ಶ್ರೀಶೈಲ ಮಠದ

ಬೆಳಗಾವಿ(ಏ.13): ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ್‌ ಅಂಗಡಿ ಅವರ ಅಕಾಲಿಕ ನಿಧನದಿಂದ ಎದುರಾದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಕುತೂಹಲಕಾರಿ ತಿರುವು ದೊರಕಿದ್ದು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸತೀಶ್‌ ಜಾರಕಿಹೊಳಿ ಕಣಕ್ಕೆ ಇಳಿದ ನಂತರ. ವಾಸ್ತವವಾಗಿ ಇದು ಬಿಜೆಪಿ ಕ್ಷೇತ್ರ. ಜತೆಗೆ ಸುರೇಶ್‌ ಅಂಗಡಿ ಪತ್ನಿ ಮಂಗಲ ಅಂಗಡಿ ಅವರನ್ನು ಕಣಕ್ಕೆ ಇಳಿಸಿ ಅನುಕಂಪದ ಲಾಭ ಗಿಟ್ಟಿಸಲು ಬಿಜೆಪಿ ಹವಣಿಸಿದೆ. ಹೀಗಾಗಿ ಕ್ಷೇತ್ರ ಬಿಜೆಪಿಗೆ ಸುಲಭದ ಬಾಬ್ತು ಎಂಬ ಭಾವನೆ ಕಾಂಗ್ರೆಸ್ಸಿನಿಂದ ಸತೀಶ್‌ ಜಾರಕಿಹೊಳಿ ಕಣಕ್ಕೆ ಇಳಿದ ನಂತರ ಬದಲಾಗಿದೆ. ರಾಜ್ಯ ರಾಜಕಾರಣದಲ್ಲೇ ಇರಬಯಸಿದ್ದ ಸತೀಶ್‌ ಜಾರಕಿಹೊಳಿ ಲೋಕಸಭಾ ಕಣಕ್ಕೆ ಇಳಿಯಲು ಕಾರಣವೇನು? ಹೈಕಮಾಂಡ್‌ ಒತ್ತಡ ತೀವ್ರವಾಗಿತ್ತೆ? ಜಾರಕಿಹೊಳಿ ಸಹೋದರರು ಈ ಚುನಾವಣೆಯಲ್ಲಿ ಯಾವ ಪಾತ್ರ ವಹಿಸಲಿದ್ದಾರೆ ಎಂಬಿತ್ಯಾದಿ ಪ್ರಶ್ನೆಗಳಿಗೆ ‘ಕನ್ನಡಪ್ರಭ’ ಜತೆ ಮಾತನಾಡಿ ಸತೀಶ್‌ ಜಾರಕಿಹೊಳಿ ಮುಕ್ತ ಉತ್ತರ ನೀಡಿದ್ದಾರೆ.

ರಾಷ್ಟ್ರ ರಾಜಕಾರಣದತ್ತ ಚಿತ್ತ ಹರಿಸಲು ಕಾರಣ? ಹೈಕಮಾಂಡ್‌ ಒತ್ತಡ ಅಥವಾ ರಾಜ್ಯ ನಾಯಕರ ಚಿತಾವಣೆ ಇತ್ತೆ?

ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಪಕ್ಷವು ಪ್ರಬಲ ಅಭ್ಯರ್ಥಿಯನ್ನಾಗಿ ನನ್ನನ್ನು ಕಣಕ್ಕಿಳಿಸಿದೆ. ಪಕ್ಷದ ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧನಾಗಿಯೇ ನಾನು ಸ್ಪರ್ಧಿಸಿದ್ದೇನೆ. ಪಕ್ಷದ ತೀರ್ಮಾನವನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ.

'ಅರುಣ್‌ ಸಿಂಗ್‌ಗೆ ಭಾರತದ ಇತಿಹಾಸವೇ ಗೊತ್ತಿಲ್ಲ'

ರಮೇಶ್‌, ಬಾಲಚಂದ್ರ ಪ್ರಚಾರದಿಂದ ದೂರವಿದ್ದಾರೆ. ಇದು ನಿಮ್ಮ ಲಾಭಕ್ಕಾಗಿಯೇ?

