ವಿವಾದಿತ ಅಂಶ ಸೇರಿಸಿದ್ದು ಒಬ್ಬ ಹೈಕಮಾಂಡ್ ನಾಯಕ, ಈ ನಾಯಕನ ಬಗ್ಗೆ ರಾಜ್ಯ ಕಾಂಗ್ರೆಸ್ಸಿಗರು ವ್ಯಗ್ರ, ಸಮಸ್ಯೆ ಆದ್ರೆ ನೀವೇ ಹೊಣೆ: ನಾಯಕಗೆ ಡಿ.ಕೆ.ಶಿವಕುಮಾರ್ ಎಚ್ಚರಿಕೆ.
ಬೆಂಗಳೂರು(ಮೇ.05): ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧದಂತಹ ವಿವಾದಾತ್ಮಕ ವಿಚಾರವನ್ನು ಸೇರಿಸುವುದಕ್ಕೆ ಒತ್ತಾಯ ಮಾಡಿದ ಹೈಕಮಾಂಡ್ ನಾಯಕರೊಬ್ಬರ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರು ತೀವ್ರ ಅಸಮಾಧಾನಗೊಂಡಿದ್ದು, ಅನಗತ್ಯವಾಗಿ ಈ ವಿಚಾರವನ್ನು ಪ್ರಣಾಳಿಕೆಯಲ್ಲಿ ಸೇರಿಸುವಂತೆ ಮಾಡಿದ ಈ ನಾಯಕರ ಧೋರಣೆಗೆ ನೇರಾನೇರ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ವಾಸ್ತವವಾಗಿ ಪ್ರಣಾಳಿಕೆಯಲ್ಲಿ ಯಾವುದೇ ಸಂಘಟನೆಯ ನಿಷೇಧದ ಪ್ರಸ್ತಾಪ ಮಾಡಲಾಗಿರಲಿಲ್ಲ. ಆದರೆ, ಹೈಕಮಾಂಡ್‌ನ ನಾಯಕರೊಬ್ಬರು ಬಜರಂಗದಳದ ಹೆಸರನ್ನು ಸೇರಿಸುವಂತೆ ಒತ್ತಾಯ ಮಾಡಿದ್ದರು. ಈ ಒತ್ತಾಯಕ್ಕೆ ಮಣಿದು ಹೆಸರು ಸೇರಿಸಲಾಗಿತ್ತು. ಈ ವಿಚಾರ ವಿವಾದವಾದ ನಂತರ ‘ಬೇಡ’ ಎಂದರೂ ಈ ವಿಷಯ ಪ್ರಸ್ತಾಪಿಸುವಂತೆ ಮಾಡಿ ಕಾಂಗ್ರೆಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಬಗ್ಗೆ ರಾಜ್ಯ ನಾಯಕರಿಗೆ ಬೇಸರ ಉಂಟಾಗಿದೆ.
ಕಾಂಗ್ರೆಸ್‌ಗೆ ಕಂಟಕವಾಗುತ್ತಾ ಆ 4 ತಪ್ಪುಗಳು ?: ಕೈ ಎಡವಟ್ಟು, ಬಿಜೆಪಿಗೆ ಭಜರಂಗಿ ಅಸ್ತ್ರ !
ಮೂಲಗಳ ಪ್ರಕಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ಹೆಸರು ಸೇರುವಂತೆ ಒತ್ತಡ ಹಾಕಿದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದು, ‘ಇದರಿಂದ ಪಕ್ಷಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾದರೂ ಅದರ ಹೊಣೆ ನೀವೇ ಹೊರಬೇಕು’ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
