ಅರುಣ್‌ ಸಿಂಗ್‌ ಕರ್ನಾಟಕದಲ್ಲಿ ಕಾಲಿಡಬೇಕಾದರೆ, ಬಸವಣ್ಣನವರ ಇತಿಹಾಸ ತಿಳಿದುಕೊಳ್ಳಬೇಕು| ಮೌಢ್ಯ ವಿರೋಧಿ ಹೋರಾಟ ಆರಂಭವಾಗಿದ್ದು 6ನೇ ಶತಮಾನದಲ್ಲಿ. ಸತೀಶ್‌ ಜಾರಕಿಹೊಳಿ ಆರಂಭ ಮಾಡಿದ್ದಲ್ಲ. ಬಸವಣ್ಣನವರು| ಬಿಜೆಪಿಗರಿಂದಲೇ ಕೋಮುಗಲಭೆ: ಜಾರಕಿಹೊಳಿ| 

ಬೆಳಗಾವಿ(ಏ.12): ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರಿಗೆ ಭಾರತದ ಇತಿಹಾಸ ಗೊತ್ತಿಲ್ಲ. ಅವರು ಕರ್ನಾಟಕಕ್ಕೆ ಬರುವ ಮೊದಲು ಬಸವಣ್ಣನವರ ಇತಿಹಾಸ ತಿಳಿದುಕೊಂಡು ಬರಬೇಕು ಎಂದು ಕಾಂಗ್ರೆಸ್‌ ಅಭ್ಯರ್ಥಿ ಸತೀಶ್‌ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಕಾಂಗ್ರೆಸ್‌ ಅಭ್ಯರ್ಥಿ ಹಿಂದು ವಿರೋಧಿ ಎಂಬ ಹೇಳಿಕೆಗೆ ಭಾನುವಾರ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಅರುಣ್‌ ಸಿಂಗ್‌ ಕರ್ನಾಟಕದಲ್ಲಿ ಕಾಲಿಡಬೇಕಾದರೆ, ಬಸವಣ್ಣನವರ ಇತಿಹಾಸ ತಿಳಿದುಕೊಳ್ಳಬೇಕು. ಯಾವ ರೀತಿಯಾಗಿ ಬಸವಣ್ಣ ಹೋರಾಟ ಮಾಡಿದ್ದಾರೆ ಎಂಬುವುದನ್ನು ಓದಿಕೊಳ್ಳಬೇಕು. ಮೌಢ್ಯ ವಿರೋಧಿ ಹೋರಾಟ ಆರಂಭವಾಗಿದ್ದು 6ನೇ ಶತಮಾನದಲ್ಲಿ. ಸತೀಶ್‌ ಜಾರಕಿಹೊಳಿ ಆರಂಭ ಮಾಡಿದ್ದಲ್ಲ. ಬಸವಣ್ಣನವರು 12ನೇ ಶತಮಾನದಲ್ಲಿ ಮಾಡಿದ್ದಾರೆ. ಡಾ.ಬಿ.ಆರ್‌.ಅಂಬೇಡ್ಕರ ಅವರು ಸಂವಿಧಾನದಲ್ಲಿ ಬರೆದಿದ್ದಾರೆ. ಅವರ ವಿಚಾರಗಳನ್ನು ನಾವು ಅನುಸರಿಸುತ್ತಿದ್ದೇವೆ. ಅರುಣ್‌ಸಿಂಗ್‌ ಏನೇ ಕೇಳಬೇಕಾದರು ಅವರನ್ನೇ ಕೇಳಬೇಕು ಎಂದು ಹೇಳಿದರು.

'ಬೈ ಎಲೆಕ್ಷನ್‌ ಬಳಿಕ ನಾಲಾಯಕ್‌ ಬಿಜೆಪಿ ಸರ್ಕಾರ ಪತನ'

ಬಿಜೆಪಿಗರಿಂದಲೇ ಕೋಮುಗಲಭೆ:

ಕೋಮುಗಲಭೆ ಮಾಡುವವರು ಬಿಜೆಪಿಯವರು, ಕಾಂಗ್ರೆಸ್‌ನವರಿಂದ ಅಲ್ಲ. ಬಿಜೆಪಿಯ ಯಾವುದೇ ನಾಯಕರು, ರಾಷ್ಟ್ರ ನಾಯಕರು ಬಂದರೂ ಸಹ ಫಲಿತಾಂಶ ಬದಲಾಯಿಸಲು ಸಾಧ್ಯವಿಲ್ಲ. ಈಗಾಗಲೇ ಜನರು ಯಾರಿಗೆ ವೋಟ್‌ ಮಾಡಬೇಕು ಎಂಬುವುದನ್ನು ನಿರ್ಧರಿಸಿದ್ದಾರೆ. ಬೆಳಗಾವಿ ಮತದಾರರ ನಿರ್ಧಾರವನ್ನು ಬದಲಾಯಿಸಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರದ ಏಳು ವರ್ಷದ ಆಡಳಿತ ಅವಧಿಯಲ್ಲಿಯೇ ಹೆಚ್ಚು ಉಗ್ರರ ದಾಳಿಗಳಾಗಿವೆ. ಕಾಂಗ್ರೆಸ್‌ ಸರ್ಕಾರದಲ್ಲೂ ಆಗಿವೆ. ಆದರೆ, ಅಷ್ಟೊಂದು ಆಗಿಲ್ಲ. ಕಾಂಗ್ರೆಸ್‌ ಅವಧಿಯಲ್ಲಿ ಹುತಾತ್ಮರಾದ ಸೈನಿಕರ ಸಂಖ್ಯೆ ಕಡಿಮೆ. ಈಗಿನ ಸರ್ಕಾರದಲ್ಲಿಯೇ ಹೆಚ್ಚು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ದೂರಿದರು.

ನನ್ನ ಗೆಲುವೇ ನಿಶ್ಚಿತ: ಸತೀಶ

ಬಿಜೆಪಿ ಉಪಚುನಾವಣೆ ಪ್ರಚಾರದಲ್ಲಿ ಯಾವುದೇ ವಿಷಯಗಳಿಲ್ಲ. ಧರ್ಮ, ಜಾತಿ, ಚೀನಾ, ಬಾಂಗ್ಲಾದೇಶ ಅಷ್ಟೇ ಚುನಾವಣೆ ವಿಷಯವಾಗಿವೆ. ಚುನಾವಣೆ ಪ್ರಚಾರಕ್ಕೆ ಬಂದಿದ್ದಾರೆ, ಬಂದು ಏನೋ ಹೇಳಬೇಕು ಅಂತಾ, ಏನು ಬೇಕು ಅದನ್ನು ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಅಲ್ಲದೇ ಬಿಜೆಪಿಯ ರಾಜ್ಯ ನಾಯಕರು ಅಷ್ಟೇ ಅಲ್ಲ ರಾಷ್ಟ್ರ ನಾಯಕರನ್ನು ಕರೆದುಕೊಂಡು ಬಂದು ಪ್ರಚಾರ ಮಾಡಲಿ. ಈ ಬಾರಿಯ ಫಲಿತಾಂಶ ಬಲಾವಣೆ ಮಾಡಲು ಸಾಧ್ಯವಿಲ್ಲ. ನನ್ನ ಗೆಲುವು ನಿಶ್ಚಿತ ಎಂದರು.