ಇದು ಸಿದ್ದರಾಮೋತ್ಸವ ಅಲ್ಲ, ಸಿದ್ದು ಜನ್ಮದಿನದ ಅಮೃತ ಮಹೋತ್ಸವ: ಬಸವರಾಜ ರಾಯರೆಡ್ಡಿ
‘ನಾವ್ಯಾರೂ ಸಿದ್ದರಾಮಯ್ಯ ಅವರ ಜನ್ಮದಿನ ಅಮೃತ ಮಹೋತ್ಸವವನ್ನು ‘ಸಿದ್ದರಾಮೋತ್ಸವ’ ಎಂದು ಹೇಳಿಲ್ಲ. ಈ ಕಾರ್ಯಕ್ರಮವು ವ್ಯಕ್ತಿ ಪೂಜೆ ಅಥವಾ ವ್ಯಕ್ತಿ ವೈಭವವಲ್ಲ. ಆ ರೀತಿ ಮಾತನಾಡುವವರಿಗೆ ಸಂಸ್ಕೃತಿ ಹಾಗೂ ಸಂಸ್ಕಾರ ಇಲ್ಲ’.
ಬೆಂಗಳೂರು (ಜು.14): ‘ನಾವ್ಯಾರೂ ಸಿದ್ದರಾಮಯ್ಯ ಅವರ ಜನ್ಮದಿನ ಅಮೃತ ಮಹೋತ್ಸವವನ್ನು ‘ಸಿದ್ದರಾಮೋತ್ಸವ’ ಎಂದು ಹೇಳಿಲ್ಲ. ಈ ಕಾರ್ಯಕ್ರಮವು ವ್ಯಕ್ತಿ ಪೂಜೆ ಅಥವಾ ವ್ಯಕ್ತಿ ವೈಭವವಲ್ಲ. ಆ ರೀತಿ ಮಾತನಾಡುವವರಿಗೆ ಸಂಸ್ಕೃತಿ ಹಾಗೂ ಸಂಸ್ಕಾರ ಇಲ್ಲ’ ಎಂದು ಸಿದ್ದರಾಮಯ್ಯ 75 ಅಮೃತ ಮಹೋತ್ಸವ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ಬಸವರಾಜ ರಾಯರೆಡ್ಡಿ ಕಿಡಿ ಕಾರಿದರು.
ಬುಧವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸಿದ್ದರಾಮಯ್ಯ ಅಮೃತ ಮಹೋತ್ಸವ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಪದೇ ಪದೇ ಇದು ‘ಸಿದ್ದರಾಮೋತ್ಸವ’ ಅಲ್ಲ ಸಿದ್ದರಾಮಯ್ಯ ಜನ್ಮದಿನ ಅಮೃತ ಮಹೋತ್ಸವ ಎಂದು ಸ್ಪಷ್ಟನೆ ನೀಡುತ್ತಲೇ ಇದ್ದೇವೆ. ಆದರೂ, ಬಿಜೆಪಿಯವರು ಕೀಳುಮಟ್ಟದಲ್ಲಿ ಅಪ ಪ್ರಚಾರ ಮಾಡುತ್ತಿದ್ದಾರೆ. ಇದು ವ್ಯಕ್ತಿ ಪೂಜೆ ಅಥವಾ ವೈಭವ ಅಲ್ಲ ಎಂದರು.
ಬಿಎಸ್‌ವೈ ಜೈಲಿಗೆ ಕಳುಹಿಸಲು ನೀವು ಷಡ್ಯಂತ್ರ ಮಾಡಲಿಲ್ಲವೇ?: ಸಿದ್ದರಾಮಯ್ಯ
‘ಸಿದ್ದರಾಮಯ್ಯ ಅವರಿಗೆ ಜನ್ಮದಿನ ಆಚರಣೆ ಇಷ್ಟವಿರಲಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಪುನಶ್ಚೇತನ ನೀಡಲು ಕಾರ್ಯಕ್ರಮ ಮಾಡಲಾಗುತ್ತಿದೆ. ನಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಮುಖಂಡರನ್ನು ಮಾತ್ರ ಕರೆದು ಪಕ್ಷದ ಕಾರ್ಯಕ್ರಮದಂತೆ ಮಾಡಲಾಗುತ್ತಿದೆ. ಇಲ್ಲದಿದ್ದರೆ ಸಿದ್ದರಾಮಯ್ಯ ಅವರ ಜನ್ಮ ದಿನಾಚರಣೆ ಸಂಭ್ರಮಿಸಲು ಇತರೆ ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರೂ ಸಹ ಬರುತ್ತಿದ್ದರು’ ಎಂದರು.
