ಬೆಂಗಳೂರು, (ಮಾ.10): ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಸೆಕ್ಸ್ ಸಿಡಿ ಬಹಿರಂಗಗೊಳಿಸಿರುವವರು ಕಾಂಗ್ರೆಸ್ ನವರು ಎಂದು ಆರೋಪಿರುವ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಟ್ವೀಟರ್‌ ನಲ್ಲಿ ತಿರುಗೇಟು ನೀಡಿದೆ.

"

ಸಿಡಿ ಮಾಡಿದ್ದು ಕಾಂಗ್ರೆಸ್ ನವರೇ, ನಾನೂ ಕಾಂಗ್ರೆಸ್ ನಲ್ಲಿದ್ದವನೇ ಎಂದಿರುವ ಸಚಿವ ಎಸ್ ಟಿ ಸೋಮಶೇಖರ್ ಅವರೇ. ನೀವೆಷ್ಟು ಸಿಡಿ ಮಾಡಿದ್ದೀರಿ? ನಿಮ್ಮದೆಷ್ಟು ಸಿಡಿ ಇದೆ? ಅದಕ್ಕೆಷ್ಟು ಖರ್ಚು ಮಾಡಿದ್ದೀರಿ? ಬಾಂಬೆಯ ಹೋಟೆಲ್ ನಲ್ಲಿ ಕ್ವಾರೆಂಟೈನ್ ಆಗಿದ್ದಿರಲ್ಲ ಆಗ ನಿಮ್ಮ ಸಿಡಿ ಯಾರು ಮಾಡಿದ್ದು? ಕೋರ್ಟಿಗೆ ಏಕೆ ಅರ್ಜಿ ಏಕೆ ಸಲ್ಲಿಸಿದಿರಿ? ಎಂದು ಪ್ರಶ್ನಿಸಿದೆ.

ನಾನು 20 ವರ್ಷ ಕಾಂಗ್ರೆಸ್​ನಲ್ಲೇ ಇದ್ದೆ, ಜಾರಕಿಹೊಳಿ ಸಿಡಿ ಮಾಡಿದ್ದೇ ಇವರು: ಸಚಿವರ ಸ್ಫೋಟಕ ಹೇಳಿಕೆ

ಕಾಂಗ್ರೆಸ್ ವಿರುದ್ದ ಆರೋಪಿಸುವ ಸೋಮಶೇಖರ್ ಅವರೇ ನಿಮ್ಮ ಕಳ್ಳ ಮನಸೇಕೆ ಹುಳ್ಳುಳ್ಳಗೆ ಆಡುತ್ತಿದೆ? ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡವರಂತೆ ಓಡಿ ಹೋಗಿ ತಡೆಯಾಜ್ಞೆಗೆ ನ್ಯಾಯಾಲಯದಲ್ಲಿ ಅರ್ಜಿ ಏಕೆ ಸಲ್ಲಿಸಿದಿರಿ? ಎಂದು ಕೇಳಿದೆ.

ಮನೆಹಾಳು ಕೆಲಸ ಯಾರು ಮಾಡುವವರು ಎಂಬುದನ್ನು ನಿಮ್ಮದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಲ್ಲಿ ವಿಚಾರಿಸಿ, ಅವರು ಹೇಳುತ್ತಾರೆ. ಬಿ.ವೈ ವಿಜಯೇಂದ್ರ ಅವರು ಸಿಡಿ ತಯಾರಿಕಾ ಘಟಕವನ್ನು ಹೊಂದಿರುವ ಬಗ್ಗೆ ಗಂಟಾ ಘೋಷವಾಗಿ ಹೇಳಿದ್ದಾರೆ. ಬಿಜೆಪಿಯನ್ನು ಬ್ಲಾಕ್‌ ಮೇಲ್ ಜನತಾ ಪಾರ್ಟಿ ಎಂದು ನಿಮ್ಮವರೇ ಸಾರಿ ಸಾರಿ ಹೇಳಿದ್ದಾರೆ ಎಂದು ತಿರುಗೇಟು ನೀಡಿದೆ.

ಸಲೀಂ ಅಹ್ಮದ್ ತಿರುಗೇಟು
ಇನ್ನು ಎಸ್‌ಟಿ ಸೋಮಶೇಖರ್ ಆರೋಪಕ್ಕೆ  ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿರುಗೇಟು ಕೊಟ್ಟಿದ್ದಾರೆ.  ಸಚಿವ ಸೋಮಶೇಖರ್ ಕೂಡ ಕೋರ್ಟ್ ನಿಂದ ಸ್ಟೇ ತೆಗೆದುಕೊಂಡಿದ್ದಾರೆ. ಸೋಮಶೇಖರ್ ಗೆ ನಾಚಿಕೆ ಆಗಬೇಕು. ಬಿಜೆಪಿಯವರೇ ಮಾಡಿದ್ದಾರೆ ಎಂಬ ಮಾಹಿತಿ ನಮಗಿದೆ . ಬಿಜೆಪಿಯಲ್ಲಿ ಯಾರು ಈ ಸಿ.ಡಿ. ಮಾಡಿದ್ದಾರೆ ಅಂತ ಹುಡುಕಲಿ ಎಂದು ಹೊಸ ಬಾಂಬ್ ಸಿಡಿಸಿದರು.

ಬಿಜೆಪಿಯವರೇ ಈ ಸಿ.ಡಿ. ಮಾಡಿದ್ದಾರೆ ಎಂಬ ಮಾತು ಕೇಳಿ ಬರ್ತಿರೋ ಹಿನ್ನಲೆಯಲ್ಲಿ ಅಟೆನ್ಶನ್ ಡೈವರ್ಟ್ ಮಾಡಲು ಕಾಂಗ್ರೆಸ್ ಕಡೆ ಗುಂಡು ಹೊಡಿತಿದ್ದಾರೆ, ಕಾಂಗ್ರೆಸ್ ನಲ್ಲಿ ಬೆಳೆದ ಸೋಮಶೇಖರ್ ಈ ಮಾತು ಹೇಳಿರೋದು ದುಃಖ ತಂದಿದೆ. ಸೋಮಶೇಖರ್ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ, ಯಾವುದೇ ಆಧಾರವಿಲ್ಲ, ಕೇವಲ ಪ್ರಚಾರಕ್ಕೆ ಈ ಹೇಳಿಕೆ ಕೊಟ್ಟಿದ್ದಾರೆ. ಜನರ ಅಟೆನ್ಶನ್ ಡೈವರ್ಟ್ ಮಾಡಲು ಈ ಹೇಳಿಕೆ ನೀಡಿದ್ದಾರೆ ಎಂದರು.