Asianet Suvarna News Asianet Suvarna News

ಮತ್ತೆ ಮೈತ್ರಿ ಸದ್ದು ಎದ್ದಿದ್ದೇಕೆ? : ಕಾಂಗ್ರೆಸ್‌-ಜೆಡಿಎಸ್‌ ದೋಸ್ತಿ ಗುಸುಗುಸು ಹಿಂದಿನ ರಹಸ್ಯ

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರ ರಚನೆ ಮಾಡುವ ಸಾಧ್ಯತೆಯ ಮಾತುಗಳು ಕೇಳಿಬರುತ್ತಿದೆ. ಉಪ ಚುನಾವಣೆ ಬೆನ್ನಲ್ಲೇ ಈ ಚರ್ಚೆ ಜೋರಾಗಿದೆ. 

Congress JDS May Again Form Government in Karnataka
Author
Bengaluru, First Published Dec 1, 2019, 7:41 AM IST

ಬೆಂಗಳೂರು [ನ.01]:  ಉಪ ಚುನಾವಣೆ ಪ್ರಚಾರ ರಂಗೇರುತ್ತಿರುವ ಈ ಹಂತದಲ್ಲಿ ಮತ್ತೆ ಹೊಸ ಮೈತ್ರಿ ಹಾಗೂ ಹೊಸ ಸರ್ಕಾರ ರಚನೆಯ ಮಾತು ಪ್ರಬಲವಾಗಿ ಕೇಳಿ ಬರುತ್ತಿರುವುದರ ಹಿಂದೆ ಪಕ್ಕಾ ರಾಜಕೀಯ ತಂತ್ರಗಾರಿಕೆಯಿದೆ. ಅದು- ಇಂತಹದ್ದೊಂದು ಸಾಧ್ಯತೆಯಿದೆ ಎಂಬ ಸಂದೇಶ ರವಾನೆ ಮೂಲಕ ಉಪ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ದೊರೆಯುವ ಸಹಜ ಲಾಭವನ್ನು ತಪ್ಪಿಸುವುದು. ಒಂದು ವೇಳೆ, ಈ ತಂತ್ರ ಫಲಿಸಿ ಉಪಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಾಧನೆ ಉತ್ತಮವಾದರೆ ಆಗ ಸರ್ಕಾರ ರಚನೆಯ ಸಾಧ್ಯತೆಯನ್ನು ಪರಿಶೋಧಿಸುವುದು.

ಇಷ್ಟಕ್ಕೂ ಇಂತಹ ಪರಿಸ್ಥಿತಿ ರೂಪುಗೊಳ್ಳಬೇಕಾದರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಒಗ್ಗೂಡಿ ಕನಿಷ್ಠ ಎಂಟು ಸ್ಥಾನವನ್ನಾದರೂ ಗೆಲ್ಲಲೇಬೇಕು. ಆಗ ಬಿಜೆಪಿಯ ಬುಡ ಅಲುಗಾಡಿಸುವ ಗಂಭೀರ ಪ್ರಯತ್ನ ನಡೆಯಬಹುದು. ಇಲ್ಲವಾದರೆ ಇದು ಆಡಳಿತಾರೂಢ ಪಕ್ಷಕ್ಕೆ ದೊರೆಯುವ ಲಾಭವನ್ನು ಸಾಧ್ಯವಾದಷ್ಟುಕಡಿಮೆ ಮಾಡುವ ಚುನಾವಣಾ ತಂತ್ರಗಾರಿಕೆಗೆ ಸೀಮಿತವಾಗಬಹುದು ಎನ್ನಲಾಗುತ್ತಿದೆ.

ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಕೋಳಿ ಜಗಳದಲ್ಲಿ ತೊಡಗಿದ್ದ ಹಾಗೂ ಸರ್ಕಾರ ಕುಸಿದ ನಂತರ ತೀವ್ರ ವೈಯಕ್ತಿಕ ಮಟ್ಟಕ್ಕೆ ಇಳಿದು ಆರೋಪ, ಪ್ರತ್ಯಾರೋಪ ಮಾಡುತ್ತಿದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ನಾಯಕರು ಚುನಾವಣಾ ಪ್ರಚಾರ ರಂಗೇರುತ್ತಿರುವಂತೆಯೇ ಮತ್ತೆ ಮೈತ್ರಿಯ ವಿಚಾರವನ್ನು ತೇಲಿಬಿಡತೊಡಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಉಪ ಚುನಾವಣೆ ಎದುರಾಗಿರುವ ಬಗ್ಗೆ ಶ್ರೀಸಾಮಾನ್ಯನಲ್ಲಿ ಇರುವ ಬೇಸರ. ಪ್ರಚಾರದ ವೇಳೆ ಈ ಅಂಶವನ್ನು ಗಮನಿಸಿರುವ ನಾಯಕರು ಜನಸಾಮಾನ್ಯರಲ್ಲಿರುವ ಈ ಬೇಸರವನ್ನು ಬಳಸಿಕೊಂಡರೆ ಬಿಜೆಪಿಗೆ ಹಿನ್ನಡೆಯುಂಟು ಮಾಡಬಹುದು ಎಂಬ ಲೆಕ್ಕಾಚಾರ ಆರಂಭಿಸಿರುವುದೇ ಈ ಹೊಸ ಆಟಕ್ಕೆ ಕಾರಣ.

ಸಾಮಾನ್ಯವಾಗಿ ಉಪ ಚುನಾವಣೆಗಳಲ್ಲಿ ಆಡಳಿತ ಪಕ್ಷಕ್ಕೆ ಹೆಚ್ಚು ಅನುಕೂಲ. ಸರ್ಕಾರ ಸ್ಥಿರವಾಗಿರುತ್ತದೆ ಎಂಬ ಕಾರಣಕ್ಕೆ ಜನರು ಸಹಜವಾಗಿಯೇ ಆಡಳಿತ ಪಕ್ಷಕ್ಕೆ ಅನುಕೂಲಕರವಾಗುವಂತೆ ವರ್ತಿಸುತ್ತಾರೆ. ಈ ಹಿಂದಿನ ಬಹುತೇಕ ಉಪ ಚುನಾವಣೆಗಳ ಫಲಿತಾಂಶ ಈ ಮಾತನ್ನು ನಿರೂಪಿಸುತ್ತದೆ. ಆದರೆ, ಸರ್ಕಾರ ಅಸ್ಥಿರವಾಗುವ ಸಾಧ್ಯತೆಯಿದೆ ಎಂಬ ಗೊಂದಲವನ್ನು ಮತದಾರರಲ್ಲಿ ಹುಟ್ಟುಹಾಕಿದರೆ ಆಗ ಆಡಳಿತ ಪಕ್ಷಕ್ಕೆ ದೊರೆಯುವ ಈ ಲಾಭವನ್ನು ತಪ್ಪಿಸಬಹುದು. ಈ ಲೆಕ್ಕಾಚಾರವನ್ನು ಇಟ್ಟುಕೊಂಡೇ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಉಪ ಚುನಾವಣೆ ನಂತರದ ಮೈತ್ರಿ ಸರ್ಕಾರದ ಮಾತುಗಳನ್ನು ತೇಲಿಬಿಡತೊಡಗಿವೆ.

ಗೌಡರು ರಾಜ್ಯಸಭೆಗೆ: ಕಾಂಗ್ರೆಸ್‌ ಬೆಂಬಲ?...

