ರಾಜ್ಯಾದ್ಯಂತ 30 ದಿನಗಳ ಕಾಲ ನಡೆಯಲಿರುವ ‘ಜನಶಕ್ತಿ’ ಪ್ರಚಾರಕ್ಕೆ ಮಾ.28 ಅಥವಾ 29 ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬೀದರ್‌ನ ಬಸವ ಕಲ್ಯಾಣದಿಂದ ಚಾಲನೆ ನೀಡಲಿದ್ದಾರೆ.
ಬೆಂಗಳೂರು(ಮಾ.22): ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಅಂತಿಮ ಘಟ್ಟ ತಲುಪುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಚಾರಕ್ಕೆ ರೂಪುರೇಷೆ ಸಿದ್ಧಪಡಿಸಿದ್ದು, ‘ಜನಶಕ್ತಿ’ ಹೆಸರಿನಲ್ಲಿ ತಿಂಗಳಾಂತ್ಯಕ್ಕೆ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ಸಜ್ಜಾಗಿದೆ.
ರಾಜ್ಯಾದ್ಯಂತ 30 ದಿನಗಳ ಕಾಲ ನಡೆಯಲಿರುವ ‘ಜನಶಕ್ತಿ’ ಪ್ರಚಾರಕ್ಕೆ ಮಾ.28 ಅಥವಾ 29 ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬೀದರ್‌ನ ಬಸವ ಕಲ್ಯಾಣದಿಂದ ಚಾಲನೆ ನೀಡಲಿದ್ದಾರೆ.
ಸತೀಶ್ ಪುತ್ರಿ, ಲಕ್ಷ್ಮಿ ಪುತ್ರನಿಗೆ ಕೈ ಟಿಕೆಟ್, ಜಾರಕಿಹೊಳಿ- ಹೆಬ್ಬಾಳ್ಕರ್ ಕುಟುಂಬದ ಎರಡನೇ ತಲೆಮಾರು ರಾಜಕೀಯಕ್ಕೆ!
ಈ ವೇಳೆ ಪ್ರಿಯಾಂಕ ಗಾಂಧಿ, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲಾ ನಾಯಕರನ್ನೂ ಒಗ್ಗೂಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಸವಣ್ಣನ ನಾಡು ಬಸವಕಲ್ಯಾಣದಿಂದ ಆರಂಭಿಸಿ ರಾಷ್ಟ್ರಕವಿ ಕುವೆಂಪು ಅವರ ಶಿವಮೊಗ್ಗದಲ್ಲಿ ಪ್ರಚಾರ ಕಾರ್ಯಕ್ರಮ ಮುಗಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಮೊದಲ ದಿನ ಬಸವಣ್ಣನ ನಾಡಿನಿಂದ ಪ್ರಚಾರ ಆರಂಭಿಸಲಾಗುತ್ತದೆ. ತನ್ಮೂಲಕ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಲಾಭವನ್ನು ಪಡೆಯಲು ತಂತ್ರ ರೂಪಿಸಲಾಗಿದೆ. ಜತೆಗೆ ಕಳೆದ ವಿಧಾನಸಭೆಯಲ್ಲಿ ಕೈ ಹಿಡಿದಿದ್ದ ಲಿಂಗಾಯತ ಮತ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುವುದು ಸಹ ಕಾಂಗ್ರೆಸ್ ಉದ್ದೇಶ ಎನ್ನಲಾಗಿದೆ.
ಸಿಎಂ-ಡಿಸಿಎಂ ಜಂಟಿ, ಪ್ರತ್ಯೇಕ ಪ್ರಚಾರ:
2ನೇ ದಿನ ಕೋಲಾರದ ಕೋಲಾರದ ಕುರುಡುಮಲೆಯಿಂದ ಚುನಾವಣಾ ಪ್ರಚಾರ ಆರಂಭವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತ್ಯೇಕವಾಗಿ ಪ್ರಚಾರ ನಡೆಸಲು ತಯಾರಿ ನಡೆಸಲಾಗಿದೆ. ಅಗತ್ಯವಿರುವ ಕಡೆ ಒಗ್ಗಟ್ಟಾಗಿ ಪ್ರಚಾರ ನಡೆಸಲಿದದು, ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪ್ರಮುಖ ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ.
ಈ ವೇಳೆ ರಾಜ್ಯ ಸರ್ಕಾರ ಸಾಧನೆಗಳು, ಕೇಂದ್ರ ಸರ್ಕಾರ ವೈಫಲ್ಯಗಳು ಪ್ರಚಾರ ಮಾಡುವ ಮೂಲಕ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಡಲು ಕಾಂಗ್ರೆಸ್ ರೂಪುರೇಷೆ ಸಿದ್ಧಪಡಿಸುತ್ತಿದೆ ಎಂದು ತಿಳಿದುಬಂದಿದೆ.
