ರಾಮನಗರದಲ್ಲಿ ರಾಮಮಂದಿರ ಕಟ್ಟಲು ಕಾಂಗ್ರೆಸ್ ಸರ್ಕಾರದಿಂದ ಆಗುವುದಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದಂತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆಯೇ ರಾಮನಗರದಲ್ಲಿಯೂ ರಾಮಮಂದಿರ ನಿರ್ಮಿಸುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿದರು.   

ರಾಮನಗರ (ಜ.19): ರಾಮನಗರದಲ್ಲಿ ರಾಮಮಂದಿರ ಕಟ್ಟಲು ಕಾಂಗ್ರೆಸ್ ಸರ್ಕಾರದಿಂದ ಆಗುವುದಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದಂತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆಯೇ ರಾಮನಗರದಲ್ಲಿಯೂ ರಾಮಮಂದಿರ ನಿರ್ಮಿಸುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿದರು. ನಗರದಲ್ಲಿ ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ಹೇಳುತ್ತಿರುವುದು ಚುನಾವಣಾ ಗಿಮಿಕ್ ಎಂಬುದು ಎಲ್ಲರಿಗೂ ಗೊತ್ತಿದೆ. ರಾಮಮಂದಿರವನ್ನು ಕಾಂಗ್ರೆಸ್‌ನವರಲ್ಲ, ಬಿಜೆಪಿಯವರು ಕಟ್ಟುವ ತೀರ್ಮಾನ ಮಾಡೋಣ ಎಂದರು.

ಶ್ರೀರಾಮ ಮಂದಿರ ಕಟ್ಟ ಬಾರದೆಂದು ಸುಧೀರ್ಘವಾದ ಕಾನೂನು ಹೋರಾಟ ಮಾಡಿದವರು, ಮಂದಿರದ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸದವರು ಹಾಗೂ ನಾಡಿನ ನೆಲ, ಜಲ, ಸಂಸ್ಕೃತಿಯ ಬೇರು ಕೀಳಲು ಪ್ರಯತ್ನಿಸಿದ ಕಾಂಗ್ರೆಸ್ ನಾಯಕರು ರಾಮಮಂದಿರ ಕಟ್ಟುವ ಮಾತುಗಳನ್ನಾಡುತ್ತಿರುವುದು ಹಾಸ್ಯಾಸ್ಪದ. ಇದು ಚುನಾವಣಾ ಗಿಮಿಕ್ ಅಂತ ಎಲ್ಲರಿಗೂ ಗೊತ್ತಿದೆ ಎಂದು ಟೀಕಿಸಿದರು. ಬಿಜೆಪಿ ಸರ್ಕಾರದ ರಾಮ ಮಂದಿರ ನಿರ್ಮಾಣಕ್ಕೆ ರೂಪುರೇಷೆ ಸಿದ್ಧಪಡಿಸಲಾಗಿದೆ. ಮುಂದೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮಂದಿರ ನಿರ್ಮಿಸುವ ಕಾರ್ಯ ಮಾಡುತ್ತೇವೆ. ಪಕ್ಷದಲ್ಲಿ ಅನೇಕ ಮುಖಂಡರಿದ್ದರೂ ಪಕ್ಷ ಸಂಘಟನೆಯಲ್ಲಿ ಹಿಂದುಳಿದಿದ್ದೇವೆ. 

'ಶ್ರೀರಾಮ ಕರೆ ಕಳಿಸಿದ್ದಾನೆ; ಇದು ನನ್ನ ಪೂರ್ವ ಜನ್ಮದ ಪುಣ್ಯ': ಅಯೋಧ್ಯೆಯ ಆಹ್ವಾನದ ಬಗ್ಗೆ ರಿಷಬ್ ಶೆಟ್ಟಿ ಮಾತುಗಳಿವು!

ಎಲ್ಲರು ನೂತನ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಜೊತೆ ನಿಂತು ಪಕ್ಷ ಸಂಘಟನೆ ಕೊರತೆ ನೀಗಿಸಬೇಕು. ಜೆಡಿಎಸ್ ನವರು ಬಿಜೆಪಿ ಗೆಲ್ಲಿಸಲು ದೃಢ ನಿರ್ಧಾರ ಮಾಡಿದ್ದು, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ನೂತನ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಭಾವುಕ ವ್ಯಕ್ತಿ. ಪ್ರಾಮಾಣಿಕ ಕಾರ್ಯಕರ್ತ. ಅದನ್ನು ಗುರುತಿಸಿ ಪಕ್ಷದ ವರಿಷ್ಠರು ನಿಷ್ಠೆ ಪ್ರಾಮಾಣಿಕತೆ ಗುರುತಿಸಿ ಜವಾಬ್ದಾರಿ ನೀಡಿದ್ದಾರೆ. ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಮಂದಿ ಅರ್ಜಿ ಹಾಕಿದ್ದರು. ಅವರೆಲ್ಲರು ಅರ್ಹರೆ ಆಗಿದ್ದಾರೆ. ಅವಕಾಶ ಸಂದರ್ಭಕ್ಕೆ ತಕ್ಕಂತೆ ಬರುತ್ತದೆ. ಅದಕ್ಕಾಗಿ ಕಾಯಬೇಕು. ಇದು ಯುದ್ಧದ ಸಂದರ್ಭ ಎಲ್ಲರು ಉತ್ಸುಕರಾಗಿ ಕೆಲಸ ಮಾಡೋಣ ಎಂದು ಯೋಗೇಶ್ವರ್ ಕರೆನೀಡಿದರು.

ಎಲ್ಲರನ್ನು ವಿಶ್ವಾಸಕ್ಕೆ ಪಡೆಯಿರಿ : ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ ಮಾತನಾಡಿ, ಆರು ತಿಂಗಳಿಂದ ಪಕ್ಷದ ಕಾರ್ಯಕರ್ತರು ಮಂಕು ಕವಿದಂತೆ ಇದ್ದರು. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಅವರಲ್ಲಿ ಸಂಚಲನ ಮೂಡಿದೆ. ಉತ್ಸಾಹಿದಾಯಕರಾಗುವಂತೆ ಕಾರ್ಯಕರ್ತರಿಗೆ ಪ್ರೇರಣೆ ನೀಡುತ್ತಾ ಸಕ್ರಿಯರಾಗಿ ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಮಾಡಿದ್ದಾರೆ ಎಂದರು. ಬಿಜೆಪಿ ರಾಮನಗರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆನಂದ ಸ್ವಾಮಿರವರ ಹೆಸರು ದಕ್ಷಿಣಯಾನದಲ್ಲಿ ಘೋಷಣೆಯಾಗಿ, ಉತ್ತರಯಾನದಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಉತ್ತರಯಾನ ಅಂದರೆ ಉತ್ತಮವಾದ ಕಾಲದಲ್ಲಿ ಆನಂದ ಸ್ವಾಮಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. 

ಪಕ್ಷದ ಧ್ವಜದ ಅಡಿಯಲ್ಲಿ ಅಧ್ಯಕ್ಷರಾಗಿ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡಬೇಕು. ನನ್ನ ಅಥವಾ ಯಾವುದೋ ನಾಯಕನ ಬೆನ್ನು ಬೀಳಬಾರದು ಎಂದು ಕಿವಿಮಾತು ಹೇಳಿದರು. ಜಿಲ್ಲಾ, ಮಂಡಲ ಸಮಿತಿ, ಮೋರ್ಚಾ, ಪ್ರಕೋಷ್ಠಗಳನ್ನು ರಚನೆ ಮಾಡಿಕೊಳ್ಳಿ. ವಾರದಲ್ಲಿ ಒಂದೊಂದು ತಾಲೂಕಿಗೆ ಪ್ರವಾಸ ಕೈಗೊಂಡು ಕಾರ್ಯಕರ್ತರ ಅಹವಾಲು ಆಲಿಸಿ ವಿಶ್ವಾಸಕ್ಕೆ ಪಡೆಯುವ ಕೆಲಸ ಮಾಡಬೇಕು. ವಿಪಕ್ಷದಲ್ಲಿದ್ದಾಗ ಹೋರಾಟಕ್ಕೆ ವಿಫುಲ ಅವಕಾಶಗಳು ಇರುತ್ತವೆ. ರೈತರು, ಮಹಿಳೆ, ಮಕ್ಕಳು, ಸಮಾಜದ ಕಟ್ಟಡ ಕಡೆಯ ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿ, ಪಕ್ಷ ಸಂಘಟಿಸಿದರೆ ಜನರನ್ನು ನಿಮ್ಮನ್ನು ಗುರುತಿಸುತ್ತಾರೆ. ಆಗ ಪಕ್ಷವೂ ಬೆಳೆಯುತ್ತದೆ ಎಂದು ತಿಳಿಸಿದರು.

ಜಿಲ್ಲಾ ಪ್ರಭಾರ ವಿಜಯ್ ಕುಮಾರ್ ಮಾತನಾಡಿ, ಶೀಘ್ರದಲ್ಲಿಯೇ ಸಂಸತ್ ಚುನಾವಣೆ ಎದುರಾಗಲಿದೆ. ಅದಕ್ಕಾಗಿ ಬೂತ್ ಮಟ್ಟದಿಂದಲೇ ಪಕ್ಷ ಸಂಘಟಿಸುವ ಕೆಲಸ ಆಗಬೇಕು. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಕಾಣಿಕೆಯಾಗಿ ನೀಡಬೇಕು ಎಂದು ಹೇಳಿದರು. ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಮಾತನಾಡಿ, ನಾನು ಸಾಮಾನ್ಯ ಕಾರ್ಯಕರ್ತನಾಗಿದ್ದವನು. ನನ್ನ ಸೇವೆ ಗುರುತಿಸಿ ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿದ ವರಿಷ್ಠರಿಗೆ ಆಭಾರಿಯಾಗಿದ್ದೇನೆ. ವರಿಷ್ಠರು ನನ್ನ ಮೇಲಿಟ್ಟಿರುವ ನಂಬಿಕೆ ಹುಸಿಯಾಗದಂತೆ ಪ್ರತಿ ಬೂತ್ ಗೂ ಭೇಟಿ ನೀಡಿ ಪಕ್ಷ ಸಂಘಟಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜುರವರು ಪಕ್ಷದ ಧ್ವಜವನ್ನು ನೂತನ ಜಿಲ್ಲಾಧ್ಯಕ್ಷ ಆನಂದ ಸ್ವಾಮಿರವರಿಗೆ ನೀಡಿ ಅಧಿಕಾರ ಹಸ್ತಾಂತರ ಮಾಡಿದರು. ಪಕ್ಷದ ಹಿರಿಯ ಮುಖಂಡರು ಹಾಗೂ ಕರ ಸೇವಕರನ್ನು ಅಭಿನಂದಿಸಲಾಯಿತು. ಬಿಜೆಪಿ ಮುಖಂಡರಾದ ಗೌತಮ್ ಗೌಡ, ಪ್ರಸಾದ್ ಗೌಡ,ಧನಂಜಯ್ಯ, ಮಲವೇಗೌಡ, ಮುರಳೀಧರ್, ರುದ್ರದೇವರು, ಸುರೇಶ್, ಎಸ್.ಆರ್.ನಾಗರಾಜು, ಶಿವಾನಂದ, ಜಯರಾಮು, ಗೋಪಾಲ್, ಪುಣ್ಯವತಿ, ರವೀಶ್ ಎಲೇಕೆರೆ, ಚಂದ್ರು, ವೀಣಾ, ಚಂದ್ರಶೇಖರ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರೇ ಆಗಲಿ ನಮ್ಮಲ್ಲಿ ಭಿನ್ನಾಭಿಪ್ರಾಯ ಇಲ್ಲ. ಈ ಬಾರಿ ಬಿಜೆಪಿ ಸಂಸದರು ಆಯ್ಕೆಯಾಗಲೇ ಬೇಕು. ಆಗ ಮಾತ್ರ ಹಲವಾರು ಯೋಜನೆಗಳನ್ನು ತರಲು ಸಾಧ್ಯವಾಗಲಿದೆ. ಆ ಮೂಲಕ ಜಿಲ್ಲೆಯ ಚಿತ್ರಣ ಬದಲಾಗಲಿದೆ.
- ಸಿ.ಪಿ.ಯೋಗೇಶ್ವರ್, ಸದಸ್ಯರು, ವಿಧಾನ ಪರಿಷತ್

ಒಂದು ವರ್ಗದ ಓಲೈಕೆಗೆ ಕಾಂಗ್ರೆಸ್ ರಾಮಮಂದಿರಕ್ಕೆ ವಿರೋಧ: ಶೋಭಾ ಕರಂದ್ಲಾಜೆ

ಬೆಂಗಳೂರು ಪದವೀಧರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆಗೆ ಕಾರ್ಯಪ್ರವೃತ್ತರಾಗಿ ಗೆದ್ದು ಸಂಸತ್ ಚುನಾವಣೆ ಗೆ ಅಣಿಯಾಗಬೇಕಿದೆ. ಈ ಬಾರಿ ಗೆಲ್ಲುವ ಪಟ್ಟಿಯಲ್ಲಿ ಬೆಂಗಳೂರು ಗ್ರಾಮಾಂತರ ಸಂಸತ್ ಕ್ಷೇತ್ರವೂ ಸೇರಿದೆ. ರಾಜ್ಯ ವರಿಷ್ಠರು ಜಿಲ್ಲೆಯ ಕಾರ್ಯಕರ್ತರ ಮೇಲೆ ನಂಬಿಕೆ ಇಟ್ಟಿದ್ದಾರೆ. ಭಿನ್ನಾಭಿಪ್ರಾಯಗಳನ್ನು ಮರೆತು ಸಂಸತ್ ಚುನಾವಣೆಯಲ್ಲಿ ಮೋದಿರವರ ಕೈ ಬಲಪಡಿಸುವ ಕೆಲಸ ಮಾಡೋಣ.
-ಅಶ್ವತ್ಥ್ ನಾರಾಯಣಗೌಡ, ರಾಜ್ಯ ಮುಖ್ಯ ವಕ್ತಾರರು, ಬಿಜೆಪಿ