ಹಾಗಂತ ಇದು ಕೇವಲ ಚುನಾವಣಾ ತಂತ್ರಗಾರಿಕೆ ಮಾತ್ರವಲ್ಲ. ಈ ತಂತ್ರ ಫಲಿಸಿ ಬಿಜೆಪಿಗೇನಾದರೂ ಕಡಿಮೆ ಸ್ಥಾನ ಲಭಿಸಿದರೆ ಅಥವಾ ಕಾಂಗ್ರೆಸ್‌-ಜೆಡಿಎಸ್‌ ಒಗ್ಗೂಡಿ ಎಂಟಕ್ಕಿಂತ ಹೆಚ್ಚು ಸ್ಥಾನ ಗಳಿಸಿದರೆ ಆಗ ನಿಜಕ್ಕೂ ಮೈತ್ರಿ ಸರ್ಕಾರದ ರಚನೆಯ ಪ್ರಯತ್ನಗಳು ಆರಂಭವಾಗಲಿವೆ. ಆಗ ಸಿದ್ದರಾಮಯ್ಯ ಮುಖ್ಯಮಂತ್ರಿ, ಎಚ್‌.ಡಿ.ರೇವಣ್ಣ ಉಪ ಮುಖ್ಯಮಂತ್ರಿ ಸೂತ್ರವೋ ಅಥವಾ ಸಿದ್ದರಾಮಯ್ಯ ಹೊರತಾದ ಕಾಂಗ್ರೆಸ್‌ ನಾಯಕರಿಗೆ ಮುಖ್ಯಮಂತ್ರಿ ಹುದ್ದೆ ಸೂತ್ರವೋ ಎಂಬುದು ಚರ್ಚೆಗೆ ಬರಬಹುದು.

ಒಂದು ವೇಳೆ ಎಂಟಕ್ಕಿಂತ ಕಡಿಮೆ ಸ್ಥಾನ ಬಂದರೆ ಆಗ ಏನಾಗುತ್ತದೆ ಎಂಬುದಕ್ಕೆ ಕಾಂಗ್ರೆಸ್‌ ನಾಯಕರ ಬಳಿ ಒಂದು ಸೂತ್ರವಿದೆ. ಅದು: ಕಾಂಗ್ರೆಸ್‌-ಜೆಡಿಎಸ್‌ ಒಗ್ಗೂಡಿ ಎಂಟಲ್ಲ, ಐದಕ್ಕಿಂತ ಹೆಚ್ಚು ಸ್ಥಾನ ಗಳಿಸಿದರೂ ಸಾಕು. ಆಗ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಬಹುದು. ಬಿಜೆಪಿಯು 17 ಮಂದಿ ಕಾಂಗ್ರೆಸ್‌-ಜೆಡಿಎಸ್‌ ಹಾಗೂ ಪಕ್ಷೇತರರನ್ನು ಸೆಳೆದಿರುವಾಗ ನಾವಿಬ್ಬರು (ಕಾಂಗ್ರೆಸ್‌-ಜೆಡಿಎಸ್‌ ನಾಯಕರು) ಒಗ್ಗೂಡಿ ಐದಾರು ಮಂದಿ ಬಿಜೆಪಿಯವರನ್ನು ಸೆಳೆಯಲು ಸಾಧ್ಯವಿಲ್ಲವೇ? ಖಂಡಿತ ಸೆಳೆದುಹಾಕುತ್ತೇವೆ. ಉಪ ಚುನಾವಣೆ ನಂತರ ಬಿಜೆಪಿ ಸರ್ಕಾರ ಉಳಿಯುವುದಿಲ್ಲ ಎಂದು ಹೇಳುತ್ತಾರೆ ಪ್ರಭಾವಿ ಕಾಂಗ್ರೆಸ್‌ ನಾಯಕರೊಬ್ಬರು.

ಈ ಕಾರಣಕ್ಕೇ ಫ್ರೆಂಡ್ಲಿ ಫೈಟ್‌

ಈ ಹಿನ್ನೆಲೆಯಿಂದಲೇ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಫ್ರೆಂಡ್ಲಿ ಫೈಟ್‌ಗೆ ಮುಂದಾಗಿವೆ. ಎಲ್ಲೆಲ್ಲಿ ಕಾಂಗ್ರೆಸ್‌ಗೆ ಅನುಕೂಲವಿರುವ ವಾತಾವರಣವಿದೆಯೋ ಅಲ್ಲಿ ಜೆಡಿಎಸ್‌ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಪರೋಕ್ಷವಾಗಿ ಕಾಂಗ್ರೆಸ್‌ಗೆ ನೆರವಾಗುತ್ತಿದೆ. ಉದಾಹರಣೆಗೆ ಹುಣಸೂರು, ಚಿಕ್ಕಬಳ್ಳಾಪುರ, ಗೋಕಾಕ್‌, ರಾಣೆಬೆನ್ನೂರು, ಹಿರೇಕೆರೂರು. ಇನ್ನು ಜೆಡಿಎಸ್‌ಗೆ ಉತ್ತಮ ವಾತಾವರಣವಿರುವ ಕ್ಷೇತ್ರಗಳಾದ ಕೆ.ಆರ್‌. ಪೇಟೆ, ಯಶವಂತಪುರಗಳಲ್ಲಿ ಕಾಂಗ್ರೆಸ್‌ ಪರೋಕ್ಷವಾಗಿ ಜೆಡಿಎಸ್‌ಗೆ ನೆರವಾಗುತ್ತಿದೆ.

