ಕಾಂಗ್ರೆಸ್ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಸರ್ಕಾರವಾಗಿದೆ: ಸಚಿವೆ ಶೋಭಾ ಕರಂದ್ಲಾಜೆ
ರಾಜ್ಯ ಸರ್ಕಾರ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುವ ಸರ್ಕಾರ ಆಗಿದೆ. ನಿಷೇಧಿತ ಸಂಘಟನೆ ಮುಖಂಡರೆಲ್ಲ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಮನೆಯಲ್ಲೆ ಇರುತ್ತಾರೆ. ಹಾಗಾಗಿ, ಅವರ ಮೇಲೆ ಕ್ರಮ ತೆಗೆದುಕೊಳ್ಳುವುದು ಪೊಲೀಸ್ ಇಲಾಖೆಗೆ ಸವಾಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.
ಬೆಳಗಾವಿ (ಮಾ.10): ರಾಜ್ಯ ಸರ್ಕಾರ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುವ ಸರ್ಕಾರ ಆಗಿದೆ. ನಿಷೇಧಿತ ಸಂಘಟನೆ ಮುಖಂಡರೆಲ್ಲ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಮನೆಯಲ್ಲೆ ಇರುತ್ತಾರೆ. ಹಾಗಾಗಿ, ಅವರ ಮೇಲೆ ಕ್ರಮ ತೆಗೆದುಕೊಳ್ಳುವುದು ಪೊಲೀಸ್ ಇಲಾಖೆಗೆ ಸವಾಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಘೋಷಣೆ, ಬೆಂಗಳೂರಿನ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಗಳೇ ಇದಕ್ಕೆಲ್ಲ ಸಾಕ್ಷಿ. ಆದ್ದರಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭಯೋತ್ಪಾದಕರ ರಕ್ಷಕ ಸರ್ಕಾರ ಎಂದು ದೂರಿದರು.
ಯಾರಿಗೆ ಟಿಕೆಟ್ ಸಿಗುತ್ತೆ, ಸಿಗಲ್ಲ ಎಂಬುದು ನನಗೆ ಗೊತ್ತಿಲ್ಲ. ಈಗ ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪುತ್ತದೆ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ಆದರೆ, ಈ ಕುರಿತು ಪ್ರಧಾನಿಯೂ ಹೇಳಿಲ್ಲ, ಜೆ.ಪಿ. ನಡ್ಡಾ, ಅಮಿತ್ ಶಾ ಕೂಡ ಹೇಳಿಲ್ಲ. ಈ ಎಲ್ಲ ಸುದ್ದಿಗಳು ಊಹಾಪೋಹ ಎನಿಸುತ್ತದೆ. ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಪಟ್ಟಿ ಬಿಡುಗಡೆ ಆಗಲಿದೆ, ಆಗ ಸತ್ಯ ಹೊರಬರಲಿದೆ ಎಂದರು. ಗೆಲ್ಲುವ ಪಕ್ಷಕ್ಕೆ ಬಹಳಷ್ಟು ಜನರು ಟಿಕೆಟ್ ಕೇಳುವುದು ಸಹಜ, ಅದು ತಪ್ಪಲ್ಲ. ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ನಮ್ಮ ಕಾರ್ಯಕರ್ತರಿಗೆ ಟಿಕೆಟ್ ಕೇಳುವ ಹಕ್ಕಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ, ನಮ್ಮ ಕೇಂದ್ರ ಚುನಾವಣೆ ಮಂಡಳಿ ಇದೆ. ಯಾರಿಗೆ ಎಲ್ಲಿಂದ ಟಿಕೆಟ್ ಕೊಡಬೇಕು, ಏಕೆ ಕೊಡಬೇಕು, ಅದರಿಂದಾಗುವ ಲಾಭಗಳ ಆಧಾರದ ಮೇಲೆ ಖಂಡಿತವಾಗಿ ನಮ್ಮ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
