ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿ ಇಂದು ಪ್ರಕಟ ಸಾಧ್ಯತೆ, ಸಂಜೆ 7.30ಕ್ಕೆ ದೆಹಲಿಯಲ್ಲಿ ಮಹತ್ವದ ಸಭೆ!
ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳ 2 ಪಟ್ಟಿ ರಿಲೀಸ್ ಮಾಡಿದೆ. ಇದೀಗ ಮೂರನೇ ಪಟ್ಟಿ ಬಿಡುಗಡೆಗೆ ಸಜ್ಜಾಗಿದೆ. ಇಂದು ದೆಹಲಿಯಲ್ಲಿ ಮಹತ್ವದ ಸಭೆ ಕರೆದಿದ್ದು, 30 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ.
ನವದೆಹಲಿ(ಏ.13): ಕರ್ನಾಟಕ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದೆ. ಮೂರು ಪಕ್ಷಗಳು ಅಭ್ಯರ್ಥಿಗಳ ಘೋಷಣೆ ಮಾಡುತ್ತಿದ್ದರೆ, ಇತ್ತ ಬಂಡಾಯದ ಕಿಡಿ ಜೋರಾಗಿದೆ. ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವ ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳ 2 ಪಟ್ಟಿ ಪ್ರಕಟಗೊಳಿಸಿದೆ. ಇದೀಗ 3ನೇ ಪಟ್ಟಿ ಬಿಡುಗಡೆಗೆ ತಯಾರಿ ನಡೆಸಿದೆ . ಇಂದು ರಾತ್ರಿ 3ನೇ ಪಟ್ಟಿ ಅಂತಿಮಗೊಳ್ಳಲಿದೆ, ಬಿಡುಗಡೆಯಾಗುವ ಸಾಧ್ಯತೆ ಇದೆ. ಬಾಕಿ ಉಳಿದಿರುವ 58 ಕ್ಷೇತ್ರಗಳ ಪೈಕಿ 30 ಕ್ಷೇತ್ರಗಳಿಗೆ 3ನೇ ಪಟ್ಟಿಯಲ್ಲಿ ಹೆಸರು ಘೋಷಿಸಲು ಕಾಂಗ್ರೆಸ್ ಮುಂದಾಗಿದೆ. ಇದಕ್ಕಾಗಿ ಇಂದು(ಏ.13) ಸಂಜೆ 7.30ಕ್ಕೆ ದೆಹಲಿಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ಕರೆಯಲಾಗಿದೆ.
ಕಾಂಗ್ರೆಸ್ ನಾಯಕರಾದ ಕೆಸಿ ವೇಣುಗೋಪಾಲ್, ರಂದೀಪ್ ಸುರ್ಜೆವಾಲ, ಮಕುಲ್ ವಾಸ್ನಿಕ್ ಸೇರಿದಂತೆ ರಾಜ್ಯ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ಚರ್ಚೆ ನಡೆಯಲಿದೆ. 3ನೇ ಪಟ್ಟಿಯಲ್ಲಿ 30 ಕ್ಷೇತ್ರಗಳಿಗೆ ಹೆಸರು ಅಂತಿಮಗೊಳಿಸುವ ಸಾಧ್ಯತೆ ಇದೆ. ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪ್ರಕಟಿಸಿತ್ತು. ಬಳಿಕ 2ನೇ ಪಟ್ಟಿಯಲ್ಲಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿತ್ತು.
ಬಿಜೆಪಿ ಪಾಳೆಯದಲ್ಲಿ ಬಂಡಾಯದ ಕಿಚ್ಚು, 25 ಕ್ಷೇತ್ರಗಳಲ್ಲಿ ಇತರ ಪಕ್ಷಗಳಿಗೆ ಲಾಭ ಹೆಚ್ಚು
ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 2ನೇ ಪಟ್ಟಿ ಬಿಡುಗಡೆ ತೀವ್ರ ತಲೆನೋವು ತಂದಿದೆ. ಹಲವು ಜಿಲ್ಲೆಗಳಲ್ಲಿ ಬಂಡಾಯ ಕಾಣಿಸಿಕೊಂಡಿದೆ. ಉಡುಪಿ ಟಿಕೆಟ್ ಆಕಾಂಕ್ಷಿ ಕೃಷ್ಣಮೂರ್ತಿ ಆಚಾರ್ಯ ಹಾಗೂ ಕಿತ್ತೂರು ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಡಿ.ಬಿ.ಇನಾಮದಾರ ಸೊಸೆ ಲಕ್ಷ್ಮೇ ಇನಾಮದಾರ ಅವರು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಇದೇ ವೇಳೆ, ಚಿತ್ರದುರ್ಗದಲ್ಲಿ ಮಾಜಿ ಎಂಎಲ್‌ಸಿ ರಘು ಆಚಾರ್ ಅವರು ಜೆಡಿಎಸ್‌ನಿಂದ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಹಾನಗಲ್‌ನಲ್ಲಿ ಮಹೋಹರ ತಹಶೀಲ್ದಾರ್ ಅವರು ಕಾಂಗ್ರೆಸ್ ತೊರೆದು ಶುಕ್ರವಾರ ಜೆಡಿಎಸ್ ಸೇರಿದ್ದಾರೆ. ಶಿರಸಿ-ಸಿದ್ದಾಪುರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ವೆಂಕಟೇಶ ಹೆಗಡೆ ಹೊಸಬಾಳೆ, ಮಂಡ್ಯದ ಕೆ.ಕೆ.ರಾಧಾಕೃಷ್ಣ ಅವರು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ. ಇದೇ ವೇಳೆ, ಬಾದಾಮಿ ಹಾಗೂ ನರಗುಂದಗಳಲ್ಲಿ ಟಿಕೆಟ್ ವಂಚಿತರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು, ಬಾದಾಮಿಯಿಂದ ಸಿದ್ದು ಸ್ಪರ್ಧೆಗೆ ಆಗ್ರಹ ಕೇಳಿ ಬಂದಿದೆ.
35, 58, 131, ರಾಜ್ಯ ಚುನಾವಣಾ ಅಖಾಡದಲ್ಲಿ ಮೂರು ಪಕ್ಷಗಳ ನಿಗೂಢ ಲೆಕ್ಕಾಚಾರ!
ಕಿತ್ತೂರಿನಲ್ಲಿ ಟಿಕೆಟ್ ಸಿಗದಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ಡಿ.ಬಿ.ಇನಾಮದಾರ ಸೊಸೆ ಲಕ್ಷ್ಮೇ ಇನಾಮದಾರ, ಕಾಂಗ್ರೆಸ್‌ಗೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಡುತ್ತಲೇ ಅವರು ತಮ್ಮ ರಾಜೀನಾಮೆ ನಿರ್ಧಾರ ಪ್ರಕಟಿಸಿದರು.ಉಡುಪಿಯಲ್ಲಿ ಟಿಕೆಟ್ ತಪ್ಪಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ, ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ತಮ್ಮ ಅಳಿಯ, ಮಾಜಿ ಶಾಸಕ ರಫೀಕ್ ಅಹಮದ್‌ಗೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಿರುವುದಕ್ಕೆ ಅಸಮಾಧಾನಗೊಂಡಿರುವ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್.ಷಫಿ ಅಹಮದ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.