ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಕಾಂಗ್ರೆಸ್‌ನಲ್ಲಿ ಒಂದಿಲ್ಲೊಂದು ಬೆಳವಣೀಗೆಗಳು ನಡೆಯುತ್ತಲೇ ಇವೆ. ಈ ಹಿನ್ನಲೆಯಲ್ಲಿ ಹೈಕಮಾಂಡ್ ಸಿದ್ದರಾಮಯ್ಯಗೆ ಬುಲಾವ್ ನೀಡಿದೆ.

ಬೆಂಗಳೂರು, (ಜುಲೈ.26): ಮುಂದಿನ ಸಿಎಂ ವಿಚಾರವಾಗಿ ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಸುಕಿನ ಗುದ್ದಾಟಗಳು ಆರಂಭವಾಗಿವೆ. ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಮಧ್ಯೆ ತಿಕ್ಕಾಟ ಜೋರಾಗಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯ ಕಾಗ್ರೆಸ್‌ನಲ್ಲಿ ಆಗುತ್ತಿರುವ ಬೆಳವಣಿಗೆಗಳಿಂದ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿದೆ.

ಡಿಕೆ-ಸಿದ್ದು ಹೊರಾಟ ಹೋರಾಟ ಈಗ ಮತ್ತೊಂದು ತಿರುವು ಪಡೆದುಕೊಂಡಿದ್ದು, ಸಿದ್ದರಾಮಯ್ಯನವರ ಆಪ್ತ ಶಾಸಕ ಜಮೀರ್ ಅಹಮದ್ ಖಾನ್ ಈಗ ಡಿಕೆ ಶಿವಕುಮಾರ್ ವಿರುದ್ಧ ಸಮರಕ್ಕೆ ನಿಂತಿದ್ದಾರೆ. ಇನ್ನು ಇದಕ್ಕೆ ಡಿಕೆ ಶಿವಕುಮಾರ್ ತಮ್ಮ ವಿರುದ್ಧ ಧ್ವನಿ ಎತ್ತುತ್ತಿದ್ದವರಿಗೆ ಹೈಕಮಾಂಡ್ ಮೂಲಕವೇ ಉತ್ತರ‌‌ ಕೊಡಿಸುವುದಕ್ಕೆ ಮುಂದಾಗಿದ್ದಾರೆ.

ಡಿಕೆಶಿ ಜೊತೆ ಕಿತ್ತಾಟ, ಸಿದ್ದು ಆಪ್ತ ಜಮೀರ್ ಅಹಮದ್‌ಗೆ ಹೈಕಮಾಂಡ್ ಶಾಕ್

ಮುಖ್ಯವಾಗಿ ಸಿದ್ದರಾಮೋತ್ಸವ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವರಿಂದ ಆಪಕ್ಷೇಪಗಳು ವ್ಯಕ್ತವಾಗಿವೆ. ಇದರಿಂದ ಡಿಕೆಶಿ ಹಾಗೂ ಸಿದ್ದು ಬಣ ಮುನ್ನಲೆ ಬಂದಿದ್ದು, ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಜಗಜ್ಜಾಹಿರಾಗಿದೆ. ಇದನ್ನು ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದು, ಇದಕ್ಕೆ ಅಂತ್ಯಹಾಡಲು ಮುಂದಾಗಿದೆ.

ಸಿದ್ದುಗೆ ಹೈಕಮಾಂಡ್ ಬುಲಾವ್
ರಾಜ್ಯದಲ್ಲಿ ದಿನೇ ದಿನೇ ನಾಯಕರ ಮಧ್ಯೆ ಕಿತ್ತಾಟಗಳು ಗಮನಿಸಿದ ಹೈಕಮಾಂಡ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಹೈಕಮಾಂಡ್‌ ಬುಲಾವ್ ನೀಡಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಇಂದು(ಮಂಗಳವಾರ) ಸಂಜೆ ಅಥವಾ ನಾಳೆ ದೆಹಲಿಗೆ ತೆರಳಲಿದ್ದಾರೆ.ಅಲ್ಲಿ ರಾಹುಲ್ ಗಾಂಧಿ ಸೇರಿದಂತೆ ಇತರೆ ಹೈಕಮಾಂಡ್ ನಾಯಕರುಗಳನ್ನ ಭೇಟಿಯಾಗಲಿದ್ದಾರೆ.

 ಈ ವೇಳೆ ರಾಜ್ಯ ರಾಜಕಾರಣದ ಬಗ್ಗೆ ಗಂಭೀರವಾಗಿ ಚರ್ಚೆ ಮಾಡಲಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ತಮ್ಮ 75ನೇ ಜನ್ಮದಿನದ ಅಮೃತ ಮಹೋತ್ಸವಕ್ಕೆ ಆಹ್ವಾನ ನೀಡಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಅಲ್ಲದೇ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಮುಸುಕಿನ ಗುದ್ದಾಟಕ್ಕೆ ಬ್ರೇಕ್ ಹಾಕಲಿದೆ. 

ಜಮೀರ್‌ಗೆ ನೋಟಿಸ್
ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕೆಂದು ನೀಡಿದ ಎಚ್ಚರಿಕೆಯ ಬಳಿಕವೂ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೆ ನೀಡಿದ್ದ ಶಾಸಕ ಜಮೀರ್ ಅಹಮದ್ ಖಾನ್ ಗೆ ಹೈಕಮಾಂಡ್ ನೋಟಿಸ್ ನೀಡಿದ್ದು, ಅಲ್ಲದೇ ಹೇಳಿಕೆಗಳು ಹಿಡಿತದಲ್ಲಿರಲಿ ಎಂದು ಸೂಚಿಸಿದೆ.

ಜಮೀರ್ ಗೆ ಹೈಕಮಾಂಡ್ ನೀಡಿರುವ ನೋಟಿಸ್ ಈಗ ಪಕ್ಷದ ವಲಯದಲ್ಲಿ ಬೇರೆ ಬೇರೆ ಚರ್ಚೆಗೆ ಕಾರಣವಾಗಿದೆ. ಮೂಲ ಕಾಂಗ್ರೆಸಿಗರೆಲ್ಲರೂ ಸೇರಿ ಇಂಥದೊಂದು ಗಟ್ಟಿ ನಿರ್ಧಾರವನ್ನು ಹೈಕಮಾಂಡ್ ಮೂಲಕವೇ ಹೇಳಿಸಿದ್ದಾರೆಂದು ತಿಳಿದು ಬಂದಿದೆ. ಇಲ್ಲವಾದರೆ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಲು ಅವರ ಆಪ್ತರು ಇನ್ನಷ್ಟು ಮುಂದಾಗಬಹುದೆಂದು ಈ ತಡೆ ಹಾಕಲಾಗಿದೆ.