Asianet Suvarna News Asianet Suvarna News

ಸತೀಶ್ ಪುತ್ರಿ, ಲಕ್ಷ್ಮಿ ಪುತ್ರನಿಗೆ ಕೈ ಟಿಕೆಟ್, ಜಾರಕಿಹೊಳಿ- ಹೆಬ್ಬಾಳ್ಕರ್ ಕುಟುಂಬದ ಎರಡನೇ ತಲೆಮಾರು ರಾಜಕೀಯಕ್ಕೆ!

ಕಾಂಗ್ರೆಸ್ ಪಕ್ಷಕ್ಕೆ ಭಾರೀ ಪ್ರತಿಷ್ಠೆಯಾಗಿರುವ ಬೆಳಗಾವಿ ಎರಡು ಲೋಕಸಭಾ ಕ್ಷೇತ್ರಗಳಿಗೆ ಕೊನೆಗೂ ಟಿಕೆಟ್ ಹಂಚಿಕೆಯಾಗಿದ್ದು, ಎರಡು ತಿಂಗಳಿಂದ ಈ ಸಂಬಂಧ ಸುದೀರ್ಘ ವರದಿ ಮಾಡಿದ್ದ ಸುವರ್ಣ ನ್ಯೂಸ್‌ ವರದಿ ಇದೀಗ ನಿಜವಾಗಿದೆ.

Belagavi Lok Sabha Constituency Mrinal Hebbalkar, Priyank Jarakiholi contest by congress rav
Author
First Published Mar 21, 2024, 10:51 PM IST

ಅನಿಲ್ ಕಾಜಗಾರ, ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಳಗಾವಿ (ಮಾ.21): ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಘೋಷಣೆ ಆಗಿದ್ದು, ನಿರೀಕ್ಷೆಯಂತೆ ಸಿದ್ದರಾಮಯ್ಯ ಸಂಪುಟದಲ್ಲಿರುವ ಪ್ರಭಾವಿ ಇಬ್ಬರೂ ಸಚಿವರ ಮಕ್ಕಳಿಗೆ ಹೈಕಮಾಂಡ್ ಮಣೆ ಹಾಕಿದೆ.

ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಹಾಗೂ ಚಿಕ್ಕೋಡಿ ಲೋಕಸಭೆ ಕ್ಷೇತ್ರಕ್ಕೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಂಕಾಗೆ ಟಿಕೆಟ್ ನೀಡಲಾಗಿದೆ. ಮೂರು ತಿಂಗಳ ಹಿಂದೆಯೇ ಸಚಿವರ ಬದಲಿಗೆ ಮಕ್ಕಳಿಗೆ ಟಿಕೆಟ್ ಎಂಬ ಶೀರ್ಷಿಕೆಯಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಕಟಿಸಿದ ವರದಿ ನಿಜಜವಾಗಿದ್ದು, ಉಭಯ ಸಚಿವರ ಮಕ್ಕಳಿಗೆ ಹೈಕಮಾಂಡ್ ಮಣೆ ಹಾಕಿದೆ.

ಸುರಪುರ ಉಪಚುನಾವಣೆಗೆ ಅಭ್ಯರ್ಥಿ ಪ್ರಕಟಿಸಿದ ಕಾಂಗ್ರೆಸ್‌

ರಾಷ್ಟ್ರ ರಾಜಕಾರಣಕ್ಕೆ ಜಾರಕಿಹೊಳಿ ಕುಟುಂಬ!
ರಾಜ್ಯ ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬ ತನ್ನದೇ ಪ್ರಭಾವ ಹೊಂದಿದೆ. ರಾಜ್ಯದಲ್ಲಿ ಯಾವುದೇ ಸರ್ಕಾರ ಇರಲಿ ಜಾರಕಿಹೊಳಿ ಕುಟುಂಬದ ಓರ್ವ ಸದಸ್ಯ ಸಚಿವರಾಗುತ್ತಾರೆ. ಅಷ್ಟರ ಮಟ್ಟಿಗೆ ರಾಜ್ಯ ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬ ಹಿಡಿತ ಸಾಧಿಸಿದೆ. ಈಗಾಗಲೇ ಜಾರಕಿಹೊಳಿ ಕುಟುಂಬದ ನಾಲ್ವರು ಸಹೋದರರು ಸಕ್ರಿಯ ರಾಜಕಾರಣದಲ್ಲಿದ್ದಾರೆ. ಜಾರಕಿಹೊಳಿ ಕುಟುಂಬದ ಹಿರಿಯ ಸದಸ್ಯ ರಮೇಶ ಜಾರಕಿಹೊಳಿ ಗೋಕಾಕ ಶಾಸಕರಾಗಿದ್ದರೆ, ಸತೀಶ ಜಾರಕಿಹೊಳಿ ಹಾಲಿ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಅರಭಾವಿ ಶಾಸಕರಾಗಿದ್ದು, ಲಖನ್ ಜಾರಕಿಹೊಳಿ ಪರಿಷತ್ ಸದಸ್ಯರಾಗಿದ್ದಾರೆ. ಇನ್ನುಳಿದಂತೆ ಭೀಮಶಿ ಜಾರಕಿಹೊಳಿ ಸಕ್ರಿಯ ರಾಜಕಾರಣದಲ್ಲಿ ಇರದಿದ್ದರೂ, ಸಹೋದರರ ಬೆನ್ನಿಗಿದ್ದಾರೆ. ಈ ಎಲ್ಲರೂ ರಾಜ್ಯರಾಜಕಾರಣದಲ್ಲಿದ್ದು, ರಾಷ್ಟ್ರ ರಾಜಕಾರಣದಲ್ಲಿ ಯಾರೂ ಇಲ್ಲ. ಇದೀಗ ಜಾರಕಿಹೊಳಿ ಕುಟುಂಬದ ಎರಡನೇ ತಲೆಮಾರು ರಾಜಕೀಯ ಪ್ರವೇಶ ಆಗಿದ್ದು, ಸಚಿವ ಸತೀಶ ಪುತ್ರಿ ಪ್ರಿಯಂಕಾ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಕೈ ಅಭ್ಯರ್ಥಿ ಆಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪ್ರಿಯಂಕಾ ಜಾರಕಿಹೊಳಿ ಎಂಬಿಎ ಪದವೀಧರೆಯೂ ಹೌದು!

