೆಂಡ ಉತ್ಪಾದಕರ ಮೇಲೆ ಕಣ್ಣಿಟ್ಟಿದ್ದಾರೆ. 24 ಸಾವಿರ ಕೋಟಿ ರು. ನಷ್ಟು ಹಣ ಸರ್ಕಾರಕ್ಕೆ ಹೆಂಡ ಮಾರಾಟದಿಂದ ಬರುತ್ತಿದೆ. ಈ ಕಸುಬು ಮಾಡುವವರನ್ನು ಕೊಲೆಗಡುಕರು ಎನ್ನುವುದು ಸರಿಯಲ್ಲ. ಕೊಲೆಗಡುಕರು ಅನ್ನುವುದಾದರೆ ಗುಜರಾತ್ ಮಾದರಿಯಲ್ಲಿ ಪಾನ ನಿಷೇಧ ಮಾಡಲಿ’ ಎಂದರು.