Congress guarantee: ಷರತ್ತುಗಳಿಲ್ಲದೆ ಐದೂ ಯೋಜನೆ ಜಾರಿಗೆ ಬರಲಿ: ಸಿ.ಸಿ. ಪಾಟೀಲ ಆಗ್ರಹ
ಪುಣ್ಯಕೋಟಿ ನಾಡಿನಲ್ಲಿ ಗ್ಯಾರಂಟಿ ಕಾರ್ಡ್ ಹಿಡಿದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ತಾವು ನುಡಿದಂತೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಷರತ್ತು ರಹಿತವಾಗಿ ಜಾರಿಗೆ ತರುವ ಮೂಲಕ ಜನರ ಆಶೋತ್ತರಗಳನ್ನು ಈಡೇರಿಸಬೇಕೆಂದು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಆಗ್ರಹಿಸಿದರು.
ನರಗುಂದ (ಜೂ.9) ಪುಣ್ಯಕೋಟಿ ನಾಡಿನಲ್ಲಿ ಗ್ಯಾರಂಟಿ ಕಾರ್ಡ್ ಹಿಡಿದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ತಾವು ನುಡಿದಂತೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಷರತ್ತು ರಹಿತವಾಗಿ ಜಾರಿಗೆ ತರುವ ಮೂಲಕ ಜನರ ಆಶೋತ್ತರಗಳನ್ನು ಈಡೇರಿಸಬೇಕೆಂದು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ(CC patil) ಆಗ್ರಹಿಸಿದರು.
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ(Congress guarantee plans) ಯೋಜನೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ಸಚಿವರಲ್ಲಿಯೇ ಅಪಸ್ವರ ಇದೆ. ಷರತ್ತುಗಳನ್ನು ಹಾಕದೇ ಗ್ಯಾರಂಟಿ ಯೋಜನೆಗಳನ್ನು ನೀಡಬೇಕು. ಅತಿಯಾದ ಷರತ್ತುಗಳು, ಕಂಡಿಷನ್ ಹಾಕಿದರೆ ಯೋಜನೆಗಳಿಂದ ವಂಚಿತರಾದ ಜನರು ಸರ್ಕಾರದ ವಿರುದ್ಧ ದಂಗೆ ಎಳಬಹುದು ಎಂಬ ಎಚ್ಚರಿಕೆ ನೀಡಿದರು.
ಗ್ಯಾರಂಟಿ ಭಾಗ್ಯಕ್ಕೆ ಸಿದ್ದು ಸರ್ಕಾರ ಅಸ್ತು: ಈಗಿಂದ ಹೇಗೆ ಬದಲಾಗಲಿದೆ ರಾಜ್ಯದ ಭವಿಷ್ಯ ?
ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಯಾವುದೇ ಷರತ್ತುಗಳಿಲ್ಲದೇ ತಮ್ಮ ಕಿಸೆಯಲ್ಲಿನ ಹಣ ತೆಗೆದುಕೊಟ್ಟಹಾಗೆ ನನಗೂ ಫ್ರೀ, ನಿನಗೂ ಫ್ರೀ ಎಂದು ಐದು ಯೋಜನೆಗಳನ್ನು ಗ್ಯಾರಂಟಿ ಕೊಡುತ್ತೇವೆಂದು ಹೇಳಿದ್ದರು. ಆದರೆ ಈಗ ಮೇಲಿಂದ ಮೇಲೆ ಷರತ್ತುಗಳನ್ನು ಹಾಕುತ್ತಾ ಮತ ನೀಡಿದ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆಂದು ಖಂಡಿಸಿದರು.
ಮಾಜಿ ಸಚಿವ ಬಿ.ಆರ್.ಯಾವಗಲ್ಲ ವಿರುದ್ಧ 6 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ 4 ಬಾರಿ ಗೆಲುವು ಕಂಡಿದ್ದೇನೆ. ಪ್ರಥಮ ಬಾರಿಗೆ ಜೆಡಿಎಸ್ ಅಭ್ಯರ್ಥಿಯಾಗಿ ಮತ್ತು 2013ರಲ್ಲಿ ಗುಂಡು ತಗುಲಿ ನಾನು ಆಸ್ಪತ್ರೆಯಲ್ಲಿದ್ದೆ. ಚುನಾವಣೆಯಲ್ಲಿ ನೇರವಾಗಿ ಭಾಗವಹಿಸಿರಲಿಲ್ಲ. ಹೀಗೆ ಎರಡು ಬಾರಿ ನಾನು ಸೋಲನ್ನು ಕಂಡಿದ್ದೇನೆ. ಬಿ.ಆರ್. ಯಾವಗಲ್ಲ ಅವರಿಗೆ ನನ್ನ ವಿರುದ್ಧ ನೇರವಾಗಿ ಎದುರಿಸಿ ಗೆಲ್ಲೋಕೆ ಆಗಿಲ್ಲ. ಈ ಬಾರಿಯೂ ಸೋತಿದ್ದಾರೆ. ಅಂತಹವರು ನಾನು ಶಾಸಕನಾಗಿರುವ ಕ್ಷೇತ್ರದ ವಿವಿಧ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡುವುದು ಅವರಿಗೆ ಗೌರವ ತಂದು ಕೊಡುವುದಿಲ್ಲ. ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡಲು ತಾವ್ಯಾರು? ತಮಗೇನು ಹಕ್ಕಿದೆ? ತಾವೇನು ಸಂವಿಧಾನ ಬದ್ಧ ಶಾಸಕರಾಗಿದ್ದೀರಾ? ಎಂಬ ಪ್ರಶ್ನೆ ಹಾಕಿದರು.
ಗ್ಯಾರಂಟಿ ಘೋಷಣೆ ಮಾಡೋವಾಗ ಕಂಡಿಷನ್ ಇರಲಿಲ್ಲ ಈಗ್ಯಾಕೆ? ಉತ್ತರ ಕೊಡದೇ ಜಾರಿಕೊಂಡ ಡಿಕೆಶಿ
ರೋಣ ತಾಲೂಕಿನ 33 ಹಳ್ಳಿಗಳು ನರಗುಂದ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತವೆ. ಹಾಗಂದ ಮಾತ್ರಕ್ಕೆ ಅವುಗಳೇನೂ ರೋಣ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಂಬಂಧಿಸುವುದಿಲ್ಲ. ಜಿ.ಎಸ್. ಪಾಟೀಲ ಸರ್ಕಾರ ತಮ್ಮದಿದೆ ಎಂದುಕೊಂಡು ನರಗುಂದ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಬಾರದು. ಗೌರವಾನ್ವಿತ ರಾಜಕಾರಣ ಮಾಡಬೇಕು. ಮತಕ್ಷೇತ್ರದ ಬಗ್ಗೆ ಅಷ್ಟೊಂದು ಕಾಳಜಿ ಇರುವ ಯಾವಗಲ್ಲ ತಮ್ಮದೇ ಕಾಂಗ್ರೆಸ್ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡಬೇಕೆಂದು ಹೇಳಿದರು.
ಈ ವೇಳೆ ಅಜ್ಜನಗೌಡ ಪಾಟೀಲ, ಶಿವನಗೌಡ ಕರಿಗೌಡ್ರ, ಚಂಬಣ್ಣ ವಾಳದ, ಸಂಭಾಜಿ ಕಾಶೀದ, ಬಿ.ಬಿ. ಐನಾಪುರ, ಉಮೇಶಗೌಡ ಪಾಟೀಲ, ಚಂದ್ರು ದಂಡಿನ, ಮಹೇಶ ಹಟ್ಟಿ, ಪ್ರಕಾಶ ಪಟ್ಟಣಶೆಟ್ಟಿ, ಮಂಜುನಾಥ ಮೆಣಸಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.