ಹೆಬ್ಬಾಳ್ಕರ್ ಪುತ್ರನಿಗೂ ಮಣೆ!
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಸಚಿವರು ಸ್ಪರ್ಧೆ ಮಾಡುತ್ತಾರೆ ಎಂಬ ಚರ್ಚೆಗಳು ನಡೆದಿದ್ದವು. ಆಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸಚಿವ ಸತೀಶ ಜಾರಕಿಹೊಳಿಗೂ ಸ್ಪರ್ಧೆ ಮಾಡಬೇಕು ಎಂದು ಹೈಕಮಾಂಡ್ ಸೂಚನೆ ನೀಡಿತ್ತು. ಆಗ ಸ್ಪರ್ಧೆಗೆ ನಿರಾಸಕ್ತಿ ವಹಿಸಿದ್ದ ಸಚಿವರು ಮಕ್ಕಳಿಗೆ ಟಿಕೆಟ್ ಕೇಳಿದ್ದರು. ಗೆಲ್ಲಿಸಿಕೊಂಡು ಬರಬೇಕು ಎಂಬ ಮಾನದಂಡ ಆಧಾರದ ಮೇಲೆ ಇದೀಗ ಇಬ್ಬರೂ ಸಚಿವರ ಮಕ್ಕಳಿಗೆ ಹೈಕಮಾಂಡ್ ಟಿಕೆಟ್ ನೀಡಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್‍ಗೆ ಬೆಳಗಾವಿ ಕ್ಷೇತ್ರದ ಟಿಕೆಟ್ ನೀಡಲಾಗಿದ್ದು, ಹೆಬ್ಬಾಳ್ಕರ್ ಕುಟುಂಬದ ಎರಡನೇ ತಲೆಮಾರು ಕೂಡ ರಾಜಕೀಯಕ್ಕೆ ಎಂಟ್ರಿ ಕೊಟ್ಟಂತಾಗಿದೆ. ಇಂಜಿನಿಯರ್ ಪದವೀಧರನಾಗಿರುವ ಮೃಣಾಲ್ ಕಳೆದ ಐದು ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಯುವ ಕಾಂಗ್ರೆಸ್ ಬೆಳಗಾವಿ ಘಟಕದ ಉಪಾಧ್ಯಕ್ಷರಾಗಿ ಎರಡು ಅವಧಿಗೆ ಕಾರ್ಯನಿರ್ವಹಿಸಿರುವ ಮೃಣಾಲ್ ತಮ್ಮ ತಾಯಿ ಪ್ರತಿನಿಧಿಸುವ ಗ್ರಾಮೀಣ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯವಾಗಿದ್ದರು.\

ಧಾರವಾಡ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯ ರಜತ್ ಉಳ್ಳಾಗಡ್ಡಿಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ

ಲಿಂಗಾಯತ- ಅಹಿಂದಾ ಅಸ್ತ್ರ!
ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 20 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಹೈಕಮಾಂಡ್ ಹಾಕಿಕೊಂಡಿದೆ. ಹೈಕಮಾಂಡ್‍ನ ಗೆಲ್ಲಬಹುದಾದ ಕ್ಷೇತ್ರಗಳಲ್ಲಿ ಬೆಳಗಾವಿ ಹಾಗೂ ಚಿಕ್ಕೋಡಿಯೂ ಇದೆ. ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಲಿಂಗಾಯತ ಮತದಾರರೇ ನಿರ್ಣಾಯಕವಾಗಿರುವ ಕಾರಣಕ್ಕೆ ಮೃಣಾಲ್ ಹೆಬ್ಬಾಳ್ಕರ್‍ಗೆ ಅವಕಾಶ ನೀಡಲಾಗಿದೆ. ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಅಹಿಂದಾ ಮತದಾರರೇ ನಿರ್ಣಾಯಕವಾಗಿರುವ ಕಾರಣಕ್ಕೆ ಪ್ರಿಯಂಕಾ ಜಾರಕಿಹೊಳಿ ಮಣೆ ಹಾಕಲಾಗಿದೆ. ಸಿದ್ದರಾಮಯ್ಯ ನಂತರ ಸತೀಶ ಅಹಿಂದಾ ನಾಯಕರಾಗಿ ಹೊರಹೊಮ್ಮುತ್ತಿದ್ದರೆ, ಇತ್ತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಲಿಂಗಾಯತ ನಾಯಕಿ ಆಗಿಯೇ ಗುರುತಿಸಿಕೊಳ್ಳುತ್ತಿದ್ದಾರೆ. ಅಹಿಂದ-ಲಿಂಗಾಯತ ಕಾಂಬಿನೇಷನ್‍ನಡಿ ಚುನಾವಣೆ ಗೆಲ್ಲಲು ಕಾಂಗ್ರೆಸ್ ಯೋಜನೆ ಹಾಕಿಕೊಂಡಿದ್ದು, ಮೋದಿ ಅಲೆಯಲ್ಲಿ ಕಾಂಗ್ರೆಸ್ ತಂತ್ರ ಫಲಿಸುವುದೇ ಎಂಬುದೇ ಸದ್ಯದ ಕುತೂಹಲ.

Follow Us:
Download App:
  • android
  • ios