ಹೌದು, ಖಂಡಿತವಾಗಿಯೂ ನನಗೆ ಅನುಕೂಲವೇ ಆಗುತ್ತದೆ. ಗೋಕಾಕ್‌ ಮತ್ತು ಅರಭಾವಿ ವಿಧಾನಸಭೆ ಕ್ಷೇತ್ರಗಳಲ್ಲಿ ಜಾರಕಿಹೊಳಿ ಕುಟುಂಬದ ವಿಚಾರದಲ್ಲಿ ಪಕ್ಷ ಬರುವುದೇ ಇಲ್ಲ. ಚುನಾವಣಾ ಕಣದಲ್ಲಿರುವುದು ಜಾರಕಿಹೊಳಿ ಒಬ್ಬರೇ. ಹಾಗಾಗಿ, ನಮ್ಮ ಕುಟುಂಬ ನೋಡಿ ಜನರು ನಮಗೆ ಮತ ಹಾಕುತ್ತಾರೆ.

ಬಿಜೆಪಿ ಅಭ್ಯರ್ಥಿ ಪರ ಅನುಕಂಪದ ಅಲೆ ಎದ್ದಿದೆಯಂತೆ?

ಕ್ಷೇತ್ರದ ಮತದಾರರು ಅನುಕಂಪಕ್ಕೆ ಮರಳಾಗುವುದಿಲ್ಲ. ಅಭಿವೃದ್ಧಿ ನೋಡಿ ಮತ ಹಾಕುತ್ತಾರೆ. ಇಡೀ ಜಿಲ್ಲೆ, ರಾಜ್ಯಕ್ಕೆ ನಾನು ಜನರ ಸೇವೆಗೆ ಲಭ್ಯ ಇರುವ ರಾಜಕಾರಣಿ ಎಂಬುದನ್ನು ಮತದಾರರಿಗೆ ಮನವರಿಕೆ ಮಾಡುತ್ತಿದ್ದೇನೆ. ಎಲ್ಲ ಸಮುದಾಯದ ಜನರು ನಮ್ಮೊಂದಿಗೆ ಇದ್ದಾರೆ.

'ಒತ್ತಾಯ ಪೂರ್ವಕ ಸತೀಶರನ್ನು ಕಣಕ್ಕಿಳಿಸಿದ ಸಿದ್ದು,ಡಿಕೆಶಿ'

ನಿಮ್ಮ ಕಿರಿಯ ಸಹೋದರ ಲಖನ್‌ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಾರಂತಲ್ಲ?

ಲಖನ್‌ ಜಾರಕಿಹೊಳಿ ಅವರನ್ನು ಬಿಜೆಪಿ ಮುಖಂಡರು ಭೇಟಿಯಾಗಿರಬಹುದು. ಆದರೆ, ಲಖನ್‌ ಅವರ ನಿಲುವು ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅದನ್ನು ನಾವು ಕಾದು ನೋಡಬೇಕು ಅಷ್ಟೆ.

ಚುನಾವಣಾ ಪ್ರಚಾರದಲ್ಲಿ ನಿಮ್ಮ ಮಕ್ಕಳು ಸಕ್ರಿಯರಾಗಿದ್ದಾರೆ. ಅವರೂ ರಾಜಕೀಯಕ್ಕೆ ಬರುತ್ತಾರಾ?

ನನ್ನ ಮಕ್ಕಳಿಬ್ಬರು ರಾಜಕಾರಣಿಗಳಾಗಿ ಪರಿವರ್ತನೆಯಾಗಬೇಕಿದೆ. ಹೀಗಾಗಿ ಅವರನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದೇವೆ. ಪುತ್ರಿ ಪ್ರಿಯಾಂಕಾ, ಪುತ್ರ ರಾಹುಲ್‌ಗೆ ಇನ್ನೂ 3-4 ವರ್ಷಗಳ ಅವಧಿ ಇದೆ. ಅವರಿಬ್ಬರಿಗೂ ತಳಮಟ್ಟದ ರಾಜಕೀಯದ ಅರಿವು ಮೂಡಿಸಬೇಕಿದೆ.

ಚುನಾವಣಾ ಪ್ರಚಾರ ಹೇಗೆ ನಡೆಯುತ್ತಿದೆ?

ಇದು ಲೋಕಸಭೆ ಚುನಾವಣೆ. ಇಲ್ಲಿ ಕ್ಷೇತ್ರದ ಜನರೇ ನನ್ನ ಪರವಾಗಿ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ. ತಮ್ಮ ತಮ್ಮ ಸಮುದಾಯದವರಲ್ಲಿ, ಸಂಬಂಧಿಕರಲ್ಲಿ ನನಗೆ ಮತ ನೀಡುವಂತೆ ಮತಯಾಚನೆ ಮಾಡುತ್ತಿದ್ದಾರೆ.