ಬಡವರಿಗೆ ಸಾಮಾಜಿಕ ನ್ಯಾಯ ನೀಡಿದ ಪಕ್ಷ ಕಾಂಗ್ರೆಸ್: ಮಾಜಿ ಸಚಿವ ರಮಾನಾಥ ರೈ
ಬಡವರಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಟ್ಟ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ. ಕಾಂಗ್ರೆಸ್ ಜಾರಿಗೆ ತಂದ ಉಳುವವನೇ ಹೊಲದೊಡೆಯ ಎಂಬ ಕಾಯಿದೆಯಿಂದ ಭೂಮಿ ಕಳೆದುಕೊಂಡಿದ್ದರೂ ಸಮಾಜದ ಬಹುಮಂದಿಗೆ ಅದು ಪ್ರಯೋಜನವಾಗಿದ್ದರಿಂದ ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಉಳಿದು ಬೆಳೆದಿದ್ದೇನೆ ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಉಪ್ಪಿನಂಗಡಿ (ಸೆ.28): ಬಡವರಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಟ್ಟ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ. ಕಾಂಗ್ರೆಸ್ ಜಾರಿಗೆ ತಂದ ಉಳುವವನೇ ಹೊಲದೊಡೆಯ ಎಂಬ ಕಾಯಿದೆಯಿಂದ ಭೂಮಿ ಕಳೆದುಕೊಂಡಿದ್ದರೂ ಸಮಾಜದ ಬಹುಮಂದಿಗೆ ಅದು ಪ್ರಯೋಜನವಾಗಿದ್ದರಿಂದ ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಉಳಿದು ಬೆಳೆದಿದ್ದೇನೆ ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಅಭಿನಂದನಾ ಸಮಿತಿ ಪೆರ್ನೆ- ಬಿಳಿಯೂರು, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಯುವ ಕಾಂಗ್ರೆಸ್ ಸಮಿತಿ ಇದರ ಸಹಯೋಗದಲ್ಲಿ ವಲಯ ಕಾಂಗ್ರೆಸ್ ಪೆರ್ನೆ- ಬಿಳಿಯೂರು ಇದರ ಆಶ್ರಯದೊಂದಿಗೆ ತಮ್ಮ ಹುಟ್ಟುಹಬ್ಬದ ಅಂಗವಾಗಿ ಪೆರ್ನೆಯ ಎ.ಎಂ. ಆಡಿಟೋರಿಯಂನಲ್ಲಿ ಹುಟ್ಟೂರ ಅಭಿನಂದನೆ ಹಾಗೂ ಶಾಸಕ ಅಶೋಕ್ ಕುಮಾರ್ ರೈಯವರಿಗೆ ನಡೆದ ಪೆರ್ನೆ- ಬಿಳಿಯೂರು ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಹುಟ್ಟೂರ ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು. ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ, ಊರಿನ ಅಭಿವೃದ್ಧಿಗೆ ರಮಾನಾಥ ರೈ ಕೊಟ್ಟ ಕೊಡುಗೆ ಅಪಾರ. ಹಾಗಾಗಿ ಅವರು ಮಾಸ್ ಲೀಡರ್ ಎನಿಸಿಕೊಂಡಿದ್ದಾರೆ ಎಂದರು.
ಇಡೀ ರಾಜ್ಯದ ಜವಾಬ್ದಾರಿ ನನ್ನ ಹೆಗಲ ಮೇಲಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿದರು. ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ , ಖ್ಯಾತ ವೈದ್ಯ ಡಾ. ರಘು ಬೆಳ್ಳಿಪ್ಪಾಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಉದ್ಯಮಿ ಸುಲೈಮಾನ್ ಕೆ. ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಪೆರ್ನೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ವಿಜಯ, ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ತೋಯಜಾಕ್ಷ ಶೆಟ್ಟಿ, ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಶಾಫಿ ಉಪಸ್ಥಿತರಿದ್ದರು.
ಪುತ್ತೂರು ಹಾಗೂ ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ. ಅಧ್ಯಕ್ಷ- ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಪೆರ್ನೆ- ಬಿಳಿಯೂರು ಬೂತ್ ಅಧ್ಯಕ್ಷರುಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಕಂಬಳ ತೀರ್ಪುಗಾರ ಎಡ್ತೂರು ರಾಜೀವ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಶಾಸಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು.
ಬಂದ್ ಹೆಸರಲ್ಲಿ ಜನರಿಗೆ ತೊಂದರೆ ಮಾಡಿದರೆ ಕ್ರಮ: ಡಿ.ಕೆ.ಶಿವಕುಮಾರ್
ಗಣ್ಯರ ಜೊತೆ ಕುಳಿತ ವೃದ್ಧ: ಕಾರ್ಯಕ್ರಮ ನಡೆಯುತ್ತಿದ್ದಂತೆಯೇ ಹಿರಿಯ ಕಾರ್ಯಕರ್ತ ವ್ಯಕ್ತಿಯೋರ್ವರು ನೇರವಾಗಿ ವೇದಿಕೆಯನ್ನೇರಿ ಅವರಿವರಲ್ಲಿ ಮಾತನಾಡಲು ಯತ್ನಿಸಿ ಸಂಘಟಕರು ಸಭೆಯಲ್ಲಿ ಕುಳಿತುಕೊಳ್ಳಲು ವಿನಂತಿಸಿದರೂ ಒಪ್ಪದೆ ನೇರವಾಗಿ ಅತಿಥಿಗಳ ಆಸನದಲ್ಲಿ ಕುಳಿತು ಸಂಘಟಕರನ್ನು ಪೇಚಿಗೆ ಸಿಲುಕಿಸಿದ ಘಟನೆ ನಡೆಯಿತು. ವೃದ್ದರ ಮನಸ್ಥಿತಿಯನ್ನು ಅರಿತ ವೇದಿಕೆಯಲ್ಲಿನ ಗಣ್ಯರು ಅವರೊಂದಿಗೇ ಕುಳಿತರು. ಸೇವಾದಳದ ಜೋಕಿಂ ಡಿಸೋಜಾ ವಂದೇ ಮಾತರಂ ಹಾಡಿದರು. ಅಭಿನಂದನಾ ಸಮಿತಿಯ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು ಸ್ವಾಗತಿಸಿದರು. ಸಂಚಾಲಕ ಉಮಾನಾಥ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಅಭಿನಂದನಾ ನುಡಿಗಳನ್ನಾಡಿದರು. ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.