ವಿಧಾನಸಭೆ ಚುನಾವಣೆ 2023: ಸಿದ್ದರಾಮಯ್ಯಗೆ ಮತ್ತೊಂದು ಕ್ಷೇತ್ರದಿಂದ ಆಹ್ವಾನ
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು ಕೆಲ ತಿಂಗಳು ಬಾಕಿ ಇರುವಂತೆ ರಾಜ್ಯ ರಾಜಕೀಯ ಚಟುವಟಿಕೆ ಗರಿಗೆದರಿವೆ. ಇದರ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಮತ್ತೊಂದು ಕ್ಷೇತ್ರದಿಂದ ಆಹ್ವಾನ ಬಂದಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು, (ಆಗಸ್ಟ್.04): ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನೇನು ಏಳೆಂಟು ತಿಂಗಳು ಬಾಕಿ ಇದೆ. ಆಗಲೇ ನಾಯಕರು ಸ್ವಪಕ್ಷೇತ್ರದಲ್ಲಿ ಚುನಾವಣೆ ತಯಾರಿ ನಡೆಸಿದ್ದಾರೆ. ಆದ್ರೆ, ಮಾಜಿ ಸಿಎಂ ಸಿದ್ದರಾಮಯ್ಯನವರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಈಗಾಗಲೇ ಅವರಿಗೆ ಕೊಪ್ಪಳ, ಕೋಲಾರ ಜಿಲ್ಲೆಗೆ ಬರುವಂತೆ ಆಹ್ವಾನಗಳು ಬಂದಿವೆ. ಆದ್ರೆ, ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಕಣಕ್ಕಿಳಿಯಬೇಕೆಂದು ಚಿಂತನೆ ನಡೆಸಿದ್ದಾರೆ. ಇದರ ಮಧ್ಯೆ ಸಿದ್ದರಾಮಯ್ಯಗೆ ಮತ್ತೊಂದು ಕ್ಷೇತ್ರದಿಂದ ಆಹ್ವಾನ ಬಂದಿದೆ.
ಸಿದ್ದರಾಮಯ್ಯ ಮುಂದಿನ ಎಲೆಕ್ಷನ್‌ಗೆ ಆಯ್ದುಕೊಳ್ಳುವ ಕ್ಷೇತ್ರ ಯಾವುದು..?
ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯಗೆ ಸ್ಪರ್ಧೆ ಮಾಡುವಂತೆ ಕಾಂಗ್ರೆಸ್ ಕಿಸಾನ್ ಘಟಕ ಆಹ್ವಾನ ನೀಡಿದ್ರೆ ಮೂಡಿಗೆರೆ ವಿಧಾನಸಭಾ ಕ್ಷೇತ್ರದಿಂದ ನಿವೃತ್ತ ಜಿಲ್ಲಾಧಿಕಾರಿಯನ್ನು ಕಣ ಇಳಿಸಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ.
ಕಾಫಿನಾಡಿನಿಂದ ಸ್ಪರ್ಧಿಸುವಂತೆ ಸಿದ್ದುಗೆ ಮನವಿ
2023ರ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಮನವಿ ಮಾಡಿದ್ದಾರೆ. ಆಗಸ್ಟ್ 3ರಂದು ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವದಲ್ಲಿ ಮನವಿ ಮಾಡಿದ್ದಾರೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕರ ವರ್ತನೆಯಿಂದ ಬೇಸತ್ತಿದ್ದಾರೆ. ದಿವಂಗತ ಇಂದಿರಾಗಾಂಧಿ ಅವರಿಗೆ ಪುನರ್ಜನ್ಮ ನೀಡಿದ ಕ್ಷೇತ್ರದಿಂದ ನಿಮ್ಮಂತಹ ಜನನಾಯಕರು ಈ ಬಾರಿ ಸ್ಪರ್ಧಿಸಿದರೆ ಮತ್ತೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪುನರ್ಜನ್ಮವಾಗಲಿದೆ ಎಂದು ಒತ್ತಾಯಿಸಿದ್ದಾರೆ.
ಸಿ ಟಿ ರವಿ ವಿರುದ್ದ ಸ್ಪರ್ಧೆಗೆ ಮನವಿ
ಬಿಜೆಪಿ ಭದ್ರಕೋಟೆಯಾಗಿರುವ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ 4 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆ ಮಾಡುವಂತೆ ಕಿಸಾನ್ ಕಾಂಗ್ರೆಸ್ ಸೆಲ್ ಒತ್ತಡ ಹೇರಿದೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯಿತ ಮತಗಳು ನಿರ್ಣಾಯಕ ಪಾತ್ರವನ್ನ ವಹಿಸಿದ್ರೆ ಕುರುಬ , ಮುಸ್ಲಿಂ , ಒಕ್ಕಲಿಗ ಮತಗಳು ಅಧಿಕವಾಗಿದ್ದು ಅಹಿಂದ ಮತಗಳನ್ನು ಸೆಳೆಯುಲು ಸಿದ್ದರಾಮಯ್ಯ ಸ್ಪರ್ಧೆ ಕಾಂಗ್ರೆಸ್‌ಗೆ ವರದಾನ ಎನ್ನುವ ಲೆಕ್ಕಚಾರವನ್ನು ಮಾಡಲಾಗುತ್ತಿದೆ.
ಒಟ್ಟಾರೆ ಒಂದುಕಡೆ ಗೆಲುವಿನ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುತ್ತಿರುವ ಸಿದ್ದರಾಮಯ್ಯ ಅವರಿಗೆ ಇದೇ ಹೊತ್ತಿನಲ್ಲಿ ಚಿಕ್ಕಮಗಳೂರು ವಿಧಾಸಭಾ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಲು ಒತ್ತಡ ಹೇರಲಾಗುತ್ತಿದ್ದು ಯಾವ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿಯಲಿದ್ದಾರೆ ಎಂದು ಕಾದುನೋಡಬೇಕಾಗಿದೆ.
ರಾಜ್ಯ ರಾಜಕೀಯಕ್ಕೆ ನಿವೃತ್ತ ಜಿಲ್ಲಾಧಿಕಾರಿ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನ ಸಭಾ ಕ್ಷೇತ್ರದಿಂದ ನಿವೃತ್ತ ಜಿಲ್ಲಾಧಿಕಾರಿ ಶ್ರೀರಂಗಯ್ಯನವರನ್ನು ಅಭ್ಯರ್ಥಿನ್ನಾಗಿ ಮಾಡುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಶ್ರೀರಂಗಯ್ಯನವರನ್ನು ಅಭ್ಯರ್ಥಿ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಆಫರ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ನಿವೃತ್ತ ಜಿಲ್ಲಾಧಿಕಾರಿ ಶ್ರೀರಂಗಯ್ಯ ಚುನಾವಣೆ ಅಖಾಡಕ್ಕೆ ತರುವ ನಿಟ್ಟಿನಲ್ಲಿ ಕಾಂಗ್ರೆಸ್‌ನ ಒಂದು ಗುಂಪು ಕೈ ಹಾಕಿದೆ. ಅಲ್ಲದೇ ಮೂಡಿಗೆರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಶ್ರೀರಂಗಯ್ಯಗೆ ಒತ್ತಡ ಹೇರಿದ್ದು ಹಾಲಿ ಶಾಸಕ ಕುಮಾರಸ್ವಾಮಿಗೆ ಟಕ್ಕರ್ ಕೊಡಲು ಕೈ ಪ್ಲಾನ್ ಮಾಡಿದೆ.