Asianet Suvarna News Asianet Suvarna News

ಕಾಂಗ್ರೆಸ್ ಯಾವುದೇ ಒಂದು ಕೋಮಿನ ಜನರ ಪರವಾಗಿಲ್ಲ: ಸಚಿವ ಚಲುವರಾಯಸ್ವಾಮಿ

ಕಾಂಗ್ರೆಸ್ ಯಾವುದೇ ಒಂದು ಕೋಮಿನ ಜನರ ಪರವಾಗಿಲ್ಲ. ಈ ನಾಡಿನ, ದೇಶದ ಎಲ್ಲ ಜನರ ಪರವಾಗಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು. 

Congress is not in favor of any tribal people Says Minister N Chaluvarayaswamy gvd
Author
First Published Sep 13, 2024, 10:21 PM IST | Last Updated Sep 13, 2024, 10:21 PM IST

ನಾಗಮಂಗಲ (ಸೆ.13): ಕಾಂಗ್ರೆಸ್ ಯಾವುದೇ ಒಂದು ಕೋಮಿನ ಜನರ ಪರವಾಗಿಲ್ಲ. ಈ ನಾಡಿನ, ದೇಶದ ಎಲ್ಲ ಜನರ ಪರವಾಗಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು. ನಾವು ಒಂದು ಸಮುದಾಯದವರನ್ನು ಓಲೈಸಿಕೊಳ್ಳುತ್ತಲೂ ಇಲ್ಲ, ತುಷ್ಣೀಕರಣ ಮಾಡುತ್ತಲೂ ಇಲ್ಲ. ಅದರ ಅಗತ್ಯವೂ ಇಲ್ಲ. ನಮಗೆ ಹಿಂದೂ-ಮುಸ್ಲಿಮರೆಲ್ಲರೂ ಸಮಾನರು. ಕೆಲವರು ಈ ಘಟನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಕ್ಕೆ ಇಂತಹ ಹೇಳಿಕೆ ನೀಡುತ್ತಿದ್ದಾರೆ. ನಾನು ಯಾವ ಕಾರಣಕ್ಕೂ ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.

ನಾಗಮಂಗಲದಲ್ಲಿ ಈ ರೀತಿಯ ಘಟನೆ ನಡೆಯಬಾರದಿತ್ತು. ದುರದೃಷ್ಟವಶಾತ್ ನಡೆದುಹೋಗಿದೆ. ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಎಲ್ಲಾ ರೀತಿಯ ಕ್ರಮಗಳನ್ನು ಜಿಲ್ಲಾಡಳಿತದಿಂದ ಕೈಗೊಳ್ಳಲಾಗುವುದು. ನಾಗಮಂಗಲದಲ್ಲಿ ಈಗ ಪರಿಸ್ಥಿತಿ ಶಾಂತಿಯುತವಾಗಿದೆ. ಸಹಜಸ್ಥಿತಿಯತ್ತ ಮರಳುತ್ತಿದೆ. ಜನರು ಯಾವ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ಸಹಜವಾಗಿ ಓಡಾಡಬಹುದು ಎಂದರು. ಗಣೇಶೋತ್ಸವದ ವೇಳೆ ಉಂಟಾದ ಘರ್ಷಣೆಯಲ್ಲಿ ಪ್ರಾಣಹಾನಿ ಸಂಭವಿಸದಂತೆ, ಎರಡೂ ಕೋಮಿನವರು ಕೈ ಕೈ ಮಿಲಾಯಿಸದಂತೆ ಪೊಲೀಸರು ತಡೆದಿದ್ದಾರೆ. ಆದರೂ ೨೦ ಅಂಗಡಿಗಳಿಗೆ, ೭-೮ ಬೈಕ್‌ಗಳಿಗೆ ಹಾನಿಯಾಗಿದೆ. ಹಾನಿ ಕುರಿತಂತೆ ಪ್ರತ್ಯೇಕವಾಗಿ ಅಂದಾಜು ವೆಚ್ಚ ಮಾಡುವಂತೆ ಸೂಚಿಸಿದ್ದೇನೆ. 

420 ರಾಜಕಾರಣ ಬಿಟ್ಟು ದೇಶದ್ರೋಹಿಗಳನ್ನು ಮಟ್ಟ ಹಾಕಿ: ಬಿ.ವೈ.ವಿಜಯೇಂದ್ರ

ಇದನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸರ್ಕಾರದಿಂದ ಪರಿಹಾರ ದೊರಕಿಸುವ ಜೊತೆಗೆ ವೈಯಕ್ತಿಕವಾಗಿಯೂ ಪರಿಹಾರ ನೀಡುತ್ತೇನೆ ಎಂದು ಭರವಸೆ ನೀಡಿದರು. ಗಲಭೆಗೆ ಕಾರಣವೇನೆಂಬ ಬಗ್ಗೆಯೂ ತನಿಖೆ ನಡೆಸಲಾಗುವುದು. ಘಟನೆಗೆ ಯಾರಾದರೂ ಕಾರಣರಾಗಿರಲಿ ಅವರ ವಿರುದ್ಧ ನಿಷ್ಪಕ್ಷಪಾತವಾಗಿ ಕ್ರಮ ಜರುಗಿಸಲಾಗುವುದು. ಪೊಲೀಸರ ವೈಫಲ್ಯವಿದ್ದರೆ ಅವರ ವಿರುದ್ಧವೂ ಕ್ರಮವಾಗಲಿದೆ ಎಂದರು. ಈ ಸಮಯದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ್ ಬಾಲದಂಡಿ, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ ಇದ್ದರು.

ವಿಶೇಷ ಚೇತನರ ಯೋಗಕ್ಷೇಮಕ್ಕಾಗಿ ಸರ್ಕಾರ ಬದ್ಧ: ಸಮಾಜ ಮತ್ತು ಅಭಿವೃದ್ಧಿ ಪ್ರತಿಯೊಂದು ಹಂತಗಳಲ್ಲಿಯೂ ವಿಶೇಷ ಚೇತನರ ಹಕ್ಕುಗಳು ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿ 18 ಮಂದಿ ವಿಶೇಷ ಚೇತನ ಅರ್ಹ ಫಲಾನುಭವಿಗಳಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 22.38ಲಕ್ಷ ರು. ವೆಚ್ಚದ ಯಂತ್ರಚಾಲಿತ 18 ತ್ರಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿದರು.

ನಾಗಮಂಗಲ ಘಟನೆಯಲ್ಲಿ 10-15 ಜನ ಮೃತಪಡಬೇಕಿತ್ತೇ?: ಸಚಿವ ಪರಮೇಶ್ವರ್‌ಗೆ ಜೋಶಿ ಪ್ರಶ್ನೆ

ಸಮಾಜದ ಎಲ್ಲ ಜನರಂತೆ ವಿಶೇಷ ಚೇತನ ವ್ಯಕ್ತಿಗಳೂ ಸಹ ಸರ್ಕಾರದ ಸವಲತ್ತುಗಳನ್ನು ಪಡೆದು ಶಾಂತಿ, ನೆಮ್ಮದಿಯ ಬದುಕು ನಡೆಸಬೇಕು. ಇದಕ್ಕೆ ಪೂರಕವಾಗಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು. 2023-24ನೇ ಸಾಲಿನಲ್ಲಿ ಆಯ್ಕೆಯಾಗಿರುವ ಕ್ಷೇತ್ರದ 18 ಮಂದಿ ಅರ್ಹ ಫಲಾನುಭವಿಗಳಿಗೆ ತಲಾ 1.24ಲಕ್ಷ ರು.ಗಳ ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಫಲಾನುಭವಿಗಳನ್ನು ಗುರುತಿಸಿ ತ್ರಿಚಕ್ರ ವಾಹನ ಸೇರಿದಂತೆ ಹಲವು ಸವಲತ್ತುಗಳನ್ನು ನೀಡಲಾಗುವುದು ಎಂದು ಹೇಳಿದರು.

Latest Videos
Follow Us:
Download App:
  • android
  • ios