Asianet Suvarna News Asianet Suvarna News

ದ್ರೌಪದಿ ಮುರ್ಮುರನ್ನು ರಾಷ್ಟ್ರಪತ್ನಿ ಎಂದ ಕಾಂಗ್ರೆಸ್‌ ನಾಯಕ: ಸಂಸತ್‌ನಲ್ಲಿ ಬಿಜೆಪಿ ಮಹಿಳಾ ಸಂಸದರ ಪ್ರತಿಭಟನೆ

ದ್ರೌಪದಿ ಮುರ್ಮುರನ್ನು ಕಾಂಗ್ರೆಸ್‌ ನಾಯಕ ಅಧೀರ್‌ ಚೌಧರಿ ರಾಷ್ಟ್ರಪತ್ನಿ ಎಂದಿದ್ದಾರೆ. ಈ ಹಿನ್ನೆಲೆ ಕಾಂಗ್ರೆಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೇಂದ್ರ ಸಚಿವೆಯರಾದ ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮನ್‌ ಹಾಗೂ ಇತರೆ ಹಲವು ಮಹಿಳಾ ಬಿಜೆಪಿ ಸಂಸದರು ಪ್ರತಿಭಟನೆ ಮಾಡಿದ್ದಾರೆ. 

congress leader adhir chaudhary calls draupadi murmu as rashtrapatni bjp women mps protest ash
Author
Bangalore, First Published Jul 28, 2022, 4:25 PM IST

ಸಂಸತ್‌ನ ಮುಂಗಾರು ಅಧಿವೇಶನ ಬಹುತೇಕ ಗದ್ದಲ, ಗಲಾಟೆಯಲ್ಲೇ ಕಲಾಪ ಮುಂದೂಡಿಕೆಯಂತಹ ಬೆಳವಣಿಗೆಗಳು ನಡೆಯುತ್ತಿವೆ. ಇಂದು ಕಾಂಗ್ರೆಸ್‌ ನಾಯಕನ ಹೇಳಿಕೆಯಿಂದ ಬಿಜೆಪಿ ಸಂಸದರು ಕಾಂಗ್ರೆಸ್‌ ನಾಯಕರ ವಿರುದ್ಧ ಸಂಸತ್‌ನಲ್ಲಿ ಪ್ರತಿಭಟನೆ ಮಾಡಿದರು. ಮಹಿಳೆಯರು ಹಾಗೂ ಬುಡಕಟ್ಟು ಜನಾಂಗದವರಿಗೆ ಅವಮಾನ ಮಾಡಲಾಗಿದೆ ಎಂದು ಬಿಜೆಪಿ ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ಏನು ಅಂತೀರಾ..? ಮುಂದೆ ಓದಿ..

ಇತ್ತೀಚೆಗಷ್ಟೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ದ್ರೌಪದಿ ಮುರ್ಮುರನ್ನು ಕಾಂಗ್ರೆಸ್‌ ನಾಯಕ ಅಧೀರ್‌ ಚೌಧರಿ ರಾಷ್ಟ್ರಪತ್ನಿ ಎಂದಿದ್ದಾರೆ. ಈ ಹಿನ್ನೆಲೆ ಕಾಂಗ್ರೆಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೇಂದ್ರ ಸಚಿವೆಯರಾದ ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮನ್‌ ಹಾಗೂ ಇತರೆ ಹಲವು ಮಹಿಳಾ ಬಿಜೆಪಿ ಸಂಸದರು ಪ್ರತಿಭಟನೆ ಮಾಡಿದ್ದಾರೆ. 

