ರಾಹುಲ್ ಗಾಂಧಿ, ಪ್ರಿಯಾಂಕಾ ಸ್ಪರ್ಧೆಗೆ ಕಾಂಗ್ರೆಸ್ ಸಮಿತಿ ಪಟ್ಟು
ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಹುಲ್ ಅಮೇಠಿಯಿಂದ ಹಾಗೂ ಪ್ರಿಯಾಂಕಾ ರಾಯ್‌ಬರೇಲಿಯಿಂದ ಸ್ಪರ್ಧಿಸಬೇಕು ಎಂಬ ಒಕ್ಕೊರಲ ಆಗ್ರಹ ಕೇಳಿಬಂತು. ಅಂತಿಮ ನಿರ್ಣಯವನ್ನು ಅಧ್ಯಕ್ಷರಿಗೆ ಬಿಡಲಾಯಿತು.
ನವದೆಹಲಿ(ಏ.28): ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದ ಉತ್ತರ ಪ್ರದೇಶದ ರಾಯ್‌ಬರೇಲಿ ಹಾಗೂ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕಳೆದ ಚುನಾವಣೆಯಲ್ಲಿ ಪರಾಭವಗೊಂಡ ಅದೇ ರಾಜ್ಯದ ಅಮೇಠಿಯ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಬಗ್ಗೆ ಪಕ್ಷದ ಚುನಾವಣಾ ಸಮಿತಿ ಶನಿವಾರ ಮಹತ್ವದ ಸಭೆ ನಡೆಸಿತು.
ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಹುಲ್ ಅಮೇಠಿಯಿಂದ ಹಾಗೂ ಪ್ರಿಯಾಂಕಾ ರಾಯ್‌ಬರೇಲಿಯಿಂದ ಸ್ಪರ್ಧಿಸಬೇಕು ಎಂಬ ಒಕ್ಕೊರಲ ಆಗ್ರಹ ಕೇಳಿಬಂತು. ಅಂತಿಮ ನಿರ್ಣಯವನ್ನು ಅಧ್ಯಕ್ಷರಿಗೆ ಬಿಡಲಾಯಿತು ಎಂದು ಮೂಲಗಳು ಹೇಳಿವೆ.
ಸಂವಿಧಾನ ಬದಲಿಸಲು ಬಿಜೆಪಿ ಯತ್ನ: ರಾಹುಲ್ ಗಾಂಧಿ
ಶೀಘ್ರ ನಿರ್ಣಯ- ಖರ್ಗೆ:
ಇದಕ್ಕೂ ಮುನ್ನ ಗುವಾಹಟಿಯಲ್ಲಿ ಮಾತನಾಡಿದ ಖರ್ಗೆ, ಎರಡೂ ಕ್ಷೇತ್ರಗಳ ಅಭ್ಯರ್ಥಿಯನ್ನು ಕೆಲ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದರು. ಇದೇ ವೇಳೆ ಕಾಂಗ್ರೆಸ್ ನಾಯಕರು ಕ್ಷೇತ್ರ ಬದಲಿಸುವ ಕುರಿತಾದ ಟೀಕೆಗೆ ಉತ್ತರಿಸಿದ ಅವರು, ‘ಕಾಂಗ್ರೆಸ್ ನಾಯಕರು ಕ್ಷೇತ್ರ ಬದಲಿಸುವುದನ್ನು ಪ್ರಶ್ನಿಸುವವರು ವಾಜಪೇಯಿ ಹಾಗೂ ಅಡ್ವಾಣಿ ಎಷ್ಟು ಬಾರಿ ತಮ್ಮ ಕ್ಷೇತ್ರ ಬದಲಿಸಿದ್ದಾರೆ ಎಂಬುದನ್ನೂ ನನಗೆ ಹೇಳಬೇಕು’ ಎಂದು ತಿರುಗೇಟು ನೀಡಿದರು.