ಬೆಂಗಳೂರು [ಡಿ.01]:  ಗೆಲ್ಲುವ ಸಾಧ್ಯತೆಯೇ ಇಲ್ಲದಿರುವ ಕಾರಣಕ್ಕೆ ಡಿ.12ಕ್ಕೆ ನಡೆಯುವ ರಾಜ್ಯಸಭಾ ಚುನಾವಣೆಗೆ ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬ ಚರ್ಚೆಯೇ ಕಾಂಗ್ರೆಸ್‌ನಲ್ಲಿ ಇನ್ನೂ ಆರಂಭವಾಗಿಲ್ಲ. ಆದರೆ, ಜೂನ್‌ ಮಧ್ಯಭಾಗದಲ್ಲಿ ತೆರವಾಗುವ ನಾಲ್ಕು ಸ್ಥಾನಗಳ ಪೈಕಿ ಕಾಂಗ್ರೆಸ್‌-ಜೆಡಿಎಸ್‌ ಒಗ್ಗೂಡಿದರೆ ಗೆಲ್ಲಬಹುದಾದ ಎರಡು ಸ್ಥಾನಗಳ ಬಗ್ಗೆ ಈಗಾಗಲೇ ಒಮ್ಮತ ಮೂಡಿದೆ.

ಅಂದಹಾಗೆ ಜೂನ್‌ನಲ್ಲಿ ನಡೆಯುವ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳಿಂದ ಸ್ಪರ್ಧಿಸಲಿರುವ ನಾಯಕರು ಮಲ್ಲಿಕಾರ್ಜುನ ಖರ್ಗೆ ಮತ್ತು ಎಚ್‌.ಡಿ. ದೇವೇಗೌಡ ಎಂದು ಉನ್ನತ ಮೂಲಗಳು ತಿಳಿಸಿವೆ.

ಡಿ.12ಕ್ಕೆ ನಡೆಯುವ ರಾಜ್ಯಸಭೆ ಚುನಾವಣೆಗೆ ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬ ಬಗ್ಗೆ ಕಾಂಗ್ರೆಸ್‌ ನಾಯಕರು ಇನ್ನೂ ಚರ್ಚೆಯನ್ನೇ ಆರಂಭಿಸಿಲ್ಲ. ಗೆಲ್ಲುವ ಯಾವುದೇ ಸಾಧ್ಯತೆ ಇಲ್ಲದ ಕಾರಣ ನಾಮ್‌ಕೇವಾಸ್ತೆ ಒಬ್ಬ ಅಭ್ಯರ್ಥಿಯ ಹೆಸರನ್ನು ಸೂಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ನಾಮ್‌ಕೆವಾಸ್ತೆ ವ್ಯಕ್ತಿ ಯಾರು ಎಂಬುದು ಇನ್ನೂ ಚರ್ಚೆಯಾಗಬೇಕಿದೆ.

ಆದರೆ, ಜೂನ್‌ ಮಧ್ಯಭಾಗದಲ್ಲಿ ರಾಜ್ಯದ ನಾಲ್ಕು ಮಂದಿ ರಾಜ್ಯಸಭಾ ಸದಸ್ಯರ ಅವಧಿ ಕೊನೆಗೊಳ್ಳಲಿದೆ. ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌, ರಾಜೀವ್‌ಗೌಡ, ಬಿಜೆಪಿಯ ಪ್ರಭಾಕರ ಕೋರೆ ಮತ್ತು ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಅವರ ಅವಧಿ ಕೊನೆಗೊಳ್ಳಲಿದೆ. ಆಗ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಗೆಲ್ಲಬಹುದು. ಕಾಂಗ್ರೆಸ್‌ ಒಂದು ಸ್ಥಾನ ಗೆಲ್ಲಬಹುದು. ಬಾಕಿ ಉಳಿದ ಒಂದು ಸ್ಥಾನವನ್ನು ಜೆಡಿಎಸ್‌ ಪಡೆಯಬೇಕು ಎಂದರೆ ಕಾಂಗ್ರೆಸ್‌ ಅಥವಾ ಬಿಜೆಪಿಯಿಂದ ಒಂದಷ್ಟುಮತಗಳನ್ನು ಪಡೆದುಕೊಳ್ಳಬೇಕು. (ಹೇಗೆಂದರೆ, ವಿಧಾನಸಭೆಯಲ್ಲಿ ಪ್ರಸ್ತುತ 207 ಸದಸ್ಯರಿದ್ದಾರೆ. ಇದರಲ್ಲಿ ಬಿಜೆಪಿ 105, ಕಾಂಗ್ರೆಸ್‌ 66 ಹಾಗೂ ಜೆಡಿಎಸ್‌ 34 ಇದೆ. ಉಪ ಚುನಾವಣೆ ನಂತರ ಈ ಪಕ್ಷಗಳ ಬಲಾಬಲದಲ್ಲಿ ಕೊಂಚ ಬದಲಾವಣೆಯಾಗಬಹುದು. ಹಾಗಾದರೂ ಕೂಡ ಒಟ್ಟಾರೆ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಲು 46 ಮತ ಬೇಕಾಗುತ್ತದೆ. ಈ ಕಾರಣ ಮೂರು ಪಕ್ಷಗಳು ಗೆಲ್ಲಬಹುದಾದ ಸ್ಥಾನಗಳಲ್ಲಿ ಬದಲಾವಣೆಯಾಗುವುದಿಲ್ಲ.)

ಈ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ನಡುವೆ ಪರಸ್ಪರ ಸಹಕಾರ ವಿನಿಮಯದ ಬಗ್ಗೆ ಪ್ರಾಥಮಿಕ ಹಂತದ ಮಾತುಕತೆ ನಡೆದಿದ್ದು, ಅದರಂತೆ, ದೇವೇಗೌಡರಂತಹ ಹಿರಿಯರು ರಾಜ್ಯಸಭೆಯಲ್ಲಿ ಇರಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್‌ ತನ್ನ ಹೆಚ್ಚುವರಿ ಮತಗಳನ್ನು ಜೆಡಿಎಸ್‌ಗೆ ನೀಡಲು ಬಹುತೇಕ ಒಪ್ಪಿದೆ ಎನ್ನಲಾಗಿದೆ. ಇನ್ನೊಂದು ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಈಗಾಗಲೇ ಅಖೈರುಗೊಂಡಿದೆ ಎಂದು ಮೂಲಗಳು ಹೇಳಿವೆ.