ಇದನ್ನೂ ಓದಿ: ದ್ರೌಪದಿ ಮಹಾಭಾರತದ ರಾಷ್ಟ್ರಪತಿ: ಜುಲೈ 25ಕ್ಕೆ ಪ್ರಮಾಣ

ಅಲ್ಲದೆ, ಮಹಿಳೆಯರು ಹಾಗೂ ಬುಡಕಟ್ಟು ಜನಾಂಗದವರಿಗೆ ಕಾಂಗ್ರೆಸ್‌ ಅವಮಾನ ಮಾಡಿದೆ ಎಂದು ಸ್ಮೃತಿ ಇರಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೂ, ಸಂಸತ್‌ನಲ್ಲಿ ಮತ್ತು ಬೀದಿಗಳಲ್ಲಿ ಕಾಂಗ್ರೆಸ್‌ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ. ಇನ್ನು, ಕೈ ಪಕ್ಷವನ್ನು ಮಹಿಳೆಯಾದ ಸೋನಿಯಾ ಗಾಂಧಿ ಮುನ್ನಡೆಸುತ್ತಿದ್ದರೂ ಕಾಂಗ್ರೆಸ್‌ನವರು ಮಾತ್ರ ಸಾಂವಿಧಾನಿಕ ಹುದ್ದೆಗಳಲ್ಲಿರುವ ಮಹಿಳೆಯರಿಗೆ ಅವಮಾನ ಮಾಡುತ್ತಿದ್ದಾರೆ ಎಂದೂ ಸ್ಮೃತಿ ಇರಾನಿ ಹೇಳಿದ್ದಾರೆ. 

"ಭಾರತದ ರಾಷ್ಟ್ರಪತಿಯನ್ನು ಈ ರೀತಿಯಾಗಿ ಸಂಬೋಧಿಸುವುದು ಅವರ ಸಾಂವಿಧಾನಿಕ ಹುದ್ದೆಯನ್ನು ಮಾತ್ರವಲ್ಲದೆ ಅವರು ಪ್ರತಿನಿಧಿಸುವ ಶ್ರೀಮಂತ ಬುಡಕಟ್ಟು ಪರಂಪರೆಯನ್ನು ಅವಮಾನಿಸುತ್ತದೆ ಎಂದು ಕಾಂಗ್ರೆಸ್ಸಿಗರಿಗೆ ತಿಳಿದಿತ್ತು. ಆದರೂ, ಅಂತಹ ಶೈಲಿಯಲ್ಲಿ ರಾಷ್ಟ್ರಪತಿಯನ್ನು ಕೀಳಾಗಿಸುವುದೆಂದರೆ ನಮ್ಮ ದೇಶದ ಮಹಿಳೆಯರ ಸಾಮರ್ಥ್ಯವನ್ನು ಅವಮಾನಿಸುವುದು ಎಂದು ಅವರು (ಅಧೀರ್ ಚೌಧರಿ) ತಿಳಿದಿದ್ದರು" ಎಂದು ಸ್ಮೃತಿ ಇರಾನಿ ಟೀಕೆ ಮಾಡಿದ್ದಾರೆ.

ದ್ರೌಪದಿ ಮುರ್ಮು ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾದಾಗಿನಿಂದಲೂ ಕಾಂಗ್ರೆಸ್‌ ದುರುದ್ದೇಶಪೂರಿತವಾಗಿ ಟಾರ್ಗೆಟ್‌ ಮಾಡಿತ್ತು. ಈಗ, ಅವರು ರಾಷ್ಟ್ರಪತಿಯಾದ ಬಳಿಕವೂ ಈ ಟಾರ್ಗೆಟ್‌ ನಿಲ್ಲುವುದಿಲ್ಲ ಎನಿಸುತ್ತದೆ. ಅಧೀರ್‌ ಚೌಧರಿ ದ್ರೌಪದಿ ಅವರನ್ನು ರಾಷ್ಟ್ರಪತ್ನಿ ಎನ್ನುವ ಮೂಲಕ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವವರಿಗೆ ಅವಮಾನವಾಗುತ್ತದೆ ಎಂದು ಗೊತ್ತಿದ್ದರೂ ಹಾಗೆ ಸಂಬೋಧಿಸಿದ್ದಾರೆ. ಇದರಿಂದ ಕಾಂಗ್ರೆಸ್‌ ಬುಡಕಟ್ಟು ಜನರ ವಿರೋಧಿ, ದಲಿತ ವಿರೋಧಿ ಹಾಗೂ ಮಹಿಳಾ ವಿರೋಧಿ ಎಂಬುದು ಇಡೀ ದೇಶದ ಜನತೆಗೆ ಗೊತ್ತಾಗಿದೆ ಎಂದೂ ಸ್ಮೃತಿ ಇರಾನಿ ಹೇಳಿದ್ದಾರೆ.