ತನ್ಮೂಲಕ ಸಾಧ್ಯವಾದಷ್ಟುಹೆಚ್ಚು ಸ್ಥಾನ ಗಳಿಸಿ ಬಿಜೆಪಿ ಸರ್ಕಾರವನ್ನು ಅಲುಗಾಡಿಸುವ ಅವಕಾಶ ನಿರ್ಮಾಣವಾಗುವಂತೆ ಮಾಡುವುದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ಉದ್ದೇಶ. ಹೀಗಾಗಿಯೇ ಪ್ರಚಾರದ ಅವಧಿಯಲ್ಲಿ ಮತ್ತೆ ಮೈತ್ರಿ ಸಾಧ್ಯತೆಯ ಮಾತುಗಳು ಪ್ರಬಲಾಗಿ ಕೇಳಿಬರತೊಡಗಿವೆ.

ಕಾಂಗ್ರೆಸ್‌-ಜೆಡಿಎಸ್‌ ಲೆಕ್ಕಾಚಾರ ಏನು?

1. ಉಪ ಚುನಾವಣೆಗೆ ಬಿಜೆಪಿ ಕಾರಣ ಎಂಬುದನ್ನು ಬಿಂಬಿಸಿ ಎನ್‌ಕ್ಯಾಶ್‌ ಮಾಡಿಕೊಳ್ಳಬಹುದು ಎಂಬ ಚಿಂತನೆ

2. ಮತ್ತೆ ಸರ್ಕಾರ ಅಸ್ಥಿರವಾಗುತ್ತದೆ ಎಂದು ಬಿಂಬಿಸಿದರೆ ಜನರಿಗೆ ಬಿಜೆಪಿ ಬಗ್ಗೆ ಒಲವು ಕಡಿಮೆಯಾಗುತ್ತದೆ

3. ಇದರಿಂದಾಗಿ ಬಿಜೆಪಿಗೆ 8 ಸ್ಥಾನಕ್ಕಿಂತ ಕಡಿಮೆ ಬಂದರೆ ಮತ್ತೆ ಮೈತ್ರಿ ಸರ್ಕಾರ ರಚನೆಗೆ ಯತ್ನಿಸಬಹುದು

4. ಎಂಟಲ್ಲ, ಐದು ಸ್ಥಾನ ಬಂದರೂ ಬಿಜೆಪಿಯಿಂದ ಒಂದಷ್ಟುಶಾಸಕರನ್ನು ಸೆಳೆದು ಸರ್ಕಾರ ರಚಿಸಬಹುದು

5. ಆಗ ಸಿದ್ದು ಸಿಎಂ, ರೇವಣ್ಣ ಡಿಸಿಎಂ ಅಥವಾ ಸಿದ್ದುಯೇತರ ಕಾಂಗ್ರೆಸಿಗ ಸಿಎಂ ಇತ್ಯಾದಿ ಸೂತ್ರ ರಚಿಸಬಹುದು

6. ಈ ಲೆಕ್ಕಾಚಾರ ಹಾಕಿಕೊಂಡೇ ಕಾಂಗ್ರೆಸ್‌-ಜೆಡಿಎಸ್‌ ನಾಯಕರಿಂದ ಮತ್ತೆ ಮೈತ್ರಿ ಸರ್ಕಾರದ ಬಗ್ಗೆ ಮಾತು

Follow Us:
Download App:
  • android
  • ios