ತೀವ್ರ ಗೊಂದಲವಾಗಿದ್ದ ಬೆಂಗಳೂರಿನ  ಯಶವಂತಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕೊನೆಗೂ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸಿದೆ. ರಾಜಕುಮಾರ್  ಸ್ಪರ್ಧಿಸಲು ಹಿಂದೇಟು ಹಾಕಿದ್ದರಿಂದ ಕೊನೆಗಳಿಯಲ್ಲಿ ಅಚ್ಚರಿ ಅಭ್ಯರ್ಥಿಗೆ ಮಣೆಹಾಕಿದೆ. 

ಬೆಂಗಳೂರು(ನ.17): ಕಗ್ಗಂಟಾಗಿದ್ದ ಯಶವಂತಪುರ ಉಪಚುನಾವಣೆ ಅಭ್ಯರ್ಥಿಯನ್ನು ಕಾಂಗ್ರೆಸ್ ಅಂತಿಮಗೊಳಿಸಿದ್ದು, ಪಿ. ನಾಗರಾಜ್​ ಎಂಬುವರನ್ನು ಕಣಕ್ಕಿಳಿಸಿದೆ. 

ಯಶವಂತಪುರ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಗೆ ಅಭ್ಯರ್ಥಿಯಾಗಿ ಪಿ.ನಾಗರಾಜ್ ಅವರನ್ನು ಆಯ್ಕೆ ಮಾಡಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು [ಭಾನುವಾರ] ಆದೇಶ ಹೊರಡಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ 15 ಕ್ಷೇತ್ರಗಳಿಗೂ ಅಭ್ಯರ್ಥಿಗಳು ಫೈನಲ್ ಆಗಿದೆ.

ಡಿಕೆಶಿ ನೇತೃತ್ವದ ಸಭೆ ಅಂತ್ಯ: ಯಶವಂತಪುರ ಕ್ಷೇತ್ರಕ್ಕೆ ಅಚ್ಚರಿ ಹೆಸರು

ಆರಂಭದಲ್ಲಿ ರಾಜಕುಮಾರ್​​ ಎನ್ನುವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ಆದ್ರೆ, ರಾಜಕುಮಾರ್ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕಿದ್ದರಿಂದ ಕೊನೆಗಳಿಯಲ್ಲಿ ನಾಗರಾಜ್ ಪಾಳ್ಯ ಅವರನ್ನು ಅಂತಿಮಗೊಳಿಸಲಾಗಿದೆ.

15 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿ ಯಶವಂತಪುರ ಅಭ್ಯರ್ಥಿಯನ್ನು ಮಾತ್ರ ಬಾಕಿ ಉಳಿಸಿಕೊಂಡಿತ್ತು. ಈಗ ಅಳೆದು ತೂಗಿ ವಿಜಯನಗರ ಕಾಂಗ್ರೆಸ್ ಶಾಸಕ ಎಂ.ಕೃಷ್ಣಪ್ಪ ಅವರ ಬೆಂಬಲಿಗ ನಾಗರಾಜ್ ಅವರಿಗೆ ಟಿಕೆಟ್ ನೀಡಲಾಗಿದೆ.​

Scroll to load tweet…

ಆರಂಭದಲ್ಲಿ ಯಾರನ್ನು ಕಣಕ್ಕಿಸಬೇಕೆಂದು ಕಾಂಗ್ರೆಸ್ ಗೆ ದೊಡ್ಡ ತಲೆನೋವಾಗಿತ್ತು. ಯಶವಂತಪುರದಲ್ಲಿ ಒಕ್ಕಲಿಗ ಮತಗಳ ಅಧಿಕವಾಗಿದ್ದರಿಂದ ಅದೇ ಸಮುದಾಯದ ಪ್ರಿಯಾಕೃಷ್ಣ ಅವರನ್ನು ಅಖಾಡಕ್ಕಿಳಿಸಲು ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರ ಆಸೆಯಾಗಿತ್ತು.

ಆದ್ರೆ, ಪ್ರಿಯಾಕೃಷ್ಣ ಸ್ಪರ್ಧೆಗೆ ತಂದೆ ಎಂ.ಕೃಷ್ಣಪ್ಪ ರೆಡ್ ಸಿಗ್ನಲ್ ತೋರಿದ್ದರು. ಈ ಹಿನ್ನೆಲೆಯಲ್ಲಿ ಯಶವಂತಪುರ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್ ಗೆ ಮತ್ತಷ್ಟು ಕಗ್ಗಂಟಾಗಿತ್ತು. 

ಇನ್ನು ಬಿಜೆಪಿಯಿಂದ ಕಾಂಗ್ರೆಸ್ ನಿಂದ ಅನರ್ಹಗೊಂಡಿರುವ ಶಾಸಕ ಎಸ್.ಟಿ.ಸೋಮಶೇಖರ್ ಅವರು ಸ್ಪರ್ಧೆಯಲ್ಲಿದ್ರೆ, ಜೆಡಿಎಸ್ ನಿಂದ ಜವಾರಾಯಿಗೌಡ ಅಖಾಡದಲ್ಲಿದ್ದಾರೆ.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.