ಇದನ್ನು ಓದಿ: ಟಿಎಂಸಿ ಶಾಸಕ, ಸಂಸದರಿಂದಲೂ ದ್ರೌಪದಿ ಮುರ್ಮುಗೆ ಮತದಾನ..?

ಅಧೀರ್‌ ಚೌಧರಿ ಹೇಳಿದ್ದೇನು..?
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಿದ ಇಡಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಯ ಸಂದರ್ಭದಲ್ಲಿ ಅಧೀರ್ ಚೌಧರಿ ಈ ರೀತಿ ಹೇಳಿಕೆ ನೀಡಿದ್ದಾರೆ. ರಾಷ್ಟ್ರಪತಿ ಭವನಕ್ಕೆ ಕಾಂಗ್ರೆಸ್‌ ಮೆರವಣಿಗೆಯ ಪ್ಲ್ಯಾನ್‌ ಕುರಿತು ಕೇಳಿದ ಪ್ರಶ್ನೆಗೆ, ಅಧೀರ್ ಚೌಧರಿ, "ಹೌದು, ನಾವು ರಾಷ್ಟ್ರಪತಿ ಬಳಿ ಹೋಗುತ್ತೇವೆ. ಭಾರತದ ರಾಷ್ಟ್ರಪತಿ, ಇಲ್ಲ, ಇಲ್ಲ, ರಾಷ್ಟ್ರಪತ್ನಿ" ಎಂದು ಹೇಳಿದ್ದರು. ಈ ಹಿನ್ನೆಲೆ, ನಿರ್ಮಲಾ ಸೀತಾರಾಮನ್ ಸೇರಿದಂತೆ ಬಿಜೆಪಿ ಮಹಿಳಾ ಸಂಸದರು ಅಧೀರ್ ಚೌಧರಿ ಅವರ ಮಾತನ್ನು ವಿರೋಧಿಸಿ, ಪಕ್ಷದಿಂದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ಸಂಸತ್ತಿನ ಒಳಗೆ ಈ ವಿಷಯ ಪ್ರಸ್ತಾಪಿಸಲಾಯಿತು.

ಆದರೆ, ತಾನು ದ್ರೌಪದಿ ಮುರ್ಮು ಅವರನ್ನು ಉದ್ದೇಶಪೂರ್ವಕವಾಗಿ 'ರಾಷ್ಟ್ರಪತ್ನಿ' ಎಂದು ಕರೆದಿಲ್ಲ. ಬಾಯಿ ತಪ್ಪಿ ಈ ರೀತಿ ಹೇಳಿದ್ದೇನೆ ಎಂದು ಬಳಿಕ ತಮ್ಮ ಹೇಳಿಕೆಯನ್ನು ಅಧೀರ್ ಚೌಧರಿ ಸಮರ್ಥನೆ ಮಾಡಿಕೊಂಡಿದ್ದಾರೆ. ಟ್ವಿಟ್ಟರ್‌ನಲ್ಲೂ ಅನೇಕ ಬಿಜೆಪಿ ನಾಯಕರು ಕಾಂಗ್ರೆಸ್‌ ಪಕ್ಷದ ವಿರುದ್ಧ ಹಾಗೂ ಅಧೀರ್‌ ಚೌಧರಿ ವಿರುದ್ಧ ಆಕ್ರೋಶ ಹೊರಹಾಕಿ ಟ್ವೀಟ್‌ ಮಾಡಿದ್ದಾರೆ.

Follow Us:
Download App:
  • android
  • ios