'ಮಾನ್ಪಡೆ ಸಾವಿಗೆ ನಾವು ಕಾರಣರಾಗಿದ್ರೆ, ಒಂದೂ ಕಾಲು ಲಕ್ಷ ಜನ ಸತ್ತರಲ್ಲ ಯಾರು ಹೊಣೆ'?
ಮಾರುತಿ ಮಾನ್ಪಡೆ ಅವರ ಸಾವಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕಾರಣ ಎನ್ನುವ ಬಿಜೆಪಿ ನಾಯಕನ ಆರೋಪದ ವಿರುದ್ದ ಸಿದ್ದು ತಿರುಗಿ ಬಿದ್ದಿದ್ದಾರೆ.
ಬೆಂಗಳೂರು, (ಅ. 27): ಮಾರುತಿ ಮಾನ್ಪಡೆ ಅವರ ಸಾವಿಗೆ ನಾನು ಮತ್ತು ಡಿ.ಕೆ.ಶಿವಕುಮಾರ್ ಕಾರಣ ಎನ್ನುವ ಆರೋಪ ಮಾಡಿರುವ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮಾರುತಿ ಮಾನ್ಪಡೆ ಅವರ ಸಾವಿಗೆ ನಾನು ಮತ್ತು ಡಿ.ಕೆ.ಶಿವಕುಮಾರ್ ಕಾರಣ ಎಂಬ ಬಾಲಿಷ ಹೇಳಿಕೆಯನ್ನು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ನೀಡಿದ್ದಾರೆ. ಹಾಗಿದ್ದರೆ ದೇಶದಲ್ಲಿ ಒಂದು ಕಾಲು ಲಕ್ಷ ಜನ ಕೊರೋನಾಕ್ಕೆ ಬಲಿಯಾಗಿದ್ದಾರಲ್ಲಾ ಅದಕ್ಕೆ ಯಾರು ಹೊಣೆ ಎಂದು ಹೇಳುವಿರಾ ಎಂದು ಸದಾನಂದ ಗೌಡರನ್ನು ಪ್ರಶ್ನಿಸಿದ್ದಾರೆ.
ಮಾರುತಿ ಮಾನ್ಪಡೆ ಸಾವಿಗೆ ಸಿದ್ದರಾಮಯ್ಯ-ಡಿಕೆಶಿ ಕಾರಣ: ಹೀಗೊಂದು ಗಂಭೀರ ಆರೋಪ
ಕೊರೊನಾ ವಿರುದ್ಧ ಹೋರಾಡಬೇಕಾಗಿದ್ದ ಕೇಂದ್ರ ಸರ್ಕಾರ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ಜನವಿರೋಧಿ ಕಾನೂನುಗಳನ್ನು ಜಾರಿಗೆ ತಂದದ್ದೇ ಮಾನ್ಪಡೆಯವರೂ ಸೇರಿದಂತೆ ಅನೇಕ ಹೋರಾಟಗಾರರ ಸಾವಿಗೆ ಕಾರಣ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆಗಳನ್ನು ವಿರೋಧಿಸಲು ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಆಗ ಕಾಂಗ್ರೆಸ್ ನಾಯಕರು ಬಾಡಿಗೆ ಬಂಟರನ್ನು ಕರೆತಂದಿದ್ದರು. ಕಾರ್ಮಿಕ ನಾಯಕ ಮಾರು ಮಾನ್ಪಡೆ ಅವರು ಆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರಣ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದರು. ಅವರ ಸಾವಿಗೆ ನೇರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ಕಾರಣ ಎಂದು ಡಿವಿಎಸ್ ಆರೋಪಿಸಿದ್ದರು.