Loksabha Elections 2024: ರಾಜ್ಯದಲ್ಲಿ ಕಾಂಗ್ರೆಸ್‌ಗೆ 15 ರಿಂದ 16 ಸೀಟು ಗೆಲುವು: ಸಚಿವ ಕೆ.ಎನ್.ರಾಜಣ್ಣ
ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ತಪ್ಪಿಸಲು ಪಿತೂರಿ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವಾಗ ವಿರೋಧ ವ್ಯಕ್ತವಾಗುತ್ತೋ, ಆಗಲೇ ನಾಯಕರು ನಮ್ಮ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ. ನಮ್ಮವರು ವಿರೋಧ ಮಾಡಿದ ಕಾರಣಕ್ಕೆ ನನಗೆ ಅನುಕೂಲ ಆಗಿದೆ. ಇಲ್ಲವಾದರೆ ಶೋಭಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ, ಪಕ್ಷದ ಕೆಲಸ ಮಾಡುತ್ತಾರೆ ಎಂದಷ್ಟೇ ಹೇಳುತ್ತಾರೆ ಎಂದರು. ಆದರೆ ಈಗ ಶೋಭಾಗೆ ಏಕೆ ವಿರೋಧ ಮಾಡುತ್ತಿದ್ದಾರೆ ಎಂದು ಪಕ್ಷದ ನಾಯಕರೂ ಮಾಹಿತಿ ಪಡೆಯುತ್ತಿದ್ದಾರೆ. ಆಗಲೇ ಸತ್ಯ ಗೊತ್ತಾಗೋದು, ನಮ್ಮ ವ್ಯಕ್ತಿತ್ವವೇನು? ನಮ್ಮ ಅಭಿವೃದ್ಧಿ ಕೆಲಸಗಳು ಗೊತ್ತಾಗುತ್ತವೆ. ನಾವೇನು ಮಾಡಿಲ್ಲ, ಏನು ಮಾಡಬಾರದು ಎಂಬುದು ಇಂತಹ ವರದಿ ಪಡೆಯುವುದರಿಂದ ಗೊತ್ತಾಗುತ್ತದೆ.
ಚುನಾವಣೆ ಸಮಯ ಬಹಳಷ್ಟು ಸೂಕ್ಷ್ಮತೆಯಿಂದ ಕೂಡಿರುತ್ತದೆ. ಮಾಹಿತಿ ಸಂಗ್ರಹದಿಂದ ನನಗೆ ಅನುಕೂಲ ಆಗಲಿದೆಯೇ ಹೊರತು ಕೆಟ್ಟದ್ದು ಆಗುವುದಿಲ್ಲ. ನಮ್ಮ ಹೈಕಮಾಂಡ್ ಬಗ್ಗೆ ನನಗೆ ನಂಬಿಕೆ ಇದ್ದು, ಕೆಲಸದ ಆಧಾರದ ಮೇಲೆ ಟಿಕೆಟ್ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಗೆ ಅಭಿವೃದ್ಧಿಯೇ ಮಾನದಂಡ, 10 ವರ್ಷಗಳ ಅಭಿವೃದ್ಧಿ ಆಧಾರದ ಮೇಲೆ ಮತ ಕೇಳುತ್ತೇವೆ. ದೇಶದಲ್ಲಿ ಆದಂಹ ಮೂಲಸೌಕರ್ಯ ಅಭಿವೃದ್ಧಿ, ಗ್ರಾಮೀಣ ಭಾಗಕ್ಕೆ ಸಿಕ್ಕ ನೆರವು ನಮ್ಮ ಶಕ್ತಿ. ನರೇಂದ್ರ ಮೋದಿ ಕಾರ್ಯಕ್ರಮಗಳು, ದೇಶದ ಬಗ್ಗೆ ಅವರಿಗಿರುವ ಕಳಕಳಿ. ದೇಶದ ರಕ್ಷಣೆ ಮತ್ತು ಅಭಿವೃದ್ಧಿ ಬಗ್ಗೆ ಅವರಿಗಿರುವ ದೂರದೃಷ್ಟಿ, ವಿದೇಶದಲ್ಲಿರುವ ಭಾರತೀಯರಿಗೆ ಗೌರವದ ದೂರದೃಷ್ಟಿ ಮೇಲೆ ಮತಯಾಚನೆ ಮಾಡುತ್ತೇವೆ ಎಂದರು.