‘ಪ್ರಸ್ತುತ ರಾಹುಲ್‌ಗಾಂಧಿಯವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲಾ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.
ಸಿದ್ದು ಜನ್ಮದಿನ ವ್ಯಕ್ತಿ ಕೇಂದ್ರಿತ ಆಗದಂತೆ ನಿಗಾ: ಸಿದ್ದರಾಮಯ್ಯ ಅವರ 75ನೇ ಜನ್ಮದಿನ ಅಮೃತ ಮಹೋತ್ಸವವು 2023ರಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಪೂರಕವಾಗಬೇಕು. ಯಾವುದೇ ಕಾರಣಕ್ಕೂ ‘ಸಿದ್ದರಾಮೋತ್ಸವ’ ಎಂಬ ಪದ ಬಳಕೆ ಮಾಡದೆ ಸಿದ್ದರಾಮಯ್ಯ ಅವರ ವ್ಯಕ್ತಿತ್ವ ಹಾಗೂ ಆಡಳಿತದ ವಿಶ್ಲೇಷಣೆ ಮಾಡಬೇಕು. ರಾಜ್ಯದ ಮೂಲೆ-ಮೂಲೆಯಿಂದ ಬರುವ ಲಕ್ಷಾಂತರ ಮಂದಿಗೆ ಯಾವುದೇ ಸಮಸ್ಯೆಯಾಗದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬೇಕು.
- ದಾವಣಗೆರೆಯಲ್ಲಿ ಆ.3 ರಂದು ಹಮ್ಮಿಕೊಂಡಿರುವ ಸಿದ್ದರಾಮಯ್ಯ ಅವರ ಜನ್ಮದಿನೋತ್ಸವದ ಪೂರ್ವ ಸಿದ್ಧತೆಗಾಗಿ ಹಮ್ಮಿಕೊಂಡಿದ್ದ ಬೃಹತ್ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಕಾಂಗ್ರೆಸ್ ನಾಯಕರು, ಪದಾಧಿಕಾರಿಗಳು ಹಾಗೂ ಆಹ್ವಾನಿತರ ಒಟ್ಟಾರೆ ಅಭಿಪ್ರಾಯವಿದು.
Karnataka Politics: ನಿರುದ್ಯೋಗ ಸಮಸ್ಯೆಗೆ ಕಾಂಗ್ರೆಸ್ ಹೊಸ ಸೂತ್ರ
ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲೇ ನಡೆದ ಸಭೆಯಲ್ಲಿ ಪ್ರತಿಯೊಬ್ಬರೂ ‘ಸಿದ್ದರಾಮೋತ್ಸವ’ ಎಂಬ ಪದ ಬಳಕೆ ಕಾರ್ಯಕ್ರಮವನ್ನು ವ್ಯಕ್ತಿ ಕೇಂದ್ರೀತ ಮಾಡಲಿದೆ. ಹೀಗೆ ಮಾಡದೇ ಪಕ್ಷವು ಸಿದ್ದರಾಮಯ್ಯ ಅವರ ಜನ್ಮ ದಿನದ ಅಮೃತ ಮಹೋತ್ಸವವನ್ನು ಸಂಭ್ರಮಿಸುವ ಮೂಲಕ ಅದು ಮುಂದಿನ ಚುನಾವಣೆಯಲ್ಲಿ ಪಕ್ಷಕೆ ಪೂರಕವಾಗುವಂತೆ ಆಚರಿಸಬೇಕು ಎಂದು ಅಭಿಪ್ರಾಯಪಟ್ಟರು.