Asianet Suvarna News Asianet Suvarna News

ಗ್ಯಾರಂಟಿ ಸಾಧನೆಗೆ ಕಾಂಗ್ರೆಸ್‌ ಹೈಕಮಾಂಡ್‌ ಫಿದಾ: ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ನುಡಿದಂತೆ ನಡೆದಿದ್ದೇವೆ, ಲೋಕಸಭೆಗೂ ಹಲವು ಗ್ಯಾರಂಟಿ ಘೋಷಣೆ, ನಮ್ಮ ಗ್ಯಾರಂಟಿ ಬಿಜೆಪಿಯಿಂದ ನಕಲು, ಮೋದಿ ಗ್ಯಾರಂಟಿ ಅಂತಾರೆ, ಸುಳ್ಳು ಹೇಳೋದೇ ಬಿಜೆಪಿಯವ್ರ ಗ್ಯಾರಂಟಿ, ಮೋದಿ ಕಲಬುರಗಿಯನ್ನ ಸೆಂಟರ್‌ ಮಾಡ್ಕೊಂಡಾನ್ರಿ, ಮತ್ತೆ ಮಾ.16 ಕ್ಕೆ ಹೊಂಟಾನ, ಖಾಲಿಕೈಲಿ ಬರ್ತಾನ, ಹೋಗ್ತಾನ ಎಂದ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ 

Congress High Command Praises Karnataka's Guarantee Achievement Says Mallikarjun Kharge grg
Author
First Published Mar 14, 2024, 10:45 PM IST

ಕಲಬುರಗಿ(ಮಾ.14):  ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ 9 ತಿಂಗಳಲ್ಲೇ ತಾನು ಜನತೆಗೆ ನೀಡಿದ್ದ ಪಂಚ ವಾಗ್ದಾನಗಳಾದ ಶಕ್ತಿ, ಯುವನಿಧಿ, ಗೃಹಜ್ಯೋತಿ, ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಗಳನ್ನು ಜಾರಿಗೊಳಿಸಿರೋದಕ್ಕೆ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತ ಹಾಗೂ ಜಿಪಂ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಡಾ. ಖರ್ಗೆ, ಬಡವರ ಬಾಳು ಬೆಳಗುವ ಪಂಚ ಗ್ಯಾರಂಟಿ ಜಾರಿಗೆ ತರುವ ಮೂಲಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್‌ ಮತ್ತವರ ಸಂಪುಟದ ಸಹೋದ್ಯೋಗಿಗಳು ಉತ್ತಮ ಕೆಲಸ ಮಾಡಿದ್ದಾರೆಂದು ಶಹಬ್ಬಾಸ್‌ಗಿರಿ ನೀಡಿದರು.

ಕಲಬುರಗಿಯಲ್ಲಿ ಜನಸ್ಪಂದನ ಕಾರ್ಯಕ್ರಮ: ಸತತ 5 ಗಂಟೆ ಕುಳಿತು ಅಹವಾಲು ಆಲಿಸಿದ ಪ್ರಿಯಾಂಕ್ ಖರ್ಗೆ

ನಮ್ಮ ಗ್ಯಾರಂಟಿ ನೋಡ್ಕೊಂಡು ಬಿಜೆಪಿಯವರು ಮೋದಿ ಗ್ಯಾರಂಟಿ ಅಂತ ಹೇಳ್ಕೋಂತ ಹೊಂಟಿದ್ದಾರೆಂದು ಲೇವಡಿ ಮಾಡಿದ ಖರ್ಗೆ, ಅದೇನು ಮೋದಿ ಗ್ಯಾರಂಟಿ? ಸುಳ್ಳು ಹಳೋದೇ ಅವರ ಗ್ಯಾರಂಟಿ, ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೇವೆ ಅಂತ ಹೇಳಿದವರು ಕಳೆದ 10 ವರ್ಷದಲ್ಲಿ ಮಾಡಿದ್ದೇನು? ಮೋದಿ, ಬಿಜೆಪಿ ತಮ್ಮ ಕೊಡುಗೆ ಹೇಳಿ ಮತ ಕೇಳಲಿ, ಅವರು ಬಂದಾಗ ನೀವೆಲ್ಲರು ಪ್ರಶ್ನಿಸಿರಿ ಎಂದು ಜನತೆಗೆ ಕರೆ ನೀಡಿದರು.