ಚುನಾವಣೆ ಸಂದರ್ಭದಲ್ಲಿ ಸಿಲಿಂಡರ್, ಪೆಟ್ರೊಲ್ ಬೆಲೆ ಇಳಿಕೆ ಮಾಡಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವೆ ಶೋಭಾ ಕರಂದ್ಲಾಜೆ, ಬೆಲೆ ಇಳಿಕೆಗೇನು ಸಂಬಂಧವಿಲ್ಲ. ಗ್ಯಾಸ್, ಪೆಟ್ರೋಲ್‌ನಲ್ಲಿ ನಾವು ಸ್ವಾವಲಂಬಿ ಆಗಿಲ್ಲ. ಈ ವಿಚಾರದಲ್ಲೂ ಸ್ವಾವಲಂಬನೆ ಸಾಧಿಸಲು ಮೋದಿ ಯೋಜನೆ ರೂಪಿಸುತ್ತಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳು, ರಸಗೊಬ್ಬರ, ಖಾದ್ಯ ತೈಲದಲ್ಲಿಯೂ ನಾವು ಸ್ವಾವಲಂಬಿಯಾಗಿಲ್ಲ. ಎಲ್ಲವನ್ನೂ ನಾವು ವಿದೇಶದಿಂದ ಸರಬರಾಜು ಮಾಡಿಕೊಳ್ಳಬೇಕಾಗುತ್ತದೆ. ವಿದೇಶಿ ಮಾರುಕಟ್ಟೆ ಆಧಾರದ ಮೇಲೆ ಬೆಲೆ ನಿಗದಿ ಆಗುತ್ತದೆ ಎಂದು ತಿಳಿಸಿದರು.
ದಾವಣಗೆರೆಯಲ್ಲಿ ಹಳೆ ಬಸ್ಸು ನಿಲ್ದಾಣ ಹಾಳುಗೆಡವಿದ ಬಿಜೆಪಿ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ
ಈರುಳ್ಳಿ, ಟೊಮೆಟೊ ಸಲುವಾಗಿ ಸರ್ಕಾರ ಬಿದ್ದ ಉದಾಹರಣೆ ಇವೆ. ಅದಕ್ಕೆ ಖಾದ್ಯತೈಲ ಕಾಳು ಬೆಳೆಯಲು ರೈತರಿಗೆ ಉತ್ತೇಜನ ನೀಡಲಾಗುತ್ತಿದೆ. ಸಬ್ಸಿಡಿ ಆಧಾರದ ಮೇಲೆ ರೈತರಿಗೆ ಬೀಜ, ಟೆಕ್ನಾಲಜಿ ನೀಡುತ್ತಿದ್ದೇವೆ. ಯುಪಿಎ ಸಮಯದಲ್ಲಿನ ಲೋಪಗಳ ಗುಂಡಿ ಮುಚ್ಚಿ ಮೇಲೆದ್ದು ಬರಲು ನಮಗೆ ಸಮಯ ಬೇಕು. ಎಲ್ಲ ವಿಚಾರಗಳಲ್ಲಿ ಸ್ವಾವಲಂಬನೆ ಸಾಧಿಸಲು ಮೋದಿ ಕಾರ್ಯ ಪ್ರವೃತರಾಗುತ್ತಿದ್ದಾರೆ. ಈ ಮೊದಲು ನಾವು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿ ಇರಲಿಲ್ಲ, ಮದ್ದು, ಗುಂಡು ಆಚೆಯಿಂದ ಬರುತ್ತಿತ್ತು. ಇವತ್ತು ಭಾರತ ಸ್ವಾವಲಂಬಿಯಾಗುವತ್ತ ದಾಪುಗಾಲು ಇಡುತ್ತಿದೆ. ನಾವು ಬೇರೆ ದೇಶಕ್ಕೆ ರಪ್ತು ಮಾಡಲು ಯೋಚನೆ ಮಾಡಿದ್ದೇವೆ ಎಂದು ತಿಳಿಸಿದರು.