ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಮೂರು ಅಂಗಡಿಗಳನ್ನು ತೆರೆದಿದೆ ಎಂದು ಸಂಸದ ಗೋವಿಂದ ಕಾರಜೋಳ ಲೇವಡಿ ಮಾಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ, ದುರಾಡಳಿತ ಮಿತಿಮೀರಿದ್ದು, ಈ ಸರ್ಕಾರವು ನೀರಿನ ಮೇಲಿನ ಗುಳ್ಳೆಯಂತಿದ್ದು, ಯಾವಾಗ ಬೇಕಾದರೂ ಪತನವಾಗಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಬಾಗಲಕೋಟೆ: ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಮೂರು ಅಂಗಡಿ ತೆಗೆದುಕೊಂಡು ಕೂತಿದ್ದಾರೆ. ಸೋನಿಯಾ ಗಾಂಧಿಯವರದೊಂದು ಅಂಗಡಿ, ರಾಹುಲ್ ಗಾಂಧಿಯವರದೊಂದು ಅಂಗಡಿ ಮತ್ತು ಅಖಿಲ ಭಾರತ ಕಾಂಗ್ರೆಸ್ ಪದಾಧಿಕಾರಿಗಳದ್ದೊಂದು ಅಂಗಡಿ. ಮೂರು ಅಂಗಡಿಗಳಿಗೂ ಏನು ವ್ಯಾಪಾರಾಗುತ್ತದೆ ಎಂದು ನೋಡಿಕೊಂಡು ಕುಳಿತಿದ್ದಾರೆ ಹೊರತು, ಯಾವುದರ ಬಗ್ಗೆಯೂ ಸೀರಿಯಸ್, ಕಾಳಜಿಯಾಗಲಿ ಇಲ್ಲ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಲೇವಡಿ ಮಾಡಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಅಂಗಡಿಗಳನ್ನು ದೆಹಲಿಯಲ್ಲಿ ತೆರೆದು ಕುಳಿತಿದ್ದಾರೆ. ಯಾರ್‍ಯಾರ ಅಂಗಡಿಯೊಳಗೆ ವ್ಯಾಪಾರ ಹೇಗಾಗುತ್ತದೆ ಹಾಗೆ ನಡೆಯುತ್ತದೆ ಎಂದು ವ್ಯಂಗ್ಯವಾಡಿದರು.
ರಾಜ್ಯಪಾಲರಿಗೆ ವಿಧಾನಸೌಧದಲ್ಲಿ ಅಡ್ಡಗಟ್ಟಿದ ವಿಚಾರ ಪ್ರಸ್ತಾಪಿಸಿ, ಅದುವೇ ದುರಾಡಳಿತ ಎಂದು ನಾನು ಹೇಳುತ್ತಿರುವುದು. ಗವರ್ನರ್‌ಗೂ ಬೆಲೆ ಕೊಡದಿರುವವರು ಶಾಸನಬದ್ಧವಾಗಿ ಆಡಳಿತ ಮಾಡಲು ಸಾಧ್ಯವಿದೆಯಾ? ಬರೀ ಗೂಂಡಾವರ್ತನೆ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಭ್ರಷ್ಟಾಚಾರದ ಜಾತ್ರೆ ನಡೆಯುತ್ತಿದೆ
ರಾಜ್ಯ ಕಾಂಗ್ರೆಸ್‌ನಲ್ಲಿ ಸಂಕ್ರಾಂತಿ ಕ್ರಾಂತಿ ನಡೆಯಲಿಲ್ವಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದ ಕಾರಜೋಳ, ಯಾವ ಕ್ರಾಂತಿನೂ ಇಲ್ಲ ಭ್ರಾಂತಿನೂ ಇಲ್ಲ. ಭ್ರಷ್ಟಾಚಾರದ ಜಾತ್ರೆ ನಡೆಯುತ್ತಿದೆ. ಅದನ್ನು ಬಿಟ್ಟು ಬೇರೇನೂ ನಡೆದಿಲ್ಲ. ಮೂರು ವರ್ಷದಲ್ಲಿ ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸ್ವಜನ ಪಕ್ಷಪಾತ, ಭ್ರಷ್ಟಾಚಾರ ದುರಾಡಳಿತ ಮಿತಿಮೀರಿದೆ. ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ, ಅತ್ಯಾ*ಚಾರ, ಕೊ*ಲೆಗಳು ನಡೆಯುತ್ತಿವೆ. ಇಲಾಖೆಯಲ್ಲಿರುವ ಹೆಣ್ಣುಮಕ್ಕಳ ನಿಂದನೆ ಮಾಡುತ್ತಿದ್ದಾರೆ. ಅವಾಚ್ಯ ಪದಗಳಿಂದ ಬೈಯುತ್ತಿದ್ದಾರೆ. ಇಂತಹ ಕೆಟ್ಟ ಹಾಗೂ ದುರಾಡಳಿತ ಸರ್ಕಾರ ರಾಜ್ಯದಲ್ಲಿ ಇರಬಾರದು ಎಂದು ಜನ ಹಿಡಿಶಾಪ ಹಾಕುತ್ತಿದ್ದಾರೆ ಎಂದರು.
ಸಿದ್ದರಾಮಯ್ಯನವರಿಗೆ ಸೋನಿಯಾ ಗಾಂಧಿಯವರ ಮಗ ರಾಹುಲ್ ಗಾಂಧಿ ಬೆನ್ನು ತಟ್ಟುತ್ತಿದ್ದಾರೆ. ಒಂದು ಕಡೆ ಕಾಂಗ್ರೆಸ್ ಅಧ್ಯಕ್ಷ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಸೋನಿಯಾ ಗಾಂಧಿ ಬೆನ್ನು ತಟ್ಟುತ್ತಿದ್ದಾರೆ. ಎರಡು ಕಡೆಯಿಂದ ಎಷ್ಟು ಬರುತ್ತದೆ ಬರಲಿ ಅನ್ನೋದೇ ಹೊರತು, ರಾಜ್ಯದ ಜನತೆ ಬಗ್ಗೆ, ಆಡಳಿತ ಬಗ್ಗೆ, ಅಭಿವೃದ್ಧಿ ಬಗ್ಗೆ ಎಳ್ಳಷ್ಟು ಕಾಳಜಿ ಕಾಂಗ್ರೆಸ್ ನಾಯಕರಿಗೆ ಇಲ್ಲ ಎಂದು ದೂರಿದರು.
ಯಾವಾಗ ಮುಳುಗಿ ಹೋಗುತ್ತದೋ ಗೊತ್ತಿಲ್ಲ
ಈ ಕುರ್ಚಿಗಾಗಿ ಮೂರು ಗುಂಪುಗಳಾಗಿ ಕಾದಾಡುತ್ತಿದ್ದಾರೆ. ಇವತ್ತು ನಾಳೆ ಯಾವತ್ತು ಗೊತ್ತಿಲ್ಲ. ಈ ಸರ್ಕಾರ ನೀರಿನ ಮೇಲಿನ ಗುಳ್ಳೆ ಇದ್ದ ಹಾಗೆ. ಯಾವಾಗ ಮುಳುಗಿ ಹೋಗುತ್ತದೋ ಗೊತ್ತಿಲ್ಲ ಎಂದು ತಿಳಿಸಿದರು.

