ಕಾಂಗ್ರೆಸ್ ಯಾವತ್ತೂ ಬಡವರ ಪರ: ಸಂಸದ ಡಿ.ಕೆ.ಸುರೇಶ್
ಬಡವರಿಗೆ ಉಚಿತ ನಿವೇಶನ, ಸೂರು ನಿರ್ಮಾಣ, ಐಪಿ ಸೆಟ್‌ಗಳಿಗೆ ಉಚಿತ ವಿದ್ಯುತ್ ಯೋಜನೆ, ಉಳುವವನೇ ಭೂಮಿ ಒಡೆಯ ಎಂಬಂಥ ಕಾನೂನು ಜಾರಿಗೆ ತಂದಿದ್ದೇ ಕಾಂಗ್ರೆಸ್ ಅವಧಿಯಲ್ಲಿ.

ಚನ್ನಪಟ್ಟಣ (ಸೆ.17): ಬಡವರಿಗೆ ಉಚಿತ ನಿವೇಶನ, ಸೂರು ನಿರ್ಮಾಣ, ಐಪಿ ಸೆಟ್‌ಗಳಿಗೆ ಉಚಿತ ವಿದ್ಯುತ್ ಯೋಜನೆ, ಉಳುವವನೇ ಭೂಮಿ ಒಡೆಯ ಎಂಬಂಥ ಕಾನೂನು ಜಾರಿಗೆ ತಂದಿದ್ದೇ ಕಾಂಗ್ರೆಸ್ ಅವಧಿಯಲ್ಲಿ. ಕಾಂಗ್ರೆಸ್ ಯಾವತ್ತೂ ಬಡವರ, ಮಧ್ಯಮವರ್ಗ ಹಾಗೂ ರೈತರ ಪರ ಇರುವ ಪಕ್ಷವಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ದೊಡ್ಡಮಳೂರು, ಮುದುಗೆರೆ, ಮತ್ತೀಕೆರೆ, ಚಕ್ಕೆರೆ ಗ್ರಾಮಗಳಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಜನರ ಕುಂದುಕೊರೆತೆ ಆಲಿಸಿ ಮಾತನಾಡಿದರು.
ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಕೆಲಸವಿಲ್ಲದ ಕಾರಣ ಕಾಂಗ್ರೆಸ್ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದು, ಇದಕ್ಕೆ ಜನ ಕಿವಿಗೊಡಬಾರದು ಎಂದು ಮನವಿ ಮಾಡಿದರು. ಐಪಿ ಸೆಟ್‌ಗಳಿಗೆ ಮೀಟರ್ ಅಳವಡಿಸಲಾಗುತ್ತಿದೆ ಎಂದು ಸುಮ್ಮನೆ ಅಪಪ್ರಚಾರ ಮಾಡಲಾಗುತ್ತಿದೆ. ಇಂಥ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಐಪಿ ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಬೇಕು ಎಂಬ ಯೋಜನೆ ಜಾರಿಗೆ ತಂದದ್ದೇ ಬಂಗಾರಪ್ಪನವರ ಅವಧಿಯಲ್ಲಿ. ಕಾಂಗ್ರೆಸ್ ಯಾವತ್ತು ಜನಪರ ಯೋಜನೆ ಜಾರಿಗೆ ತರುತ್ತದೆಯೇ ಹೊರತು ಜನರಿಗೆ ತೊಂದರೆ ನೀಡುವಂತೆ ಕಾರ್ಯಕ್ರಮಗಳನ್ನು ಜಾರಿಗೆ ತರುವುದಿಲ್ಲ ಎಂದರು.
ಕೆಂಪೇಗೌಡರ ಸಮಾಧಿ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಂಸದ ಸುರೇಶ್ ಭರವಸೆ
ಐದು ಗ್ಯಾರೆಂಟಿ ಜಾರಿ: ಜನರಿಗೆ ಅನುಕೂಲ ಕಲ್ಪಿಸಬೇಕು ಎಂಬ ಉದ್ದೇಶದಿಂದಲೇ ಕಾಂಗ್ರೆಸ್ ಐದು ಗ್ಯಾರೆಂಟಿಗಳನ್ನು ಜಾರಿಗೆ ತಂದಿದೆ. ಹೆಣ್ಣು ಮಕ್ಕಳಿಗೆ ಶಕ್ತಿ ತುಂಬಿದರೆ ಒಂದು ಕುಟುಂಬಕ್ಕೆ ಶಕ್ತಿ ತುಂಬಿದಂತೆ ಎಂಬ ಉದ್ದೇಶದಿಂದ ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಗಳನ್ನು ಜಾರಿಗೆ ತಂದಿದೆ. ಪಂಚ ಯೋಜನೆಗಳಿಗೆ ಸರ್ಕಾರ ವರ್ಷಕ್ಕೆ ೫೬ಸಾವಿರ ಕೋಟಿ ವ್ಯಯಿಸುತ್ತಿದೆ ಎಂದರು.
ಸಮಸ್ಯೆ ಬಗೆಹರಿಸಿ: ಕೆಲವು ತಾಂತ್ರಿಕೆ ಕಾರಣಗಳಿಂದ ಇನ್ನು ಎಷ್ಟೋ ಕಡೆ ಮಹಿಳೆಯರ ಖಾತೆಗೆ ಹಣ ಬಂದಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಿಡಿಒಗಳು ಸಂಬಂಧಿಸಿದಂತೆ ಎಲ್ಲ ಅಧಿಕಾರಿಗಳು ಒಂದು ವಾರ ಕಾಲ ಪ್ರತಿ ಪಂಚಾಯಿತಿ ಮಟ್ಟದಲ್ಲಿ ಅಭಿಯಾನ ನಡೆಸಿ, ಯಾರಿಗೆ ಹಣ ತಲುಪುವಲ್ಲಿ ಉಂಟಾದ ಸಮಸ್ಯೆ ಸರಿಪಡಿಸಲು ಕ್ರಮವಹಿಸಿ. ಅದಕ್ಕೂ ಮೀರಿ ಬಂದ ತಾಂತ್ರಿಕ ಸಮಸ್ಯೆಯನ್ನು ಸರ್ಕಾರದ ಮಟ್ಟದಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಶೀಘ್ರ ಪರಿಹಾರ: ಜನಸಂಪರ್ಕ ಸಭೆಯಲ್ಲಿ ಅಕ್ರಮ ಖಾತೆ ಪರಭಾರೆ, ಸರ್ಕಾರಿ ಹಳ್ಳ, ಜಮೀನು ಒತ್ತುವರಿ, ರಸ್ತೆ ಒತ್ತುವರಿ, ಖಾತೆ ಸಮಸ್ಯೆ, ನಿವೇಶನ, ಅಂಗನವಾಡ ಕಟ್ಟಡ ದುರಸ್ತಿ, ಜೆಎಂಎಂನ ಕಾಮಗಾರಿ ಸರಿಯಾಗಿ ನಡೆಯದ ಬಗ್ಗೆ, ಉದ್ಯೋಗ, ದಾಖಲೆಗಳ ತಿದ್ದುಪಡಿಗೆ ಸಂಬಂಧಿಸಿದಂತೆ ಸಾಕಷ್ಟು ಅರ್ಜಿ ಬರುತ್ತಿವೆ. ಇಲ್ಲಿ ಅರಿವಿಗೆ ಬಂದ ಸಮಸ್ಯೆಗಳನ್ನು ಅಧಿಕಾರಿಗಳಿಗೆ ವರ್ಗಾಹಿಸಿದ್ದು, ಶೀಘ್ರ ಸಮಸ್ಯೆ ಪರಿಹರಿಸಲು ಸೂಚಿಸಲಾಗಿದೆ ಎಂದರು.
ಯೋಗೇಶ್ವರ್ ನಿಮ್ಮ ನಾಲಗೆ ಬಿಗಿ ಇರಲಿ: ಸಂಸದ ಸುರೇಶ್
ಬಹುತೇಕ ಸಮಸ್ಯೆಗಳು ಸ್ಥಳೀಯ ಮಟ್ಟದಲ್ಲೇ ಪರಿಹರಿಸಬಹುದಾಗಿದ್ದು, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಸಮಸ್ಯೆಗಳು ಉಳಿದಿವೆ. ಇನ್ನಾದರೂ ಅಧಿಕಾರಿಗಳು ಜವಬ್ದಾರಿಯಿಂದ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ತಾಕೀತು ಮಾಡಿದರು.ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಮೋದ್, ಸುನೀಲ್, ಮುಖಂಡರಾದ ದುಂತೂರು ವಿಶ್ವನಾಥ್, ಎ.ಸಿ.ವೀರೇಗೌಡ, ತಹಸೀಲ್ದಾರ್ ಮಹೇಂದ್ರ, ಇಒ ಶಿವಕುಮಾರ್, ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.