ರೇಲ್ವೆ ಸ್ಟೇಷನ್‌ದಾಗ ಹಸಿರು ಝಂಡಾ ಹಿಡ್ಕೊಂಡು ಓಡಾಡಿದ್ರ ಏನ್‌ ಬಂತು?:

ರೇಲ್ವೆ ನಿಲ್ದಾಣದೊಳ್ಗ ಹಸಿರು ಝಂಡಾ ಹಿಡಕೊಂಡು ಓಡಾಡಿದರ ಏನ್‌ ಬಂತು? ಸಾವಿರಾರು ಕೋಟಿ ಯೋಜನೆಗಳಿಗೆ ಚಾಲನೆ ನೀಡಲು ಹೋಗಬೇಕಾದವರು ರೇಲ್ವೆ ಸ್ಟೇಷನ್‌ ಅಲಿತಿದ್ದಾರ, ಇದರಿಂದ ದೇಶದ ಪ್ರಗತಿ ಆಗ್ತದಾ? ನಮ್ದೇ ಹಳಿಗಳ ಮ್ಯಾಗ ಮೋದಿ ರೈಲ ಓಡಸ್ಲಿಕತ್ತಾನ ಎಂದರು ಖರ್ಗೆ.

ಮೋದಿ ಪದೇ ಪದೇ ಕಲಬುರಗಿಗೆ ಹೊಂಟಾನ ಮಾರಾಯ, ರಾಜ್ಯಸಭೆ ವಿರೋಧ ಪಕ್ಷ ನಾಯಕರ ಕಚೇರಿಯಲ್ಲಿ ಮೊನ್ನೆ ಸಿಕ್ಕಾಗ ಕೇಳ್ದೆ, ಯಾಕ ಕಲಬುರಗಿಗೆ ಹೊಂಟೀರಿ? ಕೆಟ್ಟ ಬಿಸಿಲ, ನೀರಿಗೂ ಪರದಾಟ ಅದ ಅಲ್ಲಿ ಅಂದೆ, ನಿಮ್ಮೂರಲ್ಲಿ ದೊಡ್ಡ ಏರ್‌ಸ್ಟ್ರಿಪ್‌ ಇದೆ. ಅದಕ್ಕೆ ನಮ್ಮ ವಿಮಾನ ಅಲ್ಲಿ ಇಳಿಸಿ ಹೋಗಲು ಅನುಕೂಲ ಎಂದು ಮೋದಿ ಹೇಳಿದರು. ಬಂದು ಹೋಗ್ಲಿ, ಹಂಗೇ ಬರುವಾಗ ನಮಗ ಯೋಜನೆಗಳ ಕೊಡುಗೆ ಕೊಡಬಹುದಲ್ಲ? ಎಂದರು.

ಮಾತಿನುದ್ದಕ್ಕೂ ಸಿಂಹಪಾಲು ಮೋದಿಯ ಮಾತು, ಡೈಲಾಗ್‌ ಎಲ್ಲವನ್ನು ಅಣಕಿಸುತ್ತ , ಹಲವು ಬಾರಿ ಏಕ ವಚನದಲ್ಲೇ ಪದಪ್ರಯೋಗ ಮಾಡುತ್ತ ಮಾತನಾಡಿದ ಖರ್ಗೆ, ಕಾಂಗ್ರೆಸ್‌ ದೇಶವನ್ನೇ ಹಾಳು ಮಾಡಿದೆ ಅಂತಾನ, ನೀ ಎಷ್ಟು ಬೈತಿ ಬಯ್ಯೋ ಮಾರಾಯ, ನಿನ್ನ ಬೈಗುಳ ತಿಂತೀವಿ, ನೀನರ ಕೆಲ್ಸ ಮಾಡಿ ತೋರಿಸು, ಕೆಲಸಕ್ಕಿಂತ ಪ್ರಚಾರನೇ ಹೆಚ್ಚಾಯ್ತು ಎಂದು ಕೇಂದ್ರದ ಸಾಧನೆ ಶೂನ್ಯವೆಂದು ಟೀಕಿಸಿದರು.

ಲೋಕಸಭೆಗೂ ಕಾಂಗ್ರೆಸ್‌ ಗ್ಯಾರಂಟಿ:

ಲೋಕ ಸಮರಕ್ಕೂ ನಾವು ಗ್ಯಾರಂಟಿಗಳೊಂದಿಗೆ ಬಂದಿದ್ದೇವೆ ಎಂದ ಖರ್ಗೆ, ಜಾತಿ ಜನಗಣತಿ ದೇಶಾದ್ಯಂತ ನಡೆಸಿ ಅದರ ಆಧಾರದಲ್ಲಿ ಸವಲತ್ತು, ಯೋಜನೆ ನೀಡುವ ಭಾಗಿದಾರಿ ನ್ಯಾಯ ಗ್ಯಾರಂಟಿ, ಕನಿಷ್ಠ ಬೆಂಬಲ ಬೆಲೆ ಗ್ಯಾರಂಟಿ, ಇದನ್ನೇ ಕಾನೂನತ್ಮಕವಾಗಿಸುವ ಗ್ಯಾರಂಟಿ, ದೇಶದ ಯುವಕರಿಗೆ ಕೌಶಲ್ಯ ತರಬೇತಿ ಕೊಟ್ಟು 1 ಲಕ್ಷ ರು. ಅವರಿಗೆ ಕೊಟ್ಟು ಉದ್ಯಮಶೀಲರಾಗುವಂತಹ ಯುವನ್ಯಾಯ ಗ್ಯಾರಂಟಿ, ಮಹಿಳಾ ಗ್ಯಾರಂಟಿ ಹೀಗೆ ಇನ್ನೂ ಹಲವು ಗ್ಯಾರಂಟಿಗಳೊಂದಿಗೆ ಲೋಕ ಸಮರದಲ್ಲಿ ಹೆಚ್ಚಿನ ಪ್ರಾಬಲ್ಯ ಮೆರೆಯುತ್ತೇವೆಂದರು.

ಕಲಬುರಗಿಗೆ ಮೋದಿ ಕೊಡುಗೆ ಏನಿದೆ ? ಖರ್ಗೆ ಪ್ರಶ್ನೆ

ಕಲಬುರಗಿ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಏನಿದೆ? ಈಗ ಮತ್ತೆ ಬರುತ್ತಿದ್ದಾರೆ‌ ಏನಾದರೂ ಘೋಷಣೆ ಮಾಡುತ್ತಾರೆಯೇ? ಏನು ಘೋಷಣೆ ಮಾಡದೆ ಬಂದರೆ ಏನು ಪ್ರಯೋಜನ ಎಂದರು.
ಕಲ್ಯಾಣ ಕರ್ನಾಟಕದ ಯಾವ ಜಿಲ್ಲೆಗಳಿಗೆ ಏನು ಮಾಡಿದ್ದಾರೆ? ಆದರೆ ಕಾಂಗ್ರೆಸ್ ಪಕ್ಷಕ್ಕೆ ಬೈಯುವುದು ಮಾತ್ರ ಬಿಟ್ಟಿಲ್ಲ. ನೀವು ಎಷ್ಟೇ ಬೈದರೂ ಪರವಾಗಿಲ್ಲ ಕೆಲಸ ಮಾಡಿ ತೋರಿಸಿಪ್ಪಾ ಮಾರಾಯ ಎಂದ ಖರ್ಗೆ ಏನು ಕೆಲಸ ಮಾಡದ ನಿಮಗೆ ಯಾಕೆ ಜನರು ಮತ ಹಾಕಬೇಕು ಎಂದು‌ ಪ್ರಶ್ನಿಸಿದರು.

ಸಿಎಂ ಸಲಹೆಗಾರ ಬಿ.ಆರ್. ಪಾಟೀಲ್, ಕೆಕೆಆರ್ ಡಿಬಿ ಅಧ್ಯಕ್ಷ ಅಜಯ್ ಸಿಂಗ್, ಶಾಸಕರಾದ ಎಂ ವೈ ಪಾಟೀಲ, ಕಮೀಜ್ ಫಾತಿಮಾ, ಅರವಿಂದ ಅರಳಿ, ತಿಪ್ಪಣ್ಣಪ್ಪ ಕಮಕನೂರು, ಅಲ್ಲಮಪ್ರಭು ಪಾಟೀಲ, ಚಂದ್ರಶೇಖರ ಪಾಟೀಲ್, ಮಜರ್ ಆಲಂ ಖಾನ್, ಜಗದೇವ ಗುತ್ತೇದಾರ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ರೇವುನಾಯಕ ಬೆಳಮಗಿ, ಸಿಇಓ ಭಂವರ ಸಿಂಗ್ ಮೀನಾ, ಪೊಲೀಸ್ ಕಮೀಷನರ್ ಆರ್ ಚೇತನ್, ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ, ಕೆಕೆಆರ್ ಟಿಸಿ ಎಂ.ಡಿ. ರಾಚಪ್ಪ ಸೇರಿದಂತೆ ಹಲವರಿದ್ದರು.

ಅಪ್ಪನ ಕೆರೆಗೆ ಕಾಂಗ್ರೆಸ್‌ನಿಂದ ಕಾಯಕಲ್ಪ: ಸಚಿವ ಪ್ರಿಯಾಂಕ್ ಖರ್ಗೆ

ಸಂವಿಧಾನ ರಕ್ಷಣೆ ಮಾಡಲು ಕೈಜೋಡಿಸಬೇಕು

ರೈತರ ಬೆಳೆಗಳಿಗೆ ಎಂಎಸ್‌ಪಿ ದರ ನಿಗದಿ ಮಾಡಿ ಅವರ ಲಾಭ ದುಪ್ಪಟ್ಟು ಮಾಡುವ ಎಂದು ಬರೀ ಘೋಷಣೆ ಮಾಡಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಂಎಸ್‌ಪಿ ಕಾನೂನುಬದ್ಧ ಮಾಡುತ್ತೇವೆ ಎಂದರು. ಆದರೆ, ದಿಲ್ಲಿ ಗಡಿಯಲ್ಲಿ ರೈತರು ಪ್ರತಿಭಟನೆಗೆ ಕುಳಿತಿದ್ದಾರೆ. ಅವರ ಸಮಸ್ಯೆ‌ ಬಗೆಹರಿಸುವುದು ಬಿಟ್ಟು ಅವರು ದಿಲ್ಲಿಗೆ ಬರದಂತೆ ತಡೆಯಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆಂದು ದೂರಿದರು. ಸಂವಿಧಾನ ರಚನೆ ಸುಮ್ಮನೆ ಆಗಿದ್ದಲ್ಲ ಅದರ ಹಿಂದೆ ಅಸಂಖ್ಯಾತ ಜನರ ತ್ಯಾಗವಿದೆ. ಅಂತಹ ಸಂವಿಧಾನ ಬದಲಾಯಿಸುತ್ತೇವೆ ಎಂದು ಸಂಸದನೊಬ್ಬ ಹೊರಟಿದ್ದಾನೆ. ಆದರೆ ಬಿಜೆಪಿಯವರು ಅವನ ಹೇಳಿಕೆ ಪಕ್ಷಕ್ಕೆ ಸಂಬಂಧಿಸಿಲ್ಲ ಎನ್ನುತ್ತಿದ್ದಾರೆ. ಅದ್ಹೇಗೆ ಸಂಬಂಧವಿಲ್ಲ? ಅವನು‌ ಚುನಾವಣೆಯಲ್ಲಿ ನಿಲ್ಲಲು ಟಿಕೇಟು ನೀಡಿದ್ದು ಬಿಜೆಪಿಯವರಲ್ಲವೇ? ಸಂವಿಧಾನದ ಆಶಯಕ್ಕೆ ಧಕ್ಕೆ ಆಗಿ ಮತ್ತೆ ಗುಲಾಮಿಗಿರಿ ಬಂದರೆ ದೇಶದ ಭವಿಷ್ಯಕ್ಕೆ ಕುತ್ತು ಬರಲಿದೆ. ಅದಕ್ಕಾಗಿ ಯುವಕರು ಸಂವಿಧಾನ ರಕ್ಷಣೆ ಮಾಡಲು ಕೈಜೋಡಿಸಬೇಕು ಎಂದರು. ಮೋದಿ ಸಿಎಂ ಆಗಿದ್ದಾಗ 25,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಈಗಲೂ ಮುಂದುವರೆದಿವೆ. ರೈತರ ಸಮಸ್ಯೆಗಳ ಕಡೆ ಗಮನ ಹರಿಸದೇ ಅಂಬಾನಿ, ಅದಾನಿ ಅಂತ ಹೊರಟಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷದ ಬ್ಯಾಂಕ್ ಅಕೌಂಟ್ ಬಂದ್ ಮಾಡಿ, ಸಾರ್ವಜನಿಕರು ನೀಡಿದ ದೇಣಿಗೆ ಹಣವನ್ನು ಸೀಜ್ ಮಾಡಿದ್ದಾರೆ. ₹300-400 ಕೋಟಿ ದಂಡ ಹಾಕಿ ಖರ್ಚಿಗೆ ಹಣವಿಲ್ಲದಂತೆ ಮಾಡಿದ್ದಾರೆ ಎಂದು ಆರೋಪಿಸಿ, ಈ ಸಲ ಕಾಂಗ್ರೆಸ್ ಗೆ ಮತ ನೀಡಿ ಆಶೀರ್ವಾದ ಮಾಡಿ ಎಂದು ಕೋರಿದರು.

Follow Us:
Download App:
  • android
  • ios