ಬೆಂಗಳೂರು(ಅ.28): ಬಿಜೆಪಿ ಪಕ್ಷದ ರಾಜರಾಜೇಶ್ವರಿ ನಗರ ಕ್ಷೇತ್ರದ ಅಭ್ಯರ್ಥಿ ಮುನಿರತ್ನ ಹಾಗೂ ಶಿರಾ ಕ್ಷೇತ್ರದ ಅಭ್ಯರ್ಥಿ ಡಾ.ರಾಜೇಶ್‌ ಗೌಡ ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಮತ್ತು ಚುನಾವಣಾ ಅಕ್ರಮಗಳಲ್ಲಿ ಭಾಗಿಯಾಗಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ಸೂರು ನೀಡಿದ್ದು, ನಿಸ್ಪಕ್ಷಪಾತ ತನಿಖೆಗೆ ಆಗ್ರಹಿಸಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ, ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಎಸ್‌.ಈ. ಸುಧೀಂದ್ರ ಸೇರಿದಂತೆ ಕಾಂಗ್ರೆಸ್‌ ನಾಯಕರ ನಿಯೋಗ ಮಂಗಳವಾರ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ಬಿಜೆಪಿಯ ಇಬ್ಬರೂ ಅಭ್ಯರ್ಥಿಗಳ ವಿರುದ್ಧ ಪ್ರತ್ಯೇಕ ದೂರುಗಳನ್ನು ನೀಡಿದೆ.

'ಮಾನ್ಪಡೆ ಸಾವಿಗೆ ನಾವು ಕಾರಣರಾಗಿದ್ರೆ, ಒಂದೂ ಕಾಲು ಲಕ್ಷ ಜನ ಸತ್ತರಲ್ಲ ಯಾರು ಹೊಣೆ'?

ಹಿಂದಿನ ಮೈತ್ರಿ ಸರ್ಕಾರದ ಅವಧಿಯಲ್ಲಿ ಆಪರೇಷನ್‌ ಕಮಲದ ಬಿಜೆಪಿಯವರು ಕಾಂಗ್ರೆಸ್‌ ಮತ್ತು ಜೆಡಿಎಸ್‌ನ 17 ಶಾಸಕರಿಗೆ ದೊಡ್ಡ ಮೊತ್ತದ ಹಣ ಹಾಗೂ ಮುಂದಿನ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ ನೀಡಿ ಖರೀದಿಸಿದ್ದಾರೆ. ಈ ಕಪ್ಪುಹಣವನ್ನು ಬಳಸಿ ಕ್ಷೇತ್ರದಲ್ಲಿ ಅಭ್ಯರ್ಥಿ ಹಾಗೂ ಅವರ ಬೆಂಬಲಿಗರು ಮತದಾರರಿಗೆ ಹಣ, ಬೆಲೆಬಾಳುವ ವಸ್ತುಗಳನ್ನು ನೀಡಿ ಮತ ಖರೀದಿ ನಡೆಸುತ್ತಿರುವಂತೆ ಕಂಡು ಬರುತ್ತಿದೆ. ಹಾಗಾಗಿ ಈ ಹಣ ಎಲ್ಲಿಂದ ಬಂತು ಎಂಬ ಬಗ್ಗೆ ಸ್ಪಕ್ಷಪಾತ ತನಿಖೆ ನಡೆಸಬೇಕೆಂದು ಕಾಂಗ್ರೆಸ್‌ ಕೋರಿದೆ.

ಶಿರಾ ಕ್ಷೇತ್ರದ ಅಭ್ಯರ್ಥಿ ರಾಜೇಶ್‌ಗೌಡ ಅವರು ಹಾಸನ ಎಂಎಲ್‌ಎ ಪ್ರೀತಂ ಗೌಡ ಹಾಗೂ ಬಿಜೆಪಿಯ ಬೆಂಬಲಿಗರು, ಕಾರ್ಯಕರ್ತರ ಮೂಲಕ ಕ್ಷೇತ್ರದಲ್ಲಿ ಬಹಿರಂಗವಾಗಿಯೇ ಪ್ರತಿ ಓಟಿಗೆ 200 ರು. ಹಣ, ಹೆಂಡ ಹಂಚಿದ್ದಾರೆ. ಚುನಾವಣೆ ಮುನ್ನ ಪ್ರತಿ ಮತದಾರನಿಗೂ ಏನೇನು ತಲುಪಬೇಕೋ ಎಲ್ಲವೂ ತಲುಪುತ್ತದೆ ಎಂದು ಹೇಳಿ ಬಹಿರಂಗವಾಗಿಯೇ ಆಮಿಷವೊಡ್ಡಿದ್ದು, ಈ ವಿಡಿಯೋ ಸಹಿತ ಆಯೋಗಕ್ಕೆ ದೂರು ನೀಡಿರುವ ಕಾಂಗ್ರೆಸ್‌ ಈ ಬಗ್ಗೆಯೂ ತಕ್ಷಣ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಬೇಕೆಂದು ಆಯೋಗವನ್ನು ಆಗ್ರಹಿಸಿದೆ.