ವಿಜಯಪುರ, (ಜ.15): ಸಚಿವ ಸ್ಥಾನ ಸಿಗದಿದ್ದಕ್ಕೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಎಸ್ ಯಡಿಯೂರಪ್ಪ ವಿರುದ್ಧ ಸಿಡಿ ಬಾಂಬ್ ಸ್ಫೋಟಿಸಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚನ ಮೂಡಿಸಿದೆ.

ಕಣ್ಣಿನಿಂದ ನೋಡಲಾಗದಂತಹ ಸಿಡಿ ಇದೆ. ಬಿಎಸ್ ಯಡಿಯೂರಪ್ಪ ಮನೆಯಲ್ಲಿ ಆ ಸಿಡಿಯನ್ನು ಮಾಡಿದ್ದೇ ಅವರ ಮೊಮ್ಮಗ. ಹಿಂದೆ ಇದ್ದದ್ದೇ ಆ ಸಿಡಿ, ಯಾರೊಂದಿಗೆ ಇದೆ ಅಂತ ತಮಗೆಲ್ಲಾ ಅದು ಗೊತ್ತೇ ಇದೆ. ನಾನು ಆ ಬಗ್ಗೆ ಏನು ಹೇಳಬೇಕಿಲ್ಲ. ಈ ಸಿಡಿಯನ್ನು ಮುಂದಿಟ್ಟು ಯಡಿಯೂರಪ್ಪನವರನ್ನು ಬ್ಲ್ಯಾಕ್​ಮೇಲ್ ಮಾಡಿ ಹಲವರು ಸಚಿವರಾಗುತ್ತಿದ್ದಾರೆ ಎಂದು ಆರೋಪಿಸಿದ್ದರು. ಯತ್ನಾಳ್ ಅವರ ಈ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

'ಯತ್ನಾಳ್ ಬಿಜೆಪಿ ಸೇರ್ಪಡೆ ಬೇಡವೆಂದ್ರೂ ಬಿಎಸ್‌ವೈ ಕೇಳಲಿಲ್ಲ, ಈಗ ಅವರಿಗೆ ಮುಳುವು' 

ಇನ್ನು ಈ ಬಗ್ಗೆ ಪ್ರತಿಕ್ರಿಯಿಸುರವ ಕಂಗ್ರೆಸ್ ನಾಯಕ ಟಿ.ಬಿ.ಜಯಚಂದ್ರ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುರಿತಾದ ಸಿ.ಡಿ.ಇದೆ ಎಂದು ಸುದ್ದಿ ಬರುತ್ತಿದೆ. ಬಸನಗೌಡ ಪಾಟೀಲ ಯತ್ನಾಳ್ ಅವರು ನನ್ನ ಬಳಿ ಸಿ.ಡಿ. ಇದ್ದಿದ್ದರೆ ಉಪಮುಖ್ಯಮಂತ್ರಿ ಆಗುತ್ತಿದ್ದೆ ಎಂದಿದ್ದಾರೆ. ಇಷ್ಟು ಬಹಿರಂಗವಾಗಿ ಮಾತನಾಡಿದ ಮೇಲೆ ಸಿ.ಡಿ. ಹೊರ ಬಂದೇ ಬರುತ್ತದೆ ಎಂದರು.

ಯಾರ ಬಳಿ ಇಲ್ಲ ಎಂದರೂ ನಮ್ಮ ಸ್ನೇಹಿತ ಎಚ್‌. ವಿಶ್ವನಾಥ್ ಬಳಿ ಸಿ.ಡಿ. ಇದ್ದೇ ಇರುತ್ತದೆ. ಅದರಲ್ಲಿ ಏನಿದೆ, ಯಾರು ಯಾವ ಪಾತ್ರ ಮಾಡಿದ್ದಾರೆ ಎನ್ನುವುದನ್ನು ಆ ಮೇಲೆ ನೋಡೋಣ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಮುಖಂಡರೇ ಸಿ.ಡಿ. ವಿಚಾರವಾಗಿ ಇಷ್ಟೊಂದು ನೇರವಾಗಿ ಹೇಳುತ್ತಿದ್ದಾರೆ ಎಂದರೆ ಇದರಲ್ಲಿ ಏನೋ ಇದೆ. ಈಗ ಇದೆಲ್ಲವೂ ಹೊರಗೆ ಬರಲು ಆರಂಭವಾಗಿದೆ ಎಂದು ಹೇಳಿದರು.