Asianet Suvarna News Asianet Suvarna News

ಲೋಕಸಭಾ ಚುನಾವಣೆ 2024: ಭದ್ರಕೋಟೆ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಮಣಿಸಲು ಕಾಂಗ್ರೆಸ್‌ ಕಸರತ್ತು..!

33 ವರ್ಷಗಳಿಂದ ಬಿಜೆಪಿ ವಶದಲ್ಲಿರುವ ದಕ್ಷಿಣ ಕನ್ನಡ ಕ್ಷೇತ್ರವನ್ನು ಮರು ವಶಕ್ಕೆ ಕೈ ಪಡೆ ಇನ್ನಿಲ್ಲದ ಹರಸಾಹಸ ನಡೆಸುತ್ತಿದೆ. ತನ್ನದೇ ಪ್ರಾಬಲ್ಯದಲ್ಲಿ ಉಳಿಸಿಕೊಳ್ಳಲು ಬಿಜೆಪಿ ಕೂಡ ಕಸರತ್ತಿಗೆ ಇಳಿದಿದೆ.

Congress is Trying to Defeat BJP in Dakshina Kannada of Lok Sabha Election 2024 grg
Author
First Published Apr 13, 2024, 12:40 PM IST

ಆತ್ಮಭೂಷಣ್‌

ಮಂಗಳೂರು(ಏ.13):  ದ.ಕ.ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ನಡೆಯಲಿದೆ. ಅದರಲ್ಲೂ 33 ವರ್ಷಗಳಿಂದ ಬಿಜೆಪಿ ವಶದಲ್ಲಿರುವ ಕ್ಷೇತ್ರವನ್ನು ಮರು ವಶಕ್ಕೆ ಕೈ ಪಡೆ ಇನ್ನಿಲ್ಲದ ಹರಸಾಹಸ ನಡೆಸುತ್ತಿದೆ. ತನ್ನದೇ ಪ್ರಾಬಲ್ಯದಲ್ಲಿ ಉಳಿಸಿಕೊಳ್ಳಲು ಬಿಜೆಪಿ ಕೂಡ ಕಸರತ್ತಿಗೆ ಇಳಿದಿದೆ.

ಬಿಜೆಪಿ ಹಿಂದುತ್ವವನ್ನು ನೆಚ್ಚಿಕೊಂಡಿದ್ದು, ಕಾಂಗ್ರೆಸ್‌ ಎಲ್ಲ ಸಮುದಾಯದ ಒಲವು ಗಳಿಸಲು ಹೊರಟಿದೆ. ಇವೆಲ್ಲದರ ನಡುವೆ ಜಾತಿ ಲೆಕ್ಕಾಚಾರವೂ ಪಕ್ಷಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಜಿಲ್ಲೆಯಲ್ಲಿ 4.50 ಲಕ್ಷದಷ್ಟಿರುವ ಬಿಲ್ಲವರು ಅಗ್ರ ಸ್ಥಾನದಲ್ಲಿದ್ದು, ಬಳಿಕ 4 ಲಕ್ಷದಷ್ಟಿರುವ ಮುಸ್ಲಿಮರು, ಎಸ್‌ಸಿ ಎಸ್‌ಟಿ 2 ಲಕ್ಷ, ಒಕ್ಕಲಿಗರು 1.60 ಲಕ್ಷ, ಬಂಟರು 1.50 ಲಕ್ಷ, ಕ್ರಿಶ್ಚಿಯನ್‌ 1.50 ಲಕ್ಷ, ಬ್ರಾಹ್ಮಣರು 66,786, ಜೈನರು 8,500, ಮೊಗವೀರರು 26,500, ಕುಲಾಲರು 24,500, ಗಾಣಿಗರ 20,600 ಮತಗಳಿವೆ ಎಂಬುದು ಅಂದಾಜು. ಇಲ್ಲಿ ಬಿಲ್ಲವರ ಮತ ಗೆಲವಿಗೆ ನಿರ್ಣಾಯಕ.

ನಾಳೆ ಮೋದಿ ರೋಡ್ ಶೋ; ಮಂಗಳೂರು ನಗರದಾದ್ಯಂತ ರಸ್ತೆ ಸಂಚಾರ, ಪಾರ್ಕಿಂಗ್ ವ್ಯವಸ್ಥೆ ಬದಲಾವಣೆ!

ಬಿಜೆಪಿಗೆ ಸವಾಲು ಏನು?:

ಬಿಜೆಪಿ ಪಾಲಿಗೆ ಕರಾವಳಿ ಜಿಲ್ಲೆ ಭದ್ರಕೋಟೆ ಎಂದೇ ಪ್ರತೀತಿ. ಹಾಗಾಗಿ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಅಲೆ ಇಲ್ಲಿ ಕೂಡ ನೆರವಿಗೆ ಬರಬಹುದು ಎಂಬುದು ಬಿಜೆಪಿಗರ ಲೆಕ್ಕಾಚಾರ. ಹಾಗಾಗಿ ತುಸು ನಿರಾಳತೆಯಿಂದ ಪ್ರಚಾರದಲ್ಲಿ ನಿರತವಾಗಿದೆ. ಆದರೆ ಬಿಜೆಪಿಯ ಅತೃಪ್ತರ, ವಿರೋಧಿಗಳ ಮತಗಳು ವ್ಯತ್ಯಾಸಗೊಳ್ಳುವ ಭೀತಿ ಪಕ್ಷ ಮುಖಂಡರಲ್ಲಿ ಇದೆ. ಮೂರು ಬಾರಿ ಸ್ಪರ್ಧಿಸಿ ನಾಲ್ಕನೇ ಬಾರಿ ನಳಿನ್‌ ಕುಮಾರ್‌ ಕಟೀಲ್‌ಗೆ ಟಿಕೆಟ್‌ ನಿರಾಕಣೆಯಾಗಿರುವುದು ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಹಿಂದು ಮುಖಂಡ ಸತ್ಯಜಿತ್‌ ಸುರತ್ಕಲ್‌ ಈಗ ತನ್ನದೇ ಬಿಲ್ಲವ ಜಾತಿಯ ಟ್ರಂಪ್‌ ಕಾರ್ಡ್‌ ಬಿಟ್ಟಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಲ್ಲವ ಸಮುದಾಯದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಬಹಿರಂಗ ಕರೆ ನೀಡಿದ್ದಾರೆ. ಇಲ್ಲಿ ಬಿಲ್ಲವ ಸಮುದಾಯದ ಯುವಕರು ಇದುವರೆಗೆ ಬಿಜೆಪಿಯನ್ನು ಬೆಂಬಲಿಸಿದ್ದು, ಜಾತಿಯ ಬೆಂಬಲದತ್ತ ವಾಲುತ್ತಾರಾ ಎಂದು ಕಾದುನೋಡಬೇಕಿದೆ.

ರಾಜ್ಯ ಸರ್ಕಾರದ ದುರಾಡಳಿತ, ಕೇಂದ್ರ ಸರ್ಕಾರದ ಆಡಳಿತ ಮಂತ್ರವನ್ನು ಬಿಜೆಪಿ ಮತದಾರರ ಬಳಿ ಪಠಿಸುತ್ತಿದೆ. ಏ.14ರಂದು ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿ ಮತ ಬಾಚುವ ತಂತ್ರಗಾರಿಕೆ ನಡೆಸಿದೆ.

ಕಾಂಗ್ರೆಸ್ ತಂತ್ರಗಾರಿಕೆ:

ಬಿಜೆಪಿಯ ಭದ್ರಕೋಟೆಯನ್ನು ಹೇಗಾದರೂ ಮಾಡಿ ಕೆಡವಲು ಕಾಂಗ್ರೆಸ್‌ ಹವಣಿಸುತ್ತಿದೆ. ಜಿಲ್ಲೆಯಲ್ಲಿ ಪಾರಮ್ಯ ಹೊಂದಿರುವ ಬಿಲ್ಲವರ ಮತ ಸೆಳೆಯುವ ಭಾರಿ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಬಿಲ್ಲವ ಸಮಿತಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಪದ್ಮರಾಜ್‌, ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಅವರನ್ನು ಮುಂದಿಟ್ಟುಕೊಂಡು ಪ್ರಚಾರ ಕಾರ್ಯದಲ್ಲಿ ನಡೆಸುತ್ತಿದ್ದಾರೆ.

ಕಾಂಗ್ರೆಸ್‌ಗೆ ಈ ಬಾರಿ ಮುಸ್ಲಿಂ ಮತಗಳು ಪೂರ್ಣ ಪ್ರಮಾಣದಲ್ಲಿ ಸಿಗುತ್ತವೆ ಎಂಬ ವಿಶ್ವಾಸದಲ್ಲಿ ಪಕ್ಷ ನಾಯಕರಿದ್ದಾರೆ. ಎಸ್‌ಡಿಪಿಐ ಸ್ಪರ್ಧಿಸದೇ ಇರುವುದರಿಂದ ಮುಸ್ಲಿಂ ಮತಗಳು ವಿಭಜನೆಯಾಗುವ ಭೀತಿ ಇಲ್ಲ. ಹಾಗಾಗಿ ಮತಗಳ ಕ್ರೋಢೀಕರಣದಿಂದ ಗೆಲುವಿನ ದಡ ತಲುಪಲು ಸಾಧ್ಯ ಎಂಬುದು ಕಾಂಗ್ರೆಸ್‌ನ ಲೆಕ್ಕಾಚಾರ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮತದಾರರಿಗೆ ಮನವರಿಕೆ ಮಾಡುವ ಪ್ರಯತ್ನ ನಡೆಯುತ್ತಿದೆ. ಮತದಾರರೇ ಸ್ಟಾರ್‌ ಪ್ರಚಾರಕರು ಎಂಬ ಸ್ಲೋಗನ್‌ ಇರಿಸಿಕೊಂಡು ಕಾಂಗ್ರೆಸ್‌ ಅಭ್ಯರ್ಥಿ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಅಲ್ಲಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ವಿವಾದಾತ್ಮಕ ಹೇಳಿಕೆಗಳು ಬಿಜೆಪಿ ಪಾಳಯದಲ್ಲಿ ಟ್ರೋಲ್‌ ಆಗಿ ಬಳಕೆಯಾಗುತ್ತಿದೆ.

ನೋಟಾ ಅಭಿಯಾನ ಏಟು?:

ಬೆಳ್ತಂಗಡಿ ಕಾಲೇಜು ವಿದ್ಯಾರ್ಥಿನಿ ದಿ.ಸೌಜನ್ಯ ಕೊಲೆ ಪ್ರಕರಣ ಮುಂದಿಟ್ಟುಕೊಂಡು ನ್ಯಾಯಕ್ಕಾಗಿ ಆಗ್ರಹಿಸಿ ಈ ಬಾರಿ ನೋಟಾ ಚಲಾಯಿಸುವಂತೆ ಸೌಜನ್ಯ ಪರ ಹೋರಾಟ ಸಮಿತಿ ಜಿಲ್ಲೆಯಾದ್ಯಂತ ಅಭಿಯಾನ ಕೈಗೆತ್ತಿಕೊಂಡಿದೆ. ಸುಳ್ಯದಲ್ಲಿ ಸಮಾವೇಶವನ್ನೂ ಆಯೋಜಿಸಿದೆ. ಇದು ಎರಡು ಪಕ್ಷಗಳಿಗೆ ಯಾವ ರೀತಿಯ ಹೊಡೆತ ನೀಡುತ್ತದೆ ಎಂಬುದನ್ನು ಈಗಲೇ ಹೇಳುವಂತಿಲ್ಲ.

ಇಬ್ಬರೂ ಹೊಸಬರು

ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಇಬ್ಬರು ಅಭ್ಯರ್ಥಿಗಳೂ ಹೊಸಬರು. ಬಿಜೆಪಿಯ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರು ಮಾಜಿ ಯೋಧನಾದರೆ, ಕಾಂಗ್ರೆಸ್‌ನ ಪದ್ಮರಾಜ್‌ ನ್ಯಾಯವಾದಿಯಾಗಿದ್ದಾರೆ. ಇವರಿಬ್ಬರು ಕೂಡ ಅವರದೇ ಪಕ್ಷದಲ್ಲಿ ಸಕ್ರಿಯರಾದ್ದು ಇತ್ತೀಚೆಗೆ ಎಂಬುದು ಗಮನಾರ್ಹ. ಬ್ರಿಜೇಶ್‌ ಚೌಟ ಅವರು ಕಂಬಳ ಸಂಘಟಕರಾಗಿದ್ದು, ಲಿಟ್‌ ಫೆಸ್ಟ್‌ನಂತಹ ಸಾಹಿತ್ಯ ಜಾತ್ರೆಯ ಆಯೋಜಕ. ಪದ್ಮರಾಜ್‌ ಅವರು ಹಿಂದುಳಿದ ವರ್ಗದ ಯುವ ನಾಯಕನಾಗಿದ್ದು, ಧಾರ್ಮಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ. ಹಾಗಾಗಿ ಈ ಚುನಾವಣೆ ದ.ಕ. ಪಾಲಿಗೆ ಅತ್ಯಂತ ರೋಚಕ ಸವಾಲಿನದ್ದಾಗಿದೆ.

ಕ್ಷೇತ್ರ ಪರಿಚಯ

1951ರಲ್ಲಿ ಸೌತ್‌ ಕೆನರಾ ಆಗಿದ್ದ ಈ ಕ್ಷೇತ್ರ 1957ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರವಾಗಿ ಕರೆಸಿಕೊಂಡಿತು. 1951ರಿಂದ 1991ರ ವರೆಗೆ 40 ವರ್ಷಗಳ ಕಾಲ ಕಾಂಗ್ರೆಸ್‌ ಅಧಿಪತ್ಯ ಇತ್ತು. 1991ರಿಂದ 2024ರ ವರೆಗೆ 33 ವರ್ಷಕಾಲ ಬಿಜೆಪಿ ಪಾರಮ್ಯದಲ್ಲಿದೆ. ಕಾಂಗ್ರೆಸ್‌ನ ಜನಾರ್ದನ ಪೂಜಾರಿ ನಾಲ್ಕು ಬಾರಿ ಗೆದ್ದು ಕೇಂದ್ರ ಸಚಿವರೂ ಆಗಿದ್ದರು. ಬಿಜೆಪಿಯ ಧನಂಜಯ ಕುಮಾರ್‌ ಕೂಡ ನಾಲ್ಕು ಬಾರಿ ಸಂಸದರಾಗಿ, ಕೇಂದ್ರ ಸಚಿವರೂ ಆದರು. ನಳಿನ್‌ ಕುಮಾರ್ ಕಟೀಲ್‌ ಮೂರು ಅವಧಿಯಲ್ಲಿ 15 ವರ್ಷಕಾಲ ದೀರ್ಘ ಸಂಸದರಾಗಿದ್ದರು. ಭದ್ರಕೋಟೆಯೆಂಬ ಆತ್ಮವಿಶ್ವಾಸದಿಂದಲೇ ಬಿಜೆಪಿ ಪಾಳಯ ಕೆಲಸ ಮಾಡುತ್ತಿದೆ.

2019ರ ಲೋಕಸಭಾ ಚುನಾವಣೆ ಫಲಿತಾಂಶ

2019ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 17,24,458 ಮತದಾರರಲ್ಲಿ 13,43,439 ಮಂದಿ ಮತ ಚಲಾಯಿಸಿದ್ದರು. ಬಿಜೆಪಿಯ ನಳಿನ್‌ ಕುಮಾರ್‌ ಕಟೀಲ್‌ 7,74,285 ಮತ ಪಡೆದರೆ, ಕಾಂಗ್ರೆಸ್‌ನ ಮಿಥುನ್‌ ರೈ 4,49,664 ಮತ ಗಳಿಸಿದ್ದರು. ಇಲ್ಲಿ ನಳಿನ್‌ ಕುಮಾರ್‌ ಅವರ ಗೆಲುವಿನ ಅಂತರ ಗರಿಷ್ಠ 2,74,621 ಆಗಿತ್ತು.

ಟಿಕೆಟ್ ಮಿಸ್ ಆಗಿದ್ದಕ್ಕೆ ಅನಂತಕುಮಾರ್ ಹೆಗ್ಡೆ ಅಸಮಾಧಾನ: ದೇಶದ ಮುಂದೆ ಇವು ದೊಡ್ಡ ಸಮಸ್ಯೆ ಅಲ್ಲ: ವಿ ಸುನೀಲ್ ಕುಮಾರ್

ಈ ಬಾರಿ 18 ಲಕ್ಷ ಮತದಾರರು

ಈ ಬಾರಿ ಒಟ್ಟು 18,17,526 ಮಂದಿ ಮತದಾರರಿದ್ದಾರೆ. ಇವರಲ್ಲಿ 8,86,642 ಪುರುಷ ಹಾಗೂ 9,30,884 ಮಹಿಳಾ ಮತದಾರರಿದ್ದಾರೆ.

ಅಂತಿಮ ಕಣದಲ್ಲಿ 9 ಮಂದಿ

ಈ ಬಾರಿ ಅಂತಿಮ ಕಣದಲ್ಲಿ 9 ಮಂದಿ ಇದ್ದಾರೆ.

ಕಾಂತಪ್ಪ ಆಲಂಗಾರ್‌-ಬಿಎಸ್ಪಿ, ಪದ್ಮರಾಜ್‌ ಆರ್‌.ಪೂಜಾರಿ-ಕಾಂಗ್ರೆಸ್‌, ಕ್ಯಾಪ್ಟನ್‌ ಬ್ರಿಜೇಶ್‌ ಚೌಟ-ಬಿಜೆಪಿ, ದುರ್ಗಾ ಪ್ರಸಾದ್‌-ಕರುನಾಡ ಸೇವಕ ಪಕ್ಷ, ಪ್ರಜಾಕೀಯ ಮನೋಹರ-ಉತ್ತಮ ಪ್ರಜಾಕೀಯ ಪಾರ್ಟಿ, ರಂಜನಿ ಎಂ-ಕರ್ನಾಟಕ ರಾಷ್ಟ್ರ ಸಮಿತಿ, ದೀಪಕ್‌ ರಾಜೇಶ್‌ ಕುವೆಲ್ಲೋ, ಮೆಕ್ಸಿಂ ಪಿಂಟೋ, ಸುಪ್ರೀತ್‌ ಕುಮಾರ್‌ ಪೂಜಾರಿ(ಪಕ್ಷೇತರ) ಕಣದಲ್ಲಿದ್ದಾರೆ.

Follow Us:
Download App:
  • android
  • ios