Asianet Suvarna News Asianet Suvarna News

ಜ.8ಕ್ಕೆ ಚಿತ್ರದುರ್ಗದಲ್ಲಿ ಕಾಂಗ್ರೆಸ್‌ ದಲಿತ ರ್‍ಯಾಲಿ

ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್‌ ಸುರ್ಜೆವಾಲಾ ಹಾಗೂ ರಾಜ್ಯ ನಾಯಕರು ಭಾಗಿ 

Congress Dalit rally Will be Held on January 8th in Chitradurga grg
Author
First Published Dec 8, 2022, 3:30 AM IST

ಬೆಂಗಳೂರು(ಡಿ.08):  ದಲಿತರ ಬಗ್ಗೆ ತೋರಿಕೆಯ ಪ್ರೀತಿ ತೋರುವ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳ ಡ್ರಾಮಾಗಳಿಗೆ ಮರುಳಾಗಬೇಡಿ ಎಂದು ಕರೆ ನೀಡಲು ಮತ್ತು ನಿಮ್ಮ ಜತೆ ನಾವಿದ್ದೇವೆ ಎಂದು ಭರವಸೆ ನೀಡಲು ಜ.8ರಂದು ಚಿತ್ರದುರ್ಗದಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡಗಳ ಬೃಹತ್‌ ‘ಐಕ್ಯತಾ ಸಮಾವೇಶ’ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ, ಮಾಜಿ ಸಚಿವರಾದ ಡಾ.ಎಚ್‌.ಸಿ.ಮಹದೇವಪ್ಪ, ಎಚ್‌.ಆಂಜನೇಯ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಕಾಂಗ್ರೆಸ್‌ ಪಕ್ಷ ಸದಾ ಶೋಷಿತ ವರ್ಗಗಳಿಗೆ ಬೆಂಬಲ ನೀಡುತ್ತಲೇ ಬಂದಿದೆ. ಬೇರೆ ಪಕ್ಷಗಳು ಪರಿಶಿಷ್ಟರನ್ನು ನಿರ್ಲಕ್ಷಿಸಿದ್ದು, ಪಕ್ಷದ ಕಚೇರಿಯಲ್ಲಿ ಅಂಬೇಡ್ಕರ್‌ ಫೋಟೋ ಇಡದವರು ಇದೀಗ ಚುನಾವಣೆಗಾಗಿ ದಲಿತರನ್ನು ಓಲೈಸಲು ಮುಂದಾಗಿದ್ದಾರೆ. ದಲಿತರ ಮನೆಗಳಲ್ಲಿ ಮಲಗುತ್ತಾ, ಬೇರೆ ಹೋಟೆಲ್‌ನಿಂದ ತರಿಸಿದ ಊಟವನ್ನು ದಲಿತರ ಮನೆಯಲ್ಲಿ ತಿನ್ನುತ್ತಾ ನಾಟಕ ಮಾಡುತ್ತಿದ್ದಾರೆ. ಈ ಡ್ರಾಮಾಗಳಿಗೆ ಮರುಳಾಗಬೇಡಿ ಎಂದು ಹೇಳಲು ಹಾಗೂ ನಿಮ್ಮ ಯೋಗಕ್ಷೇಮ ನೋಡಲು ನಾವಿದ್ದೇವೆ ಎಂದು ಹೇಳಲು ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ಭಿನ್ನಾಭಿಪ್ರಾಯ ಬಿಟ್ಟು ಕಾಂಗ್ರೆಸ್‌ ಗೆಲುವಿಗೆ ಶ್ರಮಿಸಿ : ಮುನಿಯಪ್ಪ

5 ಲಕ್ಷ ಜನರನ್ನು ಸೇರಿಸುವ ಗುರಿ:

ಎಲ್ಲಾ ಪರಿಶಿಷ್ಟಸಮುದಾಯ (101 ಎಸ್ಸಿ, 52 ಎಸ್ಟಿ) ಒಂದೇ ವೇದಿಕೆಯಲ್ಲಿ ಸೇರಬೇಕು. ಎರಡೂ ಸಮುದಾಯಗಳಿಂದ 1.5 ಕೋಟಿ ಜನಸಂಖ್ಯೆಯಿದ್ದು, ಕನಿಷ್ಠ 5 ಲಕ್ಷ ಜನರನ್ನು ಸಮಾವೇಶಕ್ಕೆ ಸೇರಿಸಬೇಕು. ತನ್ಮೂಲಕ ದಲಿತರನ್ನು ನಿರ್ಲಕ್ಷಿಸುವವರಿಗೆ ಬಿಸಿ ಮುಟ್ಟಿಸಬೇಕು ಎಂದು ತೀರ್ಮಾನಿಸಿದ್ದೇವೆ. ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್‌ ಸುರ್ಜೆವಾಲಾ ಹಾಗೂ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಯವರಲ್ಲಿ ಯಾರಾದರೂ ಒಬ್ಬರನ್ನು ಭಾಗವಹಿಸುವಂತೆ ಮನವಿ ಮಾಡುತ್ತೇವೆ ಎಂದು ಪರಮೇಶ್ವರ್‌ ತಿಳಿಸಿದರು.

ಮೀಸಲಾತಿ ಭಿಕ್ಷೆಯಲ್ಲ, ಹಕ್ಕು:

ಪ್ರಸ್ತುತ ಎಸ್ಸಿ ಹಾಗೂ ಎಸ್ಟಿಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ಮಾಡಿರುವುದಾಗಿ ಬಿಜೆಪಿಯವರು ಬೊಬ್ಬೆ ಹೊಡೆಯುತ್ತಿದ್ದಾರೆ. ಇದಕ್ಕೆ ಅಡಿಪಾಯ ಹಾಕಿದ್ದೇ ನಾವು. ಸಮ್ಮಿಶ್ರ ಸರ್ಕಾರದಲ್ಲಿ ನಾಗಮೋಹನ್‌ದಾಸ್‌ ಸಮಿತಿ ರಚಿಸಿದ್ದರಿಂದ ವರದಿ ಆಧರಿಸಿ ಈ ಕ್ರಮ ಆಗಿದೆ. ಇದೂ ಸಹ ಕಣ್ಣೊರೆಸುವ ತಂತ್ರವಾಗಿದ್ದು, ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇವೆ. ಜತೆಗೆ ಅಸ್ಪೃಶ್ಯತೆ ಎಲ್ಲಿಯವರೆಗೂ ಇರುತ್ತದೆಯೋ ಅಲ್ಲಿಯವೆಗೂ ಮೀಸಲಾತಿ ಇರಬೇಕು ಎಂದು ಒತ್ತಾಯಿಸುತ್ತೇವೆ ಎಂದರು.

ಜತೆಗೆ ವಸತಿ ನಿರ್ಮಾಣ, ವಿದ್ಯಾರ್ಥಿವೇತನ ತಡೆ ಹಿಡಿರುವುದು, ಹಲವು ಕಡೆ ಮೀಸಲಾತಿ ನಿಯಮ ಪಾಲಿಸದಿರುವುದು ಎಲ್ಲವನ್ನೂ ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು. ದಲಿತರ ಓಲೈಕೆ ಪ್ರಯತ್ನವೇ ಎಂಬ ಪ್ರಶ್ನೆಗೆ, ‘ನಾವೇ ದಲಿತರಾಗಿದ್ದು, ನಾವು ಯಾರನ್ನೂ ಓಲೈಸುವ ಅಗತ್ಯವಿಲ್ಲ. ದಲಿತರ ಮೇಲಿನ ದೌರ್ಜನ್ಯ, ಹತ್ಯೆ ತಡೆದು ರಕ್ಷಣೆ ನೀಡುವುದರಲ್ಲಿ ಸರ್ಕಾರ ವಿಫಲವಾಗಿದೆ. ಹೀಗಾಗಿ ದಲಿತರ ರಕ್ಷಣೆ ನಮ್ಮ ಅಜೆಂಡಾ. ಅದರ ಅನುಷ್ಠಾನಕ್ಕೆ ಆಗ್ರಹಿಸಿ ಐ್ಯಕ್ಯತಾ ಸಮಾವೇಶ’ ಎಂದು ಸ್ಪಷ್ಟಪಡಿಸಿದರು.

ನಾವೆಲ್ಲಾ ಒಂದಾಗಬೇಕು-ಮುನಿಯಪ್ಪ:

ಕೆ.ಎಚ್‌. ಮುನಿಯಪ್ಪ ಮಾತನಾಡಿ, ಪರಿಶಿಷ್ಟರನ್ನು ಒಡೆದು ಆಳುವ ವ್ಯವಸ್ಥೆಯನ್ನು ಬಿಜೆಪಿ ರೂಪಿಸುತ್ತಿದೆ. ಹೀಗಾಗಿ ನಾವು ಒಂದಾಗಬೇಕು. ಎಸ್ಸಿಯ 101 ಜಾತಿ, ಎಸ್ಟಿಯ 52 ಸಮುದಾಯ ಒಂದಾಗಲು ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ಒಂದೇ ಪಕ್ಷದ ಜತೆ ಇರಬೇಕು ಎಂಬ ಸಂದೇಶ:

ಸತೀಶ್‌ ಜಾರಕಿಹೊಳಿ ಮಾತನಾಡಿ, ಪರಿಶಿಷ್ಟಸಮುದಾಯದವರು ಎಲ್ಲರೂ ಒಂದಾಗಬೇಕು ಹಾಗೂ ಒಂದೇ ವೇದಿಕೆಯಲ್ಲಿ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕು ಎಂದು ತೀರ್ಮಾನಿಸಲಾಗಿದೆ. ಸಿದ್ದರಾಮಯ್ಯ ಅವರ ಕಾಲದಲ್ಲಿ ಈ ವರ್ಗಕ್ಕೆ ಸಿಕ್ಕಿದ್ದ ಯೋಜನೆ ಮತ್ತೆ ಜಾರಿ ಆಗಬೇಕು ಎಂದು ಆಗ್ರಹಿಸುತ್ತೇವೆ. ನಾವೆಲ್ಲ ಒಗ್ಗಟ್ಟಾಗಿ ಇರಬೇಕು, ಒಂದೇ ಪಕ್ಷದ ಜತೆ ಇರಬೇಕು ಎಂಬ ಸಂದೇಶ ರವಾನಿಸುತ್ತೇವೆ ಎಂದು ಹೇಳಿದರು.

ಸಿದ್ದರಾಮಯ್ಯ ಯಾವುದೆ ಕ್ಷೇತ್ರದಲ್ಲಿ ನಿಂತ್ರೂ ಅವರನ್ನ ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ: ರೂಪಾ ಶಶಿಧರ್

ಸಿಎಂ ಆಗಲು ನಾವೆಲ್ಲ ಅರ್ಹ: ಪರಂ

ದಲಿತರಲ್ಲಿ ಮುಖ್ಯಮಂತ್ರಿ ಆಗುವ ಅರ್ಹತೆ ಇಲ್ಲವೇ ಎಂಬ ಪ್ರಶ್ನೆಗೆ, ‘ಮುಖ್ಯಮಂತ್ರಿಯಾಗಲು ನಾವೆಲ್ಲರೂ ಅರ್ಹರಿದ್ದೇವೆ. ಸಮಯ ಬಂದಾಗ ಅದನ್ನು ಹೈಕಮಾಂಡ್‌ ಗಮನಕ್ಕೆ ತರುತ್ತೇವೆ. ಕಾಂಗ್ರೆಸ್‌ ನಮಗೆ ರಕ್ಷಣೆ ನೀಡಿದೆ. ನಾವೆಲ್ಲರೂ ಪಕ್ಷದ ನಿಯಮಗಳಿಗೆ ಬದ್ಧರಾಗಿದ್ದು, ಮೊದಲು ಪಕ್ಷವನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿ ವಿಚಾರ ಹೈಕಮಾಂಡ್‌ಗೆ ಬಿಡೋಣ’ ಎಂದು ಡಾ.ಜಿ.ಪರಮೇಶ್ವರ್‌ ಹೇಳಿದರು.

ಏಕೆ ಈ ಸಮಾವೇಶ?

- ಕಾಂಗ್ರೆಸ್‌ ಸದಾ ಶೋಷಿತ ವರ್ಗಗಳಿಗೆ ಬೆಂಬಲ ನೀಡುತ್ತಿದೆ
- ಬಿಜೆಪಿ, ದಳ ದಲಿತರ ಬಗ್ಗೆ ತೋರಿಕೆಯ ಪ್ರೀತಿ ತೋರುತ್ತಿವೆ
- ಆ ಡ್ರಾಮಾಗಳಿಗೆ ಮರುಳಾಗಬೇಡಿ ಎಂದು ತಿಳಿಸಿ ಹೇಳಲು
- ನಿಮ್ಮ ಜತೆ ನಾವಿದ್ದೇವೆ ಎಂದು ಹೇಳಲು: ಡಾ. ಪರಮೇಶ್ವರ್‌
 

Follow Us:
Download App:
  